ಭಟ್ಕಳದಲ್ಲಿ ಐಎನ್‌ಎಫ್‌ನಿಂದ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಚಾಲನೆಕನ್ನಡಪ್ರಭ ವಾರ್ತೆ ಭಟ್ಕಳ
ನಂತರ ಮಾತನಾಡಿದ ಸಚಿವರು ಐಎನ್‌ಎಫ್ ಆರಂಭಿಸಿದ ಈ ಪರಿಸರ ಸಂರಕ್ಷಣಾ ಕಾರ್ಯವನ್ನು ಶ್ಲಾಘಿಸಿ, ಸ್ವಚ್ಛ ಗಾಳಿ ಮತ್ತು ಆಮ್ಲಜನಕ ಪಡೆಯಲು ವೃಕ್ಷಾರೋಪಣೆ ಅತ್ಯಂತ ಅಗತ್ಯವಿದೆ. ಭಟ್ಕಳವನ್ನು ಸಂಪೂರ್ಣ ಹಸಿರಾಗಿ ಉಳಿಸಿಕೊಳ್ಳುವುದು ಎಲ್ಲ ನಾಗರಿಕರ ಸಂಯುಕ್ತ ಹೊಣೆಗಾರಿಕೆಯಾಗಿದೆ. ಹಿಂದೆ ಭಟ್ಕಳ ಸಹಜವಾಗಿ ಹಸಿರಾಗಿದ್ದ ನಗರವಾಗಿತ್ತು, ಆದರೆ ಮಾನವ ಸ್ವಾರ್ಥದಿಂದಾಗಿ ಹಸಿರಿನ ನಾಶವಾಗಿದೆ; ಇದನ್ನು ಪುನಃ ಪುನರ್ ಸ್ಥಾಪಿಸುವುದು ಅವಶ್ಯಕವಾಗಿದೆ ಎಂದರು.
ಮರಗಳ ಸಂರಕ್ಷಣೆ ಮತ್ತು ಪೋಷಣೆ ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.ಮಾನವನು ಕೆಲಕಾಲ ಆಹಾರವಿಲ್ಲದೇ ಬದುಕಬಹುದು, ಆದರೆ ಉಸಿರಾಟ ನಿಂತರೆ ಕ್ಷಣಮಾತ್ರವೂ ಬದುಕಲು ಸಾಧ್ಯವಿಲ್ಲ. ವೃಕ್ಷಾರೋಪಣೆಯಂತಹ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಐಎನ್‌ಎಫ್ ಅಧ್ಯಕ್ಷ ಅಫ್ತಾಬ್ ಹುಸೇನ್ ಕೋಲಾ ಮಾತನಾಡಿ, ವೃಕ್ಷಾರೋಪಣೆಯ ಮೂಲಕ ಸ್ವಚ್ಛ ಪರಿಸರ ನಿರ್ಮಿಸಿ ಸಾರ್ವಜನಿಕರಿಗೆ ಶುದ್ಧ ಆಮ್ಲಜನಕ ಒದಗಿಸುವುದೇ ಈ ಅಭಿಯಾನದ ಮುಖ್ಯ ಗುರಿಯಾಗಿದೆ. ಹಸಿರೀಕರಣದಿಂದ ನಗರದ ಸೌಂದರ್ಯವರ್ಧನೆಗೂ ಇದು ಸಹಕಾರಿಯಾಗಲಿದೆ. ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಪ್ರಕೃತಿ ಸಂಪನ್ಮೂಲಗಳ ಅತಿಯಾದ ದುರುಪಯೋಗದ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಎಲ್ಲರ ಸಾಮೂಹಿಕ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.ಖಾಜಿ ಮೌಲಾನಾ ಖ್ವಾಜಾ ಅಕ್ರಮಿ ಮದನಿ ಮಾತನಾಡಿದರು.
ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನೌಡ, ಮಜ್ಲಿಸ್ ಇಸ್ಲಾಹ್–ಒ–ತಂಝೀಮ್ ಭಟ್ಕಳ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಅಂಜುಮನ್ ಹಾಮಿ–ಎ–ಮುಸ್ಲಿಮೀನ್ ಭಟ್ಕಳ ಅಧ್ಯಕ್ಷ ಯೂನುಸ್ ಕಾಜಿಯಾ, ರಾಬಿತಾ ಸೊಸೈಟಿಯ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಉಮರ್ ಫಾರೂಕ್ ಮಿಸ್ಬಾಹ್, ಅತೀಕ್ ಮುನೀರಿ, ಖಮರ್ ಸಾದಾ, ಜೈಲಾನಿ ಮೊಹ್ತಿಶಂ, ಐಎನ್‌ಎಫ್‌ನ ಇತರ ಪದಾಧಿಕಾರಿಗಳು ಹಾಗೂ ಗಲ್ಫ್ ಸಂಘಟನೆಗಳ ಹಲವಾರು ಪ್ರತಿನಿಧಿಗಳು ಇದ್ದರು. ಐಎನ್‌ಎಫ್ ಸಕ್ರಿಯ ಸದಸ್ಯ ಘುಫ್ರಾನ್ ಲಂಕಾ ಸ್ವಾಗತಿಸಿ ನಿರೂಪಿಸಿದರು. ಐಎನ್‌ಎಫ್ ಗ್ರೀನ್ ಭಟ್ಕಳ ಅಭಿಯಾನದ ಸಂಯೋಜಕ ಎಸ್.ಎಂ. ಅರ್ಷದ್ ವೃಕ್ಷಾರೋಪಣೆ ಹಾಗೂ ನಗರ ಸ್ವಚ್ಛತೆ ಕುರಿತ ಐಎನ್‌ಎಫ್ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಪ್ರಧಾನ ಕಾರ್ಯದರ್ಶಿ ಆದಿಲ್ ನಾಗರಮಠ ವಂದಿಸಿದರು.