ಕನ್ನಡಪ್ರಭ ವಾರ್ತೆ ಹುಣಸೂರು
2023-24ನೇ ಸಾಲಿಗಾಗಿ ಹುಣಸೂರು ರೋಟರಿ ಕ್ಲಬ್ 310ಕ್ಕೂ ಹೆಚ್ಚು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರೋಟರಿ ಪ್ರತಿಷ್ಠಿತ ಗೌರವಗಳಲ್ಲಿ ಒಂದಾದ ಪ್ಲಾಟಿನಂ ಪ್ಲಸ್ ಪ್ರಶಸ್ತಿ ಗಳಿಸುವ ಮೂಲಕ ಸಾಧನೆ ಮೆರೆದಿದೆ.ಇತ್ತೀಚಿಗೆ ಮೈಸೂರಿನ ನಾರ್ತ್ ಅವೆನ್ಯೂ ಹೋಟೆಲ್ ನಲ್ಲಿ ಆಯೋಜನೆಗೊಂಡಿದ್ದ ರೋಟರಿ ಜಿಲ್ಲೆ 3181ರ 2023-24ನೇ ಸಾಲಿನ ಪ್ರಶಸ್ತಿ ಪ್ರದಾನ ಚೈತ್ರಯಾತ್ರಾ ಸಮಾರಂಭದಲ್ಲಿ ಹುಣಸೂರು ರೋಟರಿ ಕ್ಲಬ್ ಅಧ್ಯಕ್ಷ ಚನ್ನಕೇಶವ ಮತ್ತವರ ತಂಡ ಪ್ರಶಸ್ತಿ ಸ್ವೀಕರಿಸಿದರು.
ಹುಣಸೂರು ರೋಟರಿ ಅಧ್ಯಕ್ಷ ಚನ್ನಕೇಶವ ಮಾತನಾಡಿ, ಹುಣಸೂರು ರೋಟರಿ ಸಂಸ್ಥೆ ಪ್ರಸ್ತುತ ಸಾಲಿನಲ್ಲಿ 310ಕ್ಕೂ ಹೆಚ್ಚು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿದೆ. ಮುಖ್ಯವಾಗಿ ಸರ್ವಿಸ್ ಪ್ರಾಜೆಕ್ಟ್ ವಿಭಾಗದಲ್ಲಿ ರೋಟರಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಬಹುಮಾನ, ಮೆಂಬರ್ ಷಿಪ್ ಡೆವಲಪ್ ಮೆಂಟ್ ವಿಭಾಗದಲ್ಲಿ ತೃತೀಯ ಬಹುಮಾನ, ಜಿಲ್ಲಾ ಪ್ರಾಜೆಕ್ಟ್ ಆದ ರಸ್ತೆ ಸುರಕ್ಷತೆ ವಿಭಾಗದಲ್ಲಿ ಸ್ಪೆಷಲ್ ಅಪ್ರೇಸಿಯೇಷನ್ ಮನ್ನಣೆ ದೊರಕಿದೆ. ವಿಶೇಷ ಅತಿಥಿಯಾಗಿ ಕನ್ನಡದ ಸಿನಿಮಾ ನಟಿ ಪ್ರಿಯಾಂಕ ತಿಮ್ಮಯ್ಯ ಭಾಗವಹಿಸಿ ಪ್ರಶಸ್ತಿ ವಿತರಿಸಿದರು.ಹುಣಸೂರು ರೋಟರಿ ಕ್ಲಬ್ ನಿಂದ ಆಯೋಜನೆಗೊಂಡಿದ್ದ ಶ್ವಾನ ಪ್ರದರ್ಶನ, ವಿದ್ಯಾರ್ಥಿಗಳಿಗೆ ನಡೆಸಿದ ಚರ್ಚಾ ಸ್ಪರ್ಧೆ, 20ಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರಗಳು, ಬಸ್ಸ್ ಶೆಲ್ಟರ್ ನಿರ್ಮಾಣ, ಕಾನೂನು ಅರಿವು ಕಾರ್ಯಕ್ರಮಗಳು, ರಸ್ತೆ ಸುರಕ್ಷತಾ ಸಪ್ತಾಹ, ಒಂದು ಲಕ್ಷಕ್ಕೂ ಹೆಚ್ಚು ಗಿಡಗಳ ನೆಡುವಿಕೆ ಕಾರ್ಯಕ್ರಮ, ಸಾಧಕರ ಸನ್ಮಾನಿಸುವ ಕಾರ್ಯಕ್ರಮ, ಈ ರೀತಿಯ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಹುಣಸೂರಿನಲ್ಲಿ ಜನಾನೂರಾಗಿಯಾಗಿದೆ ಎಂದು ಮಾಹಿತಿ ನೀಡಿದರು.
ಹುಣಸೂರು ರೋಟರಿ ಜಿಲ್ಲಾ ಗವರ್ನರ್ ಕೇಶವ್, ಕ್ಲಬ್ ಮಾಜಿ ಸಹಾಯಕ ಗರ್ವನರ್, ಧರ್ಮಾಪುರ ನಾರಾಯಣ್, ಕಾರ್ಯದರ್ಶಿ ಡಾ.ಕೆ.ಪಿ. ಪ್ರಸನ್ನ, ಹಿರಿಯ ಸದಸ್ಯರಾದ ಡಾ. ಸರೋಜಿನಿ ವಿಕ್ರಂ, ಡಾ. ನಂದನ್, ಡಾ. ವೃಷಭೇಂದ್ರ ಸ್ವಾಮಿ, ಆನಂದ್, ಬಸವರಾಜ್, ಎಚ್.ಆರ್. ಕೃಷ್ಣಕುಮಾರ್, ಪಾಂಡುಕುಮಾರ್ ಇದ್ದರು.