ಕವಿ ಗವಿಸಿದ್ಧರಿಂದ ಸಾಮಾಜಿಕ, ಜನಪರ ಹೋರಾಟ

KannadaprabhaNewsNetwork |  
Published : Oct 27, 2025, 12:30 AM IST
ಪೋಟೊ26ಕೆಪಿಎಲ್10: ಕೊಪ್ಪಳ ನಗರದ ಸರಕಾರಿ ನೌಕರರ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕವಿ ಗವಿಸಿದ್ಧ.ಎನ್.ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ತುರ್ತು ಪರಿಸ್ಥಿತಿಯ ದಿನಗಳಲ್ಲಿಯೂ ಸಹಿತ ಕವಿ ಗವಿಸಿದ್ದ ಎನ್.ಬಳ್ಳಾರಿ ಹೋರಾಟದಲ್ಲಿ ತೊಡಗಿಸಿಕೊಂಡ ರೀತಿ ಗಮನಾರ್ಹ ಸಂಗತಿಯಾಗಿದೆ

ಕೊಪ್ಪಳ: ಕವಿ ಗವಿಸಿದ್ದ ಎನ್. ಬಳ್ಳಾರಿ ಜೀವಂತವಿರುವ ತನಕ ಸಾಮಾಜಿಕ ಹೋರಾಟ, ಜನಪರ ನಿಲುವುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಕವಿ ಗವಿಸಿದ್ಧ. ಎನ್.ಬಳ್ಳಾರಿ ವೇದಿಕೆ, ತಳಮಳ ಪ್ರಕಾಶನ, ಕವಿ ಗವಿಸಿದ್ಧ ಎನ್ ಬಳ್ಳಾರಿ ಸಾಹಿತ್ಯ, ಸಾಂಸ್ಕೃತಿಕ, ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ನಡೆದ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತುರ್ತು ಪರಿಸ್ಥಿತಿಯ ದಿನಗಳಲ್ಲಿಯೂ ಸಹಿತ ಕವಿ ಗವಿಸಿದ್ದ ಎನ್.ಬಳ್ಳಾರಿ ಹೋರಾಟದಲ್ಲಿ ತೊಡಗಿಸಿಕೊಂಡ ರೀತಿ ಗಮನಾರ್ಹ ಸಂಗತಿಯಾಗಿದೆ. ಇಂದು ಅವರ ನೆನಪಿನಲ್ಲಿ ಕವಿಯಿತ್ರಿಯರನ್ನು ಸನ್ಮಾನಿಸುವ ಕಾರ್ಯ ಉತ್ತಮವಾಗಿದೆ ಎಂದರು.

ಕನ್ನಡದ ಸಾಹಿತ್ಯ ಪರಂಪರೆಯಲ್ಲಿ ಸಾಮಾಜಿಕ ದೃಷ್ಟಿಕೋನವಿದ್ದು, 9ನೇ ಶತಮಾನದ ಕವಿರಾಜ ಮಾರ್ಗನಿಂದ ಹಿಡಿದು ಇಲ್ಲಿಯವರೆಗೆ ಹಲವು ಸಾಹಿತಿಗಳು ಸಾಹಿತ್ಯಕ ಚಟುವಟಿಕೆಯ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಹೊರಟಿದ್ದಾರೆ ಎಂದರು.

ಮೊದಲ ಪ್ರಜಾಪ್ರಭುತ್ವವಾದಿ ಬಸವಣ್ಣನವರು ಆದರ್ಶಪ್ರಾಯವಾಗಿದ್ದಾರೆ. ಆದರೆ ಈಗಿನ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ. ರಾಜಕಾರಣಿಗಳಾದ ನಾವು ಅಧಿಕಾರ ಬಂದ ಕೂಡಲೇ ಜನರಿಂದ ದೂರವಾಗಿ ಬಿಡುತ್ತೇವೆ. ಆದರೆ, ನಾವು ಜನಗಳ ಜತೆಗೆ ಇರಬೇಕು. ಜನಕೇಂದ್ರಿತ ವ್ಯವಸ್ಥೆ ಮರೆತು ವ್ಯಕ್ತಿ ಕೇಂದ್ರಿತರಾಗಿದ್ದೇವೆ.ಇಂದಿನ ವ್ಯವಸ್ಥೆಯಲ್ಲಿ ಜನ ತಂತ್ರಕ್ಕೆ ನಾಚಿಕೆಯಾಗುವಂತೆ ರಾಜಕಾರಣಿಗಳು ಬದುಕುತ್ತಿರುವುದು ನಿಜಕ್ಕೂ ದುರಂತದ ಸಂಗತಿಯಾಗಿದೆ ಎಂದರು.

ಗವಿಸಿದ್ದ ಎನ್.ಬಳ್ಳಾರಿ ಅವರ ಕಾಲದಲ್ಲಿಯೇ ಸಮಾಜವಾದದ ಚಿಂತನೆ ಮೂಲಕ ರಾಜಕೀಯ ಪ್ರವೇಶ ಮಾಡಿರುವ ನಾನು ಈಗೀನ ಇಡೀ ವ್ಯವಸ್ಥೆ ಬಗ್ಗೆ ನನಗೆ ಸಿಟ್ಟಿದೆ. ಲೋಯಿಯಾ ಅವರು ಹೇಳಿದಂತೆ ನಿರಾಸೆಯಲ್ಲಿಯೂ ಕ್ರಿಯಾಶೀಲತೆ ಉಳಿಸಿಕೊಂಡು ಹೊರಟಿರುವೆ ಎಂದರು.

ಚುನಾವಣಾ ಪದ್ಧತಿ ಇಂದಿನ ಅವ್ಯವಸ್ಥೆಗೆ ಕನ್ನಡಿಯಾಗಿದೆ. ಪ್ರಮುಖವಾಗಿ ಚುನಾವಣಾ ವ್ಯವಸ್ಥೆ ಬದಲಾಗಬೇಕಿದೆ. ಮತ ಪಡೆದು ಅಧಿಕಾರ ಅನುಭವಿಸುತ್ತಿರುವ ರಾಜಕಾರಣಿಗಳು ಮತದಾರರನ್ನು ಮರೆತರೆ ಗಂಡಾಂತರವಂತೂ ತಪ್ಪಿದ್ದಲ್ಲ ಎಂದರು.

ಇಂದಿನ ದಿನಗಳಲ್ಲಿ ಓದುವ ಪರಂಪರೆ ಕಡಿಮೆಯಾಗಿದೆ. ಸರ್ಕಾರ, ಮೊಬೈಲ್ ಬಿಡಿ, ಪುಸಕ್ತ ಹಿಡಿ ಎನ್ನುವ ಯೋಜನೆ ಜಾರಿಗೆ ತಂದಿದೆ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು. ಜತೆಗೆ ನಾವು ಕೂಡ ಓದಬೇಕು ಎಂದರು.

ಕಾವ್ಯ ಪ್ರಶಸ್ತಿ ಪುರಸ್ಕೃತೆ ಡಾ. ಮೈತ್ರೇಣಿ ಮಾತನಾಡಿ, ಕೊಪ್ಪಳದ ಸಾಹಿತ್ಯ ವಲಯ ರಾಜ್ಯಕ್ಕೆ ಮಾದರಿಯಾಗಿದೆ ಜಿಲ್ಲಾದ್ಯಂತ ಅನೇಕ ಸಾಹಿತಿಗಳು ರಾಜ್ಯದ ಸಾಹಿತ್ತೀಕ ವಲಯದ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾರೆ. ಗವಿಸಿದ್ದ.ಎನ್. ಬಳ್ಳಾರಿ ಅವರು ಸದಾ ಓದುಗರ ಸೃತಿ ಪಟಲದಲ್ಲಿ ಜೀವಂತವಾಗಿದ್ದಾರೆ. ಅವರ ಹೆಸರಿನಲ್ಲಿ ನನಗೆ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ ಎಂದರು.

ಲೇಖಕ ಅರವಿಂದ ಚೊಕ್ಕಾಡಿ ಮಾತನಾಡಿ, ಗವಿಸಿದ್ದ.ಎನ್.ಬಳ್ಳಾರಿ ವ್ಯಾಪಾರಿಯ ಜತೆಗೆ ಹೋರಾಟದ ಬದುಕು ರೂಪಿಸಿಕೊಂಡವರು. ಜತೆಗೆ ಕವಿ,ಪತ್ರಕರ್ತರಾಗಿ ಜನಾನುರಾಗಿಯಾಗಿ ಕೆಲಸ ಮಾಡಿದರು ಎಂದು ಸ್ಮರಿಸಿದರು.

ಪ್ರಿಂಟಿಂಗ್ ಪ್ರೆಸ್ ಅಸೋಸಿಯನ್ ಕಾರ್ಯಾಧ್ಯಕ್ಷ ಆನಂದ ಗೊಂಡಬಾಳ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಕವಿ ಮಹೇಶ ಬಳ್ಳಾರಿ ಅವರ ದುಬೈ ದೌಲತ್ತು ಕೃತಿ, ಮುಂಬೈ ಅನಿತಾ ಅವರ ಮೇಣಕ್ಕೆ ಅಂಟಿದ ಬತ್ತಿ ಸಂಕಲನ, ಶ್ರೀನಿವಾಸ ಚಿತ್ರಗಾರ ಅವರ ನಮ್ಮ ನಡೆ ನಿಮ್ಮ ನುಡಿ ಕೃತಿ, ಶಿಕ್ಷಕ ಯಲ್ಲಪ್ಪ ಹರನಾಳಗಿ ಅವರ ಪ್ರೀತಿಯ ನಶೆಯಲ್ಲಿ ಕೃತಿ ಬಿಡುಗಡೆಯಾಯಿತು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಬಿ.ಎಸ್. ಪಾಟೀಲ್ ತಾವರಗೇರಾ, ಡಿಡಿಪಿಐ ಸೋಮಶೇಖರಗೌಡ, ಪತ್ರಕರ್ತ ಜಗದೀಶ ಅಂಗಡಿ, ಮಮತಾ ಅರಸಿಕೆರೆ, ಮಹೇಶ ಬಳ್ಳಾರಿ ಸೇರಿದಂತೆ ಇತರರು ಇದ್ದರು. ಸಮಾಜಮುಖಿ ಸಾಧನೆ ಮಾಡಿದ ರಾಜಶೇಖರಗೌಡ ಆಡೂರು, ವರ್ತಕ ಸಿದ್ದಣ್ಣ ನಾಲ್ವಾಡ, ದೇವಕಿಬಾಯಿ, ಪ್ರಭಾಕರ ಸನಗುಂದಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು