ಬೆಂಗ್ಳೂರಿಗೆ ಪ್ರಧಾನಿ ನರೇಂದ್ರ ಮೋದಿ ಫಿದಾ!

KannadaprabhaNewsNetwork | Updated : Jan 20 2024, 07:17 AM IST

ಸಾರಾಂಶ

ದೇಶ-ವಿದೇಶಗಳ ಜನರ ಕನಸು, ಆಕಾಂಕ್ಷೆಗಳನ್ನು ತಂತ್ರಜ್ಞಾನ ಕ್ಷೇತ್ರದಲ್ಲಿನ ಆವಿಷ್ಕಾರ ಮತ್ತು ಮೈಲುಗಲ್ಲುಗಳ ಮೂಲಕ ಬೆಂಗಳೂರು ನಗರ ಈಡೇರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ನಗರವನ್ನು ಕೊಂಡಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇಶ-ವಿದೇಶಗಳ ಜನರ ಕನಸು, ಆಕಾಂಕ್ಷೆಗಳನ್ನು ತಂತ್ರಜ್ಞಾನ ಕ್ಷೇತ್ರದಲ್ಲಿನ ಆವಿಷ್ಕಾರ ಮತ್ತು ಮೈಲುಗಲ್ಲುಗಳ ಮೂಲಕ ಬೆಂಗಳೂರು ನಗರ ಈಡೇರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ನಗರವನ್ನು ಕೊಂಡಾಡಿದ್ದಾರೆ.

ನಗರದಲ್ಲಿ ಶುಕ್ರವಾರ ಬೋಯಿಂಗ್ ಜಾಗತಿಕ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಐಟಿ ರಾಜಧಾನಿ ಎಂದು ಗುರುತಿಸಿಕೊಂಡಿರುವ ನಗರದಲ್ಲಿನ ಈ ಅತ್ಯಾಧುನಿಕ ಕ್ಯಾಂಪಸ್, ಬೆಂಗಳೂರಿನ ಟೆಕ್ನಾಲಜಿ ಗುರುತನ್ನು ಮತ್ತಷ್ಟು ಬಲಪಡಿಸುತ್ತಿದೆ. 

ವೈಮಾನಿಕ ಕ್ಷೇತ್ರದ ಜಾಗತಿಕ ಬೇಡಿಕೆಗಳನ್ನು ಪೂರೈಸಲು ತಂತ್ರಜ್ಞಾನ ನಗರ ಸಮರ್ಥವಾಗಿದೆ. ವೈಮಾನಿಕ ಕ್ಷೇತ್ರದಲ್ಲಿ ಸಂಶೋಧನೆಗಳ ಮೂಲಕ ಭವಿಷ್ಯದಲ್ಲಿ ಜಗತ್ತಿನ ಗಮನ ಸೆಳೆಯುವ ವಿಶ್ವಾಸವಿದೆ ಎಂದರು.

ವೈಮಾನಿಕ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ ಮತ್ತು ಖಾಸಗಿ ವಲಯಗಳನ್ನು ಒಂದೆಡೆ ಸೇರಿಸುವುದು, ಸ್ಟಾರ್ಟಪ್‌ಗಳ ಪಾಲುದಾರಿಕೆಯ ಸುಸ್ಥಿರ, ಸಮಗ್ರ ವ್ಯವಸ್ಥೆಯನ್ನು ನೂತನ ಬೋಯಿಂಗ್ ಕ್ಯಾಂಪಸ್ ಮೂಲಕ ಸೃಷ್ಟಿಸಲಾಗುತ್ತದೆ. 

ರಕ್ಷಣಾ ವಲಯ ಮತ್ತು ನಾಗರಿಕ ವಿಮಾನಯಾನ ಕ್ಷೇತ್ರದ ಮುಂದಿನ ತಲೆಮಾರಿನ ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ಪಾಲುದಾರಿಕೆ ಸಂಶೋಧನೆಗಳನ್ನು ನಡೆಸಲಾಗುತ್ತದೆ. ಇದು ಬೆಂಗಳೂರು ನಗರದ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಮೋದಿ ಹೇಳಿದರು.

ಪ್ರಯಾಣಿಕರ ವಿಮಾನಗಳನ್ನು ತಯಾರಿಸುವ ಜಗತ್ಪ್ರಸಿದ್ಧ ಕಂಪನಿಯಾದ ಬೋಯಿಂಗ್‌ನ ಜಾಗತಿಕ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಂಗಳೂರಿನಲ್ಲಿ ಉದ್ಘಾಟಿಸಿದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌, ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಇದ್ದರು.

Share this article