ಕಾಂಕ್ರೀಟ್‌ ಕಾಡುಗಳಿಂದಾಗಿ ಗಿಡ-ಮರಗಳೇ ನಾಶ

KannadaprabhaNewsNetwork |  
Published : Dec 27, 2024, 12:46 AM IST
25ಕೆಡಿವಿಜಿ8-ದಾವಣಗೆರೆ ತಾ. ಕಬ್ಬೂರು ಗ್ರಾಮದ ಕೃಷಿ ಕುಟೀರದಲ್ಲಿ ಕೆ.ವಿ.ಗಂಗಾಧರಪ್ಪ ಸ್ಮರಣಾರ್ಥ ಕೃಷಿ ಉತ್ಸವ ಹಾಗೂ ಕಾಯಕ ಜೀವಿ ಸ್ಮರಣೋತ್ಸವ ಉದ್ಘಾಟಿಸಿದ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ. | Kannada Prabha

ಸಾರಾಂಶ

ಮರಗಳ ನಾಶದಿಂದ ಏನೆಲ್ಲಾ ಆಗುತ್ತಿದೆ ಎಂಬುದನ್ನು ದೆಹಲಿಯಲ್ಲಿ ನಾವು ಕಾಣುತ್ತಿದ್ದೇವೆ. ಇದೇ ಪರಿಸ್ಥಿತಿ ಮುಂದುವರಿದರೆ ಆಮ್ಲಜನಕ ಸಿಲಿಂಡರ್‌ಗಳನ್ನು ಬೆನ್ನಿಗೇರಿಸಿಕೊಂಡು ಓಡಾಡುವ ದುಸ್ಥಿತಿ ಬಂದೀತು ಎಂದು ಸಾಣೆಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.

- ಕಬ್ಬೂರಲ್ಲಿ ಕೃಷಿ ಉತ್ಸವ, ಕಾಯಕಜೀವಿ ಸ್ಮರಣೋತ್ಸವದಲ್ಲಿ ಸಾಣೆಹಳ್ಳಿ ಶ್ರೀ ಕಳವಳ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮರಗಳ ನಾಶದಿಂದ ಏನೆಲ್ಲಾ ಆಗುತ್ತಿದೆ ಎಂಬುದನ್ನು ದೆಹಲಿಯಲ್ಲಿ ನಾವು ಕಾಣುತ್ತಿದ್ದೇವೆ. ಇದೇ ಪರಿಸ್ಥಿತಿ ಮುಂದುವರಿದರೆ ಆಮ್ಲಜನಕ ಸಿಲಿಂಡರ್‌ಗಳನ್ನು ಬೆನ್ನಿಗೇರಿಸಿಕೊಂಡು ಓಡಾಡುವ ದುಸ್ಥಿತಿ ಬಂದೀತು ಎಂದು ಸಾಣೆಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಕಬ್ಬೂರು ಗ್ರಾಮದ ಕೃಷಿ ಕುಟೀರದಲ್ಲಿ ದಿವಂಗತ ಕೆ.ವಿ.ಗಂಗಾಧರಪ್ಪ ಸ್ಮರಣಾರ್ಥ ಕೃಷಿ ಉತ್ಸವ ಹಾಗೂ ಕಾಯಕಜೀವಿ ಸ್ಮರಣೋತ್ಸವದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರಕೃತಿ ಸಹಜ ಕಾಡುಗಳು ಕಣ್ಮರೆಯಾಗಿ, ಮಾನವ ನಿರ್ಮಿತ ಕಾಂಕ್ರೀಟ್ ಕಾಡುಗಳು ಹೆಚ್ಚಾಗುತ್ತಲೇ ಇವೆ. ಪರಿಣಾಮ ಗಿಡ ಮರಗಳೇ ಇಲ್ಲದ ಸ್ಥಿತಿ ಬರುತ್ತಿದೆ ಎಂದರು.

ವರದಿಯೊಂದರ ಪ್ರಕಾರ ಒಂದು ಮರ ತನ್ನ ಜೀವಿತಾವದಿಯಲ್ಲಿ ಸುಮಾರು ₹15 ಲಕ್ಷ ಮೌಲ್ಯದಷ್ಟು ಸಾರ್ವಜನಿಕ ಸೇವೆ ನೀಡುತ್ತದೆ. ಈಗ ಇದರ ಮೌಲ್ಯ ಇನ್ನೂ ಹೆಚ್ಚಾಗಿದೆ. ಗಿಡ- ಮರಗಳು ಅಶುದ್ಧ ಗಾಳಿ ಹೀರಿಕೊಂಡು, ಶುದ್ಧ ಗಾಳಿ ನೀಡುತ್ತವೆ. ದಿವಂಗತ ಕೆ.ವಿ.ಗಂಗಾಧರಪ್ಪ ಅವರಿಗೆ ಇದೆಲ್ಲಾ ತಿಳಿದಿತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ, ಪುಣ್ಯಕಾರ್ಯವೆಂಬಂತೆ ಗಿಡ ನೆಟ್ಟರು. ಅದು ಇಂದು ನೆರಳಿನ ಜೊತೆಗೆ ಪರಿಸರವನ್ನು ಸಂರಕ್ಷಣೆ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಅಪಾರ ದೈವಭಕ್ತಿ ಹೊಂದಿದ್ದ ಗಂಗಾಧರಪ್ಪ ಮೂಢನಂಬಿಕೆಗೆ ಬಲಿಯಾಗಲಿಲ್ಲ. ಅಂದಿನ ಭೂತ ಬಿಡಿಸುವ ಪ್ರಸಂಗದಲ್ಲಿ ಗಂಗಾಧರಪ್ಪ ವೈಚಾರಿಕತೆ ಮೆರೆದರು. ಇಂತಹ ವೈಚಾರಿಕ ಪ್ರಜ್ಞೆ ಗ್ರಾಮೀಣರಾದ ಗಂಗಾಧರಪ್ಪ ಅವರಲ್ಲಿತ್ತು. ಇದೆಲ್ಲಾ ಹಿರಿಯ ಗುರುಗಳ ಸಾಮೀಪ್ಯದ ಪರಿಮಾಣವಾಗಿತ್ತು. ಹಿರಿಯ ಗುರುಗಳು ದುಗ್ಗಾಣಿ ಮಠವನ್ನು ಶ್ರೀಮಂತಗೊಳಿಸಿದರು. ಮಠದಲ್ಲಿ ಕೃಷಿ ಅಳವಡಿಸಿದ್ದಲ್ಲದೇ, ಭಕ್ತರನ್ನೂ ಕೃಷಿಗೆ ಸೆಳೆದರು. ಇದರ ಫಲವಾಗಿ ಭಕ್ತರು ಆರ್ಥಿಕವಾಗಿ ಶ್ರೀಮಂತರಾಗುತ್ತಿದ್ದಾರೆ. ಆದರೆ, ನೈತಿಕ ಅಧಃಪತನವಾಗುತ್ತಿದೆ. ಇದೆಲ್ಲದರ ನಡುವೆ ನೈತಿಕ ನೆಲೆಗಟ್ಟು ಕುಸಿಯದಂತೆ ಬಾಳಿದವರು ಗಂಗಾಧರಪ್ಪ ಎಂದು ಮೆಚ್ಚುಗೆ ಸೂಚಿಸಿದರು.

ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಮಾತನಾಡಿ, ಗಂಗಾಧರಪ್ಪ ತಮ್ಮ ಜೀವಿತಾವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಹಾಗಾಗಿ ಸ್ಮರಣೀಯರಾಗಿದ್ದಾರೆ. ನಾನು ಕೃಷಿ ಸಚಿವ ಆಗಿದ್ದಾಗ ಸಾಕಷ್ಟು ಸುಧಾರಣೆ ತಂದಿದ್ದೆ. ಇಂದು ಅಡಕೆ ಗಿಡಗಳು ರೋಗ ಬಂದು ಸಾಯುತ್ತಿವೆ. ಅಡಕೆಯೊಂದಿಗೆ ಸುತ್ತಲೂ ಹಲಸು, ನೇರಳೆ ಗಿಡ ಹಚ್ಚುವ ಮೂಲಕ ಮನೆಗೆ ಲಕ್ಷ್ಮಿಯನ್ನು ಸ್ವಾಗತ ಮಾಡಿಕೊಳ್ಳಿ ಎಂದು ರೈತರಿಗೆ ಸಲಹೆ ಹೇಳಿದರು.

ಆನಗೋಡು ರೈತ ಹುತಾತ್ಮ ಸಮಿತಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ಡಿ.ಎಂ. ಶ್ರೀಧರಮೂರ್ತಿ, ರಾಷ್ಟ್ರೀಯ ತೋಟಗಾರಿಕೆ ಪ್ರಶಸ್ತಿ ಪುರಸ್ಕೃತ ಹೆದ್ನೆ ಎಚ್.ಬಿ. ಮುರುಗೇಶಪ್ಪ, ಪ್ರಗತಿಪರ ಕೃಷಿಕ ಹೊನ್ನನಾಯ್ಕನಹಳ್ಳಿ ಎಚ್.ಎಸ್. ಮುರುಗೇಂದ್ರಪ್ಪ, ರೈತ ಮುಖಂಡರಾದ ಆವರಗೆರೆ ರುದ್ರಮುನಿ, ಹೊನ್ನೂರು ಮುನಿಯಪ್ಪ, ಎಂಜಿನಿಯರ್ ಅತ್ತಿಗೆರೆ ಇಂದುಕುಮಾರ್ ಪಾಟೀಲ್ ಮಾತನಾಡಿದರು.

ಶಿಕ್ಷಕರು, ಯೋಧರು, ಕಬ್ಬೂರಿನ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಡಾ.ಆಶಾ ನಾಗರಾಜ ಕಬ್ಬೂರು ನಿರೂಪಣೆ ಮಾಡಿದರು. ಭೂಮೇಶ್ ಕಬ್ಬೂರು ವಂದಿಸಿದರು. ದಾವಣಗೆರೆ ಎಸ್.ಎಸ್. ಕೇರ್ ಟ್ರಸ್ಟ್‌ನಿಂದ ಎಸ್.ಎಸ್. ಆಸ್ಪತ್ರೆ ವೈದ್ಯರ ತಂಡ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿಕೊಟ್ಟಿತು.

ವೈದ್ಯಕೀಯ ತಪಾಸಣೆಗೆ ಕೊಡಗನೂರು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ ಸಹಕಾರ ನೀಡಿದರು. ರಕ್ತದಾನ ಶಿಬಿರ ನಡೆಯಿತು. ಮೊದಲ ದಿನ ಬಸಾಪುರ ಬಸವ ಕಲಾಲೋಕದ ಶಶಿಧರ್ ಬಸಾಪುರ ಮತ್ತು ತಂಡ ವಚನ ಗೀತೆ ಹಾಗೂ ಜಾನಪದ ಗೀತೆಗಳ ಸಂಗೀತ ರಸದೌತಣ ಉಣಬಡಿಸಿತು. ಕನ್ನಡ ನಾಡಿನಲ್ಲಿ ಮನೆ ಮಾತಾದ ಪುಣ್ಯಕೋಟಿ ಗೋವಿನ ಹಾಡಿಗೆ ಕಬ್ಬೂರು ಸರ್ಕಾರಿ ಪ್ರೌಢಶಾಲೆ ಮಕ್ಕಳು ಆಕರ್ಷಕ ನೃತ್ಯ ಮಾಡಿದರು. ಮಹಾಲಿಂಗಯ್ಯ ಮಾದಾಪುರ ನಿರ್ದೇಶನದಲ್ಲಿ ಮೂಡಿ ಬಂದ ನೃತ್ಯ ರೂಪಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

- - -

ಬಾಕ್ಸ್‌ * ಗಿಡಗಳ ನೆಟ್ಟು ನೀರುಣಿಸುತ್ತಿದ್ದ ತಂದೆ: ಮಲ್ಲಿಕಾರ್ಜುನ ಕಬ್ಬೂರು ಗಂಗಾಧರಪ್ಪ ಅವರ ಪುತ್ರ ಮಲ್ಲಿಕಾರ್ಜುನ ಕಬ್ಬೂರು ಮಾತನಾಡಿ, ಪುಟ್ಟ ಕೆಲಸದ ಮೂಲಕವೂ ಸಾರ್ವಜನಿಕವಾಗಿ ಗುರುತಿಸಿಕೊಳ್ಳಬಹುದು ಎಂಬುದನ್ನು ತಂದೆ ತೋರಿಸಿದ್ದಾರೆ. ಕೆರೆ ಏರಿ ಇಕ್ಕೆಲಗಳಲ್ಲಿ ಗಿಡಗಳ ನೆಡುವುದಷ್ಟೇ ಅಲ್ಲದೇ, ಅವುಗಳಿಗೆ ನಿತ್ಯ ನೀರುಣಿಸಿ ಬೆಳೆಸಿ, ಸಂರಕ್ಷಿಸಿದ್ದಾರೆ. ಹಲವರು ಟೀಕಿಸಿದರೂ ತಮ್ಮ ಕಾಯಕ ಮುಂದುವರಿಸಿ, ಪ್ರಕೃತಿ ಸಂರಕ್ಷಣೆಗೆ ಕಾಣಿಕೆ ನೀಡಿದ್ದಾರೆ. ಹಾಗಾಗಿ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಕೃಷಿ ಉತ್ಸವ ಹಾಗೂ ಕಾಯಕ ಜೀವಿ ಸ್ಮರಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅವರು ಹೆಸರಲ್ಲಿ ''''''''''''''''ಹಸಿರೆಲೆಯ ಉಸಿರು ಗಂಗಣ್ಣ'''''''''''''''' ಸ್ಮರಣ ಕೃತಿ ಲೋಕಾರ್ಪಣೆಗೊಳ್ಳುತ್ತಿದೆ ಎಂದರು.

- - - -25ಕೆಡಿವಿಜಿ8:

ಕಾರ್ಯಕ್ರಮವನ್ನು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ