ಸಮಾಜಮುಖಿ ಚಿಂತನೆ ಅಕ್ಷರ ರೂಪಕ್ಕಿಳಿಸಿದ ಕವಿ ಶಂಕರ ಕುಕನೂರ: ಕರಿಭರಮಗೌಡರ

KannadaprabhaNewsNetwork |  
Published : Nov 04, 2026, 01:30 AM IST
ಕಾರ್ಯಕ್ರಮವನ್ನು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ಬಣಕಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಾಹಿತಿಗಳು ಸಮಾಜದ ಆಗು-ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿ, ಶೋಷಿತರ ಮತ್ತು ಜನಸಾಮಾನ್ಯರ ನೈಜ ಬದುಕಿನ ಸತ್ಯವನ್ನು ದಿಟ್ಟವಾಗಿ ಅನಾವರಣಗೊಳಿಸಿದಾಗ ಮಾತ್ರ ಅಲ್ಲಿ ಸತ್ವಯುತ ಕಾವ್ಯ ಧರ್ಮ ಸಾರ್ಥಕವಾಗುತ್ತದೆ.

ಬದುಕು-ಬರಹ ಕುರಿತು ಅವರು ವಿಶೇಷ ಉಪನ್ಯಾಸ

ಕನ್ನಡಪ್ರಭ ವಾರ್ತೆ ಮುಂಡರಗಿ

ಸಾಹಿತಿಗಳು ಸಮಾಜದ ಆಗು-ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿ, ಶೋಷಿತರ ಮತ್ತು ಜನಸಾಮಾನ್ಯರ ನೈಜ ಬದುಕಿನ ಸತ್ಯವನ್ನು ದಿಟ್ಟವಾಗಿ ಅನಾವರಣಗೊಳಿಸಿದಾಗ ಮಾತ್ರ ಅಲ್ಲಿ ಸತ್ವಯುತ ಕಾವ್ಯ ಧರ್ಮ ಸಾರ್ಥಕವಾಗುತ್ತದೆ. ಮೂಲತಃ ಬಂಡಾಯ ಪ್ರಜ್ಞೆಯ ನೆಲೆಯಿಂದಲೇ ಕಾವ್ಯ ಕಟ್ಟಿ, ಸಮಾಜಮುಖಿ ಚಿಂತನೆಗಳನ್ನು ಅಕ್ಷರ ರೂಪಕ್ಕಿಳಿಸಿದ ಅಪರೂಪದ ಗುಣ ಕವಿ ಶಂಕರ ಕುಕನೂರ ಅವರಲ್ಲಿದೆ ಎಂದು ವಿಶ್ರಾಂತ ಪ್ರಾಚಾರ್ಯ ಎಸ್.ಬಿ. ಕರಿಭರಮಗೌಡರ ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಸಾಹಿತಿಗಳ ಕೃತಿ ಅವಲೋಕನ ಮಾಲಿಕೆಯಲ್ಲಿ, ಬಂಡಾಯ ಸಾಹಿತಿ ಕವಿ ಶಂಕರ ಕುಕನೂರ ಅವರ ಬದುಕು-ಬರಹ ಕುರಿತು ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಕಂದಾಯ ಇಲಾಖೆಯಲ್ಲಿ ಸುದೀರ್ಘ 21 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಂಕರ ಕುಕನೂರ ಸಂವೇದನಾಶೀಲ ಕವಿ. ಸೃಷ್ಟಿ-ಪ್ರತಿಸೃಷ್ಟಿ ಸಾಹಿತ್ಯ ವೇದಿಕೆ ಬಂಡಾಯ ಸಾಹಿತ್ಯ ಸಂಘಟನೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಮೊದಲಾದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘಟನೆಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಕೆಂಡದಲ್ಲಿ ಎರಡು ಹೆಜ್ಜೆ, ನಿಲ್ಲದ ನೆಲದ ನೋವು ಹೀಗೆ ಹಲವಾರು ಕವನ ಸಂಕಲನವನ್ನು ಓದುಗರ ಕೈಗಿತ್ತಿದ್ದಾರೆ. ಬದುಕಿನ ಹತ್ತು-ಹಲವು ಜಂಝಾಟಗಳ ನಡುವೆಯೂ ಸಮಾಜದ ಅಂಕುಡೊಂಕುಗಳಿಗೆ ಕನ್ನಡಿ ಹಿಡಿಯುತ್ತ, ಸೂಕ್ಷ್ಮ ಹಾಸ್ಯ ಹಾಗೂ ನಿತ್ಯ ವಾಸ್ತವಗಳನ್ನೇ ಕಾವ್ಯದ ವಸ್ತುವಾಗಿಸಿಕೊಂಡ ಸಾಹಿತ್ಯ ಜನಮನದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಮೂಲ ಸಿದ್ಧಾಂತಕ್ಕೆ ಬದ್ಧರಾಗಿ ತಮ್ಮ ಕವನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯವನ್ನು ಕವಿ ಶಂಕರ ಕುಕನೂರ ತಮ್ಮ ಸಾಹಿತ್ಯದ ಮೂಲಕ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ ಎಂದರು.

ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ಬಣಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕು ಸಾಹಿತ್ಯ ಪರಿಷತ್ತು ಸ್ಥಳೀಯ ಸಾಹಿತಿಗಳು ಮತ್ತು ಕವಿಗಳ ಪರಿಚಯ, ಕೃತಿ ಅವಲೋಕನ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿರುವುದು ಸಾಹಿತ್ಯ ವಲಯದಲ್ಲೇ ಶ್ಲಾಘನೀಯ ಕಾರ್ಯ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಪ್ರೊ. ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಆರ್.ಎಲ್. ಪೊಲೀಸ್‌ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವೀಣಾ ಪಾಟೀಲ, ಎ.ಬಿ. ಹಿರೇಮಠ, ಸಿ.ಕೆ. ಗಣಪ್ಪನವರ, ರಮೇಶ ಪಾಟೀಲ, ಕೃಷ್ಣಮೂರ್ತಿ ಸಾಹುಕಾರ, ಕಾಶಿನಾಥ ಬಿಳಿಮಗ್ಗದ, ಮಧುಮತಿ ತಳಕಲ್, ಅಕ್ಕಮಹಾದೇವಿ ಕೊಟ್ಟೂರಶೆಟ್ಟರ, ಐ.ಎ. ಮುಲ್ಲಾ, ಎನ್.ಎನ್. ಕಲಕೇರಿ, ಆರ್.ಕೆ. ರಾಯನಗೌಡ್ರ, ಎಸ್.ವಿ. ಪಾಟೀಲ, ಗಿರಿಜಾ ಕಡ್ಡಿ, ಅಶೋಕ ಅಣ್ಣಿಗೇರಿ, ಕೊಟ್ರೇಶ ಜವಳಿ, ಸಿ.ಎಸ್. ಅರಸನಾಳ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ​ಶಶಿಕಲಾ ಕುಕನೂರ ಸ್ವಾಗತಿಸಿ, ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌