ರಾಜ್ಯ ಮಟ್ಟದ ನಿರಂತರ ಸಾಹಿತ್ಯ ಪುರಸ್ಕಾರ, ಕವಿ ಕವಿತೆ ಸವಿ ಕವಿಗೋಷ್ಠಿ
ಕಾವ್ಯ ಕೇವಲ ಅಕ್ಷರಗಳ ಒಡ್ಡೋಲಗವಲ್ಲ, ಅದು ಸಮಾಜದ ನೋವು ಹಾಗೂ ಬದುಕಿನ ಬವಣೆಗಳನ್ನು ಕಟ್ಟಿಕೊಡುವ ಪ್ರತಿಧ್ವನಿಯಾಗಬೇಕು ಎಂದು ಬಳ್ಳಾರಿಯ ಹಿರಿಯ ಸಾಹಿತಿ ಅಬ್ದುಲ್ ಹೈ ತೋರಣಗಲ್ಲು ಹೇಳಿದರು.
ಗದಗ ನಗರದ ಜೆ.ಟಿ. ಮಹಾವಿದ್ಯಾಲಯದ ಸಭಾಭವನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ನಿರಂತರ ಸಾಹಿತ್ಯ ಪುರಸ್ಕಾರ, ಕವಿ ಕವಿತೆ ಸವಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಣಿಪುರ ಹಾಗೂ ಕೊಪ್ಪಳದಂತಹ ಅಮಾನವೀಯ ಘಟನೆಗಳು ಕವಿಗಳ ಮನಕ್ಕೆ ತಟ್ಟದಿದ್ದರೆ ಅದು ದುರಂತ ಎಂದು ವಿಷಾದಿಸಿದರು.ಶಾಯರಿ ಕವಿ ಮರುಳಸಿದ್ದಪ್ಪ ದೊಡ್ಡಮನಿ ಮಾತನಾಡಿ, ಅಕ್ಷರ ಪೋಣಿಸುವುದಕ್ಕಿಂತ ಬದುಕೇ ಕಾವ್ಯವಾಗಬೇಕು ಎಂದರು. ಯುವ ಕವಯಿತ್ರಿ ದೀಪಾ ಗೋನಾಳ, ಕವಿಗಳು ಹೊಸತನಕ್ಕೆ ಹಾತೊರೆಯಬೇಕು ಎಂದು ಕಿವಿಮಾತು ಹೇಳಿದರು. ಸಂಚಾಲಕ ಎ.ಎಸ್. ಮಕಾನದಾರ ಮಾತನಾಡಿ, ಮುಂದಿನ ದಿನಗಳಲ್ಲಿ ಗದಗಿನಲ್ಲಿ ರಾಜ್ಯ ಮಟ್ಟದ ಎರಡು ದಿನಗಳ ಗಜಲ್ ಕಮ್ಮಟ ಹಮ್ಮಿಕೊಳ್ಳುವ ಪ್ರಸ್ತಾವನೆ ಮುಂದಿಟ್ಟರು.
ವೇದಿಕೆಯಲ್ಲಿ ರಾಮಪ್ಪ ಲೋಟಗೆರಿ, ನಾಗರಾಜ ಬಳಿಗೇರ, ರಂಜಾನ ಹೆಬಸೂರ, ಬಶೀರ್ ಅಹ್ಮದ್ ಕೋಲ್ಕಾರ್, ಎಂ.ಎಸ್. ಮಕಾನದಾರ ಉಪಸ್ಥಿತರಿದ್ದರು. ಗಾಯತ್ರಿ ಮಳೆಕರ ಸ್ವಾಗತಿಸಿದರು, ಎಂ.ಎಸ್. ಮಕಾನದಾರ ವಂದಿಸಿದರು.