ಕನ್ನಡಪ್ರಭ ವಾರ್ತೆ ಕಲಬುರಗಿ
ಕರ್ನಾಟಕವನ್ನು ನಾವು ಕೃಷಿ ಮತ್ತು ಕೈಗಾರಿಕಾ ಹಬ್ ಮಾಡಬೇಕೆಂಬ ಸಂಕಲ್ಪ ಮಾಡಿದ್ದೇವೆ. ಇದು ಕೇವಲ ಒಂದು ಭರವಸೆ ಅಲ್ಲ, ಮೋದಿಯ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಕಲಬುರಗಿಯಲ್ಲಿ ಶನಿವಾರ ಬಿಜೆಪಿಯಿಂದ ಆಯೋಜಿಸಿದ್ದ 'ಮೋದಿ ಮತ್ತೊಮ್ಮೆ ಸಂಕಲ್ಪ' ಸಮಾವೇಶದಲ್ಲಿ ಮಾತನಾಡಿ, ಪಂಚ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಕರ್ನಾಟಕದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ. ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರ ದೆಹಲಿಯ ಎಟಿಎಂ ಆಗಿದೆ. ಪಕ್ಷ, ಪರಿವಾರದ ಖರ್ಚು ವೆಚ್ಚಕ್ಕೆಲ್ಲ ಕರುನಾಡಿನ ಜನರ ಶ್ರಮದ ತೆರಿಗೆ ಹಣವೇ ಬಳಕೆಯಾಗುತ್ತಿದೆ. ರಾಜ್ಯದ ತಿಜೋರಿಯ ಕೀಲಿ ಕೈ ದಿಲ್ಲಿಯವರ ಬಳಿ ಇದೆ ಎಂದು ಆರೋಪಿಸಿದರು.
ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸುವಂತೆ ನೋಡಿಕೊಳ್ಳಿ. ಇದೊಂದೇ ಗ್ಯಾರಂಟಿ ನಾನು ನಿಮ್ಮಿಂದ ಬಯಸುತ್ತಿದ್ದೇನೆ. ಈ ಬಾರಿ ಕಾಂಗ್ರೆಸ್ ಏನೇ ಅಪಪ್ರಚಾರ, ಸುಳ್ಳುಗಳನ್ನು ಹೇಳಿದರೂ ಕರ್ನಾಟಕದಲ್ಲಿ ಅವರ ಖಾತೆ ತೆರೆಯಬಾರದು ಎಂದರು.
ಆರ್ಥಿಕ ಮುಗ್ಗಟ್ಟಲ್ಲಿ ಕರ್ನಾಟಕ: ಕಾಂಗ್ರೆಸ್ ಪಕ್ಷದ ಉಚಿತ ಗ್ಯಾರಂಟಿಗಳಿಂದಾಗಿ ರಾಜ್ಯದಲ್ಲಿ ಆರ್ಥಿಕ ಮುಗ್ಗಟ್ಟು ಸೃಷ್ಟಿಯಾಗಿದೆ. ಉಚಿತ ವಿದ್ಯುತ್ ನೀಡುವುದರಿಂದ ಗುಣಮಟ್ಟದ ಹಾಗೂ ಸುಸ್ಥಿರ ವಿದ್ಯುಚ್ಛಕ್ತಿ ಮರೀಚಿಕೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಉಚಿತ ವಿದ್ಯುತ್ ಘೋಷಣೆಯಿಂದಾಗಿ ಎಲ್ಲೆಡೆ ಕತ್ತಲು ಆವರಿಸಿದೆ, ರೈತರಿಗೆ ವಂಚನೆ ಆಗುತ್ತಿದೆ ಎಂದರು.
ಕೇಂದ್ರದ 6 ಸಾವಿರ ರುಪಾಯಿ ಕಿಸಾನ್ ಸಮ್ಮಾನ್‌ಗೆ ಪ್ರತಿಯಾಗಿ ರಾಜ್ಯದಿಂದಲೂ ಹಿಂದಿನ ಬಿಜೆಪಿ ಸರ್ಕಾರ 4 ಸಾವಿರ ಸೇರಿಸಿ 10 ಸಾವಿರ ರುಪಾಯಿ ನೀಡುತ್ತಿತ್ತು. ಕಾಂಗ್ರೆಸ್ ಬಂದ ಮೇಲೆ ಇದೂ ನಿಂತು ಹೋಗಿದೆ. ಯಾವುದಕ್ಕೂ ಹಣವಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಿದ್ದಾಗ ಆಡಳಿತ ನಡೆಸುವುದಾದರೂ ಹೇಗೆ? ಜನರ ಆಕಾಂಕ್ಷೆಗಳು ಪೂರ್ಣವಾಗೋದಾದರೂ ಹೇಗೆ ಎಂದು ಪ್ರಶ್ನಿಸಿದರು.
ಕನ್ನಡ ಭಾಷೆ-ಕರ್ನಾಟಕದ ಅಸ್ಮಿತೆಗೆ ಸದಾ ಗೌರವ:
ಕೇಂದ್ರ ಕನ್ನಡ, ಕರ್ನಾಟಕದ ವಿಚಾರ ಬಂದಾಗ ರಾಜ್ಯದ ಅಸ್ಮಿತೆಗೆ ಸದಾ ಗೌರವ ನೀಡಿದೆ. ನಾನು ಹೋದಲ್ಲೆಲ್ಲ ಲೋಕತಂತ್ರದ ವಿಚಾರ ಚರ್ಚೆಗೆ ಬಂದಾಗ ಕಲ್ಯಾಣ ನಾಡಿನ ಬಸವಣ್ಣನವರನ್ನೇ ತಾವು ಉದಾಹರಿಸೋದಾಗಿ ಹೇಳಿದರು.
ಜಿ 20 ಶೃಂಗದ ಭಾರತ ಮಂಟಪಂ ಹೆಸರು ಬಸವ ಕಲ್ಯಾಣದಲ್ಲಿ ಬಸವೇಶ್ವರರ ಅನುಭವ ಮಂಟಪದಿಂದ ಪಡೆದ ಪ್ರೇರಣೆಯ ಧ್ಯೋತಕ. ಕನ್ನಡ ಭಾಷೆ ಬಗ್ಗೆ ಗೌರವವಿರುವ ಕಾರಣಕ್ಕೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ತಮ್ಮ ಧ್ವನಿಯಲ್ಲೇ ಕನ್ನಡಿಗರ ಜೊತೆ ಮಾತನಾಡುವ ನಮೋ ಇನ್ ಕನ್ನಡ ಆ್ಯಪ್ ಸಿದ್ಧಪಡಿಸಲಾಗಿದೆ.
ಅನೇಕರು ತಾವು ಕನ್ನಡ ಮಾತನಾಡುವುದನ್ನು ಕೇಳಲು ಉತ್ಸುಕರಾಗಿದ್ದಾರೆ. ಅದಕ್ಕೆ ತಂತ್ರಜ್ಞಾನ ಬಳಸಿ ಈ ಆ್ಯಪ್ ಸಿದ್ಧಪಡಿಸಲಾಗಿದೆ ಎಂದು ಮೋದಿ ಹೇಳಿದರು.ಖರ್ಗೆ ಹೆಸರು ನೇರ ಪ್ರಸ್ತಾಪಿಸದ ಮೋದಿ:
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲೆಲ್ಲೂ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಎಲ್ಲೂ ನೇರವಾಗಿ ಪ್ರಸ್ತಾಪಿಸದೇ ಇರುವುದು ವಿಶೇಷವಾಗಿತ್ತು.