ಶಿವಾನಂದ ಗೊಂಬಿ
ಮನುಷ್ಯ ಮೃತನಾದ ಮೇಲೆ ಆ ಕುಟುಂಬಸ್ಥರ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗದಂತೆ ಮತ್ತು ಪರಿಸರ ಮಾಲಿನ್ಯವೂ ಆಗದಂತೆ ದಹನ ಸಂಸ್ಕಾರ ನಡೆಸುವುದು ಅಷ್ಟೇ ಮುಖ್ಯ. ಅದಕ್ಕಾಗಿ ಮಹಾನಗರ ಪಾಲಿಕೆಯೂ ಇದೀಗ ಪೈಪಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಮೂಲಕ ಮಾನವ ಮೃತದೇಹ ದಹನ ಘಟಕಗಳನ್ನು ಸ್ಥಾಪಿಸಿದೆ. ರಾಷ್ಟ್ರೀಯ ಶುದ್ಧ ಗಾಳಿ ಯೋಜನೆಯಡಿಯಲ್ಲಿ ಪಿಎನ್‌ಜಿ ಮೂಲಕ ಮೃತದೇಹ ದಹನ ಘಟಕ ತೆರೆಯಲಾಗಿದೆ.
ನಾಗಾಲೋಟದಲ್ಲಿ ಬೆಳೆಯುತ್ತಿರುವ ನಗರಗಳ ಪೈಕಿ ಹುಬ್ಬಳ್ಳಿ-ಧಾರವಾಡ ಮಹಾನಗರ ಅಗ್ರಣೀಯ ಸ್ಥಾನದಲ್ಲಿದೆ. ಇಲ್ಲಿ ಪರಿಸರ ರಕ್ಷಿಸುವುದು ಅಷ್ಟೇ ಮುಖ್ಯ. ಮಾನವ ಮೃತದೇಹವನ್ನು ದಹಿಸಬೇಕೆಂದರೆ ಸಾಕಷ್ಟು ಪ್ರಮಾಣದಲ್ಲಿ ಕಟ್ಟಿಗೆ ಬೇಕಾಗುತ್ತದೆ. ಸ್ಮಶಾನದಲ್ಲಿನ ಬೆಂಕಿ ಪರಿಣಾಮ ಸುತ್ತಮುತ್ತಲಿನ ನಿವಾಸಿಗಳಿಗೂ ವಾಸನೆ ಬರುತ್ತದೆ ಎಂಬ ದೂರು. ಜತೆಗೆ ಪರಿಸರಕ್ಕೂ ಹಾನಿ. ಕಟ್ಟಿಗೆಗೆ ಸಾಕಷ್ಟು ಗಿಡ-ಮರಗಳನ್ನು ಕಡಿಯಬೇಕಾಗುತ್ತದೆ. ಜತೆಗೆ ಕಟ್ಟಿಗೆಗಳಿಂದ ಮೃತದೇಹ ಸುಡಲು ಏಳೆಂಟು ಗಂಟೆಯೇ ಬೇಕಾಗುತ್ತದೆ.ಇನ್ನು ವಿದ್ಯುತ್ ಚಿತಾಗಾರದಲ್ಲಿ ವಿದ್ಯುತ್ ಬಳಕೆಯೂ ಹೆಚ್ಚಾಗುತ್ತದೆ. ವಿದ್ಯುತ್ ಚಿತಾಗಾರದಲ್ಲಿ ದೇಹ ಸುಡುವುದು ಕುಟುಂಬಸ್ಥರಿಗೆ ಕಾಣುವುದಿಲ್ಲ. ಹೀಗಾಗಿ ಅವರ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗುತ್ತದೆ ಎಂದು ವಿದ್ಯುತ್ ಚಿತಾಗಾರದಲ್ಲಿ ದಹನ ಸಂಸ್ಕಾರ ಮಾಡಲು ಹಿಂಜರಿಯುತ್ತಾರೆ. ಆದರೆ, ಪಿಎನ್‌ಜಿ ಮೂಲಕ ದಹಿಸುವ ಕಾರ್ಯ ಕುಟುಂಬಸ್ಥರ ಕಣ್ಣಿಗೆ ಕಾಣುವುದರಿಂದ ಅವರ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗುವುದಿಲ್ಲ. ಜತೆಗೆ 30 ಮೀಟರ್ ಚಿಮಣಿ ಅಳವಡಿಸುವುದರಿಂದ ವಿಷಕಾರಿ ಅಂಶಗಳು, ಹೊಗೆ ಎತ್ತರದಿಂದ ಹೊರಕ್ಕೆ ಹೋಗುವುದರಿಂದ ಪರಿಸರ ಮಾಲಿನ್ಯವೂ ಉಂಟಾಗುವುದಿಲ್ಲ. ಈ ಕಾರಣದಿಂದಾಗಿ ಮೃತದೇಹಗಳ ದಹನಕ್ಕೆ ಪಿಎನ್‌ಜಿ ಘಟಕ ಸ್ಥಾಪಿಸಲಾಗುತ್ತಿದೆ.
ಪಾಲಿಕೆಯೂ ಹುಬ್ಬಳ್ಳಿಯ ಆನಂದನಗರ, ಗೋಕುಲ, ಬಿಡ್ನಾಳ, ಧಾರವಾಡದ ಗುಲಗಂಜಿಕೊಪ್ಪ ಹಾಗೂ ಹೊಸಯಲ್ಲಾಪುರಗಳಲ್ಲಿ ಸಶ್ಮಾನಗಳಲ್ಲಿ ಪಿಎನ್‌ಜಿ ದಹನ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಈಗಾಗಲೇ ಆನಂದನಗರ ಹಾಗೂ ಗುಲಗಂಜಿಕೊಪ್ಪದಲ್ಲಿನ ಘಟಕಗಳು ಸಿದ್ಧವಾಗಿ ಕಾರ್ಯ ಆರಂಭಿಸಿವೆ. ಇನ್ನುಳಿದ ಮೂರು ಕಡೆಗಳಲ್ಲಿ ಸಿವಿಲ್ ವರ್ಕ್ ನಡೆಯುತ್ತಿದೆ. ಪಿಎನ್‌ಜಿ ಇಲ್ಲದ ಕಡೆಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಸಲಾಗುವುದು. ಆ ಪ್ರದೇಶದಲ್ಲಿ ಪಿಎನ್‌ಜಿ ಅಳವಡಿಕೆ ಶುರುವಾದಾಗ ಅದರ ಸಂಪರ್ಕ ಪಡೆಯಲಾಗುವುದು. ಸದ್ಯ ಆನಂದನಗರದಲ್ಲಿನ ಸ್ಮಶಾನಕ್ಕೆ ಪಿಎನ್‌ಜಿ ಮೂಲಕ ದಹನ ಸಂಸ್ಕಾರ ನಡೆಸಲಾಗುತ್ತಿದೆ ಎಂದು ಪಾಲಿಕೆ ತಿಳಿಸುತ್ತದೆ.
ಪಾಲಿಕೆಯ ಈ ಯೋಜನೆಗೆ ಪರಿಸರವಾದಿಗಳು, ಸಾರ್ವಜನಿಕರಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಕಟ್ಟಿಗೆ ಮೂಲಕ ಸುಡುವುದರಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತಿತ್ತು. ಆದರೆ, ಗ್ಯಾಸ್ ಬಳಸಿ ದಹಿಸುವುದರಿಂದ ಪರಿಸರಕ್ಕೆ ಹಾನಿಯಾಗುವುದು ತಪ್ಪುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಸಾರ್ವಜನಿಕರ ಅಂಬೋಣ.ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 5 ಕಡೆಗಳಲ್ಲಿ ಗ್ಯಾಸ್ ಬಳಸಿ ಮಾನವ ಮೃತದೇಹ ದಹಿಸುವ ಘಟಕ ಸ್ಥಾಪಿಸಲಾಗುತ್ತಿದೆ. ಅದರಲ್ಲಿ ಎರಡು ಈಗಾಗಲೇ ಶುರುವಾಗಿವೆ. ಇನ್ನು 3 ಕಡೆಗಳಲ್ಲಿ ಕಾಮಗಾರಿ ನಡೆಯುತ್ತಿದೆ. ರಾಷ್ಟ್ರೀಯ ಶುದ್ಧಗಾಳಿ ಯೋಜನೆಯಡಿ ಈ ಘಟಕಗಳನ್ನು ಸ್ಥಾಪಿಸಲಾಗಿದೆ.