ಪಿಎಂಎಫ್‌ಬಿವೈ ಗೋಲ್‌ಮಾಲ್: ಬ್ಯಾಂಕ್ ಖಾತೆಯೇ ಫ್ರೀಜ್

KannadaprabhaNewsNetwork |  
Published : Apr 18, 2025, 12:30 AM IST
456465 | Kannada Prabha

ಸಾರಾಂಶ

ಪಿಎಂಎಫ್‌ಬಿವೈ ಗೋಲ್‌ಮಾಲ್ ಕುರಿತು ಕನ್ನಡಪ್ರಭ ಸರಣಿ ವರದಿ ಪ್ರಕಟಿಸಿದ್ದರಿಂದ ಎಚ್ಚೆತ್ತುಕೊಂಡು ಕೃಷಿ ಇಲಾಖೆಯ ಕುಷ್ಟಗಿ ತಾಲೂಕು ಎಡಿ ನಾಗರಾಜ ಕಾತರಕಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಬೊಮ್ಮನಾಳ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತ್ತು.

ಕೊಪ್ಪಳ:

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಕುಷ್ಟಗಿ ತಾಲೂಕಿನ ಹನುಮನಾಳ ಹೋಬಳಿಯಲ್ಲಿ ನಡೆದಿದ್ದ ಗೋಲ್‌ಮಾಲ್ ಪ್ರಾಥಮಿಕ ತನಿಖೆಯಲ್ಲಿಯೇ ಸಾಬೀತಾಗಿದ್ದು, ಬ್ಯಾಂಕ್ ಖಾತೆಗೆ ಜಮೆಯಾಗಿದ್ದ ಹಣವನ್ನು ಅಧಿಕಾರಿಗಳ ಸೂಚನೆ ಮೇರೆಗೆ ಫ್ರೀಜ್ (ಖಾತೆಯನ್ನೇ ಸ್ಥಗಿತ) ಮಾಡಲಾಗಿದೆ.

ರೈತನಲ್ಲದವನ ಖಾತೆಗೆ ಜಮೆಯಾಗಿದ್ದ ₹ 2 ಲಕ್ಷಕ್ಕೂ ಅಧಿಕ ಹಣವನ್ನು ಫ್ರೀಜ್‌ ಮಾಡಿದ್ದು, ಈತನಿಗೆ ಪಾವತಿಯಾಗಿದ್ದು ಹೇಗೆ? ಎನ್ನುವ ಕುರಿತು ಪತ್ತೆ ಮಾಡಲಾಗುತ್ತಿದೆ.

ಪಿಎಂಎಫ್‌ಬಿವೈ ಗೋಲ್‌ಮಾಲ್ ಕುರಿತು ಕನ್ನಡಪ್ರಭ ಸರಣಿ ವರದಿ ಪ್ರಕಟಿಸಿದ್ದರಿಂದ ಎಚ್ಚೆತ್ತುಕೊಂಡು ಕೃಷಿ ಇಲಾಖೆಯ ಕುಷ್ಟಗಿ ತಾಲೂಕು ಎಡಿ ನಾಗರಾಜ ಕಾತರಕಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಬೊಮ್ಮನಾಳ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತ್ತು. ಇದಾದ ಮೇಲೆ ದಾಖಲೆ ಪರಿಶೀಲಿಸಿ ಈಗ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆ ವಿಮಾ ಪರಿಹಾರ ಬಸವರಾಜ ರ್‍ಯಾವಣಿಕಿ ಎಂಬುವರಿಗೆ ಸೇರಿದ್ದ ಬೇವೂರಿನ ಪಿಜಿಬಿ ಬ್ಯಾಂಕ್‌ ಖಾತೆಗೆ ಜಮೆ ಆಗಿತ್ತು. ಬೊಮ್ಮನಾಳ ಪ್ರಕರಣದಲ್ಲಿ ಇದೀಗ ಸಿಕ್ಕಿಬಿದ್ದಿರುವ ಈತ ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲವೆಂದು ಹೇಳುತ್ತಿದ್ದಾನೆ.

ಕೃಷಿ ಇಲಾಖೆಯಲ್ಲಿ ಎಫ್‌ಐಡಿ ಹೊಂದಿದವರಿಗೆ ಮಾತ್ರ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಕಂತು ಪಾವತಿಸಲು ಅವಕಾಶವಿದೆ. ರೈತನಲ್ಲದವನ ಮತ್ತು ಬೇರೊಬ್ಬರ ಪಹಣಿ ಇತನ ಎಫ್‌ಐಡಿಗೆ ಲಿಂಕ್ ಮಾಡಿದ್ದು ಯಾರು? ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಎಫ್‌ಐಡಿ ಮಾಡಲು ಅಧಿಕಾರಿಗಳ ಸಮ್ಮತಿ ಬೇಕು. ಅದನ್ನು ಮಾಡಿದ್ದು ಯಾರು? ಎಂದು ತಿಳಿದರೆ ಇಡೀ ಪ್ರಕರಣ ಹೂರಣ ಬಯಲಿಗೆ ಬರಲಿದೆ.

ಮೊದಲ ಪ್ರಕರಣ ಪತ್ತೆ:

ಈಗಷ್ಟೇ ಮೊದಲ ಪ್ರಕರಣ ಪತ್ತೆಯಾಗಿದ್ದು, ಇಂಥ ನೂರಾರು ಪ್ರಕರಣಗಳು ಇವೆ. ಇದನ್ನು ಜಿಲ್ಲಾಡಳಿತ ಪತ್ತೆ ಹಚ್ಚಬೇಕಿದೆ. ರೈತರ ಹೆಸರಿನಲ್ಲಿ ಬೆಳೆ ವಿಮಾ ಪರಿಹಾರ ದೋಚುವ ದೊಡ್ಡ ಗ್ಯಾಂಗ್ ಇದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ ಎನ್ನುತ್ತಾರೆ ರೈತರು. ಕೃಷಿ ಹಾಗೂ ಕಂದಾಯ ಇಲಾಖೆಯಲ್ಲಿ ಇದಕ್ಕೆ ಕಿಂಗ್ ಪಿನ್ ಇರದ ಹೊರತು ಅಕ್ರಮ ನಡೆಯಲು ಸಾಧ್ಯವೇ ಇಲ್ಲ. ಹೀಗಾಗಿ, ಅವರನ್ನು ಪತ್ತೆ ಮಾಡಬೇಕಿದೆ.

ಕ್ರಿಮಿನಲ್ ಪ್ರಕರಣ:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೃಷಿ ಇಲಾಖೆ ಚಿಂತನೆ ನಡೆಸಿದೆ. ಆರೋಪಿ ಪತ್ತೆಯಾಗಿರುವುದರಿಂದ ಮತ್ತು ಬ್ಯಾಂಕ್ ಖಾತೆಯಲ್ಲಿ ಅಕ್ರಮವಾಗಿ ಹಣ ಜಮೆಯಾಗಿರುವುದರಿಂದ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದೆ.ಬೊಮ್ಮನಾಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇವೂರು ಬ್ಯಾಂಕಿನಲ್ಲಿರುವ ಖಾತೆಯೊಂದನ್ನು ಫ್ರೀಜ್‌ ಮಾಡಲಾಗಿದ್ದು, ಉಳಿದಂತೆ ತನಿಖೆ ನಡೆಯುತ್ತಿದೆ.

ನಾಗರಾಜ ಕಾತರಕಿ, ಎಡಿ ಕೃಷಿ ಇಲಾಖೆ ಕುಷ್ಟಗಿ

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...