ಘಟಪ್ರಭಾ : ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸತತ ಪ್ರಯತ್ನಶೀಲವಾಗಿದೆ. ರೈತರಿಗೆ ಅನುಕೂಲವಾಗುವ ಹಲವಾರು ಯೋಜನೆ ಜಾರಿಗೆ ತರಲಾಗಿದೆ.
ಕಳೆದ 6 ವರ್ಷಗಳಿಂದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ ಮಾಡುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದು ಶನಿವಾರ 20ನೇ ಕಂತಿನ ಮೂಲಕ ನೇರವಾಗಿ ಬೆಳಗಾವಿ ಜಿಲ್ಲೆಯ 5 ಲಕ್ಷ 25 ಸಾವಿರಕ್ಕೂ ಅಧಿಕ ರೈತರ ಖಾತೆಗಳಿಗೆ ₹106.13 ಕೋಟಿ ಜಮೆ ಮಾಡಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಸಮೀಪದ ರಾಜಾಪೂರ ಗ್ರಾಮದ ಚುನಿಮಟ್ಟಿಯ ಶ್ರೀ ಚುನಮ್ಮಾದೇವಿ ದೇವಸ್ಥಾನದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ₹30 ಲಕ್ಷ ವೆಚ್ಚದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ ಕಾಮಗಾರಿಗೆ ಭೂಪೂಜೆ ನೆರವೇರಿಸಿ ಅವರು ಮಾತನಾಡಿದರು. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶಾದ್ಯಂತ 9.7 ಕೋಟಿ ರೈತರಿಗೆ ಒಟ್ಟು ₹20,500 ಕೋಟಿ ಹಾಗೂ ರಾಜ್ಯದ 43.30 ಲಕ್ಷ ರೈತರ ಖಾತೆಗೆ ₹877.70 ಕೋಟಿ ಹಣ ನೇರವಾಗಿ ಡಿಬಿಟಿ ಮೂಲಕ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಈಗಾಗಲೇ ₹30 ಲಕ್ಷ ಅನುದಾನ ನೀಡಲಾಗಿದೆ. ತಾವು ಕೂಡ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರಿಂದ ಅನುದಾನ ಪಡೆದು ಸುಸಜ್ಜಿತವಾದ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಿದರೇ ಈ ಭಾಗದ ಜನರಿಗೆ ಮದುವೆ, ಸೀಮಂತ ಕಾರ್ಯಕ್ರಮ, ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭವನ ಅನುಕೂಲವಾಗಲಿದೆ. ಗ್ರಾಮಸ್ಥರು ಪಕ್ಷಾತೀತವಾಗಿ ರಾಜಕಾರಣ ಬೆರೆಸದೆ ವ್ಯವಸ್ಥಿತವಾಗಿ ಶ್ರಮ ಹಾಕಿದರೇ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ಈಗಾಗಲೇ ಈ ಗ್ರಾಮಕ್ಕೆ ಜನಪಯೋಗಿ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಲ್ಲಿ ಚುನಮ್ಮಾದೇವಿ ದೇವಸ್ಥಾನದ ಹತ್ತಿರ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ₹30 ಲಕ್ಷ, ಕಲ್ಲೋಳಿ ರಾಜಾಪೂರ ಕೊರೆವ್ವನ ಹಳ್ಳದ ಹತ್ತಿರ ₹1 ಕೋಟಿ ವೆಚ್ಚದಲ್ಲಿ ಬ್ರೀಡ್ಜ್ ಕಂ ಬ್ಯಾರೆಜ್ ನಿರ್ಮಿಸಲಾಗಿದೆ.
ದುರ್ಗಾದೇವಿ ದೇವಸ್ಥಾನದ ಹತ್ತಿರ ₹5 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ, ಶಾಲೆಗೆ ₹2.5 ಲಕ್ಷದಲ್ಲಿ ಸ್ಮಾರ್ಟಕ್ಲಾಸ್, ಗ್ರಾಮದ ಅಭಿವೃದ್ಧಿಗಾಗಿ ರಸ್ತೆ, ಕುಡಿಯುವ ನೀರು ಸೌಲಭ್ಯ ಹಾಗೂ ಜಿಪಂ ಅಧ್ಯಕ್ಷರ ಅವಧಿಯಲ್ಲಿ ಕನಕ ಭವನ ನಿರ್ಮಾಣ ಮಾಡಿರುವುದನ್ನು ಸ್ಮರಿಸಿದರು ಹಾಗೂ ಮುಂಬರುವ ದಿನಗಳಲ್ಲಿ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ನನ್ನ ಸಹಕಾರ ಇದ್ದೇ ಇರುತ್ತದೆ. ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿನಂತಿಸಿದರು.
ಈ ವೇಳೆ ಚುನಮ್ಮಾದೇವಿ ಸುಧಾರಣಾ ಕಮಿಟಿ ಅಧ್ಯಕ್ಷ ಗೋಪಾಲ ಕಮತಿ, ಗ್ರಾಪಂ ಸದಸ್ಯ ಕೆಂಪಣ್ಣ ಗಡಹಿಂಗ್ಲೆಜ್, ಮಲ್ಲಪ್ಪ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಸಿದ್ದಪ್ಪ ಜಟ್ಟೆನ್ನವರ, ವಿಠ್ಠಲ ಎಣ್ಣಿ, ಚಿನ್ನಪ್ಪ ಪಾಟೀಲ, ರಾಮಚಂದ್ರ ಕೊಡ್ಲಿ, ಬಸವರಾಜ ಹೊಸೂರ, ಗೋಪಾಲ ಅಥಣಿ, ಹಣಮಂತ ಹುದ್ದಾರ, ವಿಠ್ಠಲ ಸಿಂಗಾಡಿ, ರಾಮಚಂದ್ರ ಗುಂಡಪ್ಪಗೋಳ, ಗೋಪಾಲ ಕೆಂಪವ್ವಗೋಳ, ಅಡಿವೆಪ್ಪ ಮುತ್ನಾಳ, ಮುತ್ತೆಪ್ಪ ಜಟ್ಟೆನ್ನವರ ಸೇರಿದಂತೆ ಸ್ಥಳೀಯ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.