ಕಾವ್ಯ ಕಟ್ಟುವುದಕ್ಕಿಂತ ಕಾವ್ಯ ಹುಟ್ಟುವುದು ಈ ಭಾಗದ ವಿಶೇಷ

KannadaprabhaNewsNetwork | Published : Feb 11, 2025 12:48 AM

ಸಾರಾಂಶ

ಹನೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ವಿವೇಕಾನಂದ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾವ್ಯಕಮ್ಮಟ ಕವನ ರಚನೆ ಕಾರ್ಯಾಗಾರವನ್ನು ಸಾಹಿತಿ ಗಾಯಕ ಆರ್. ರವಿಕುಮಾರ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಈ ಭಾಗದಲ್ಲಿ ಕಾವ್ಯ ಕಟ್ಟುವುದಕ್ಕಿಂತ ಕಾವ್ಯ ಹುಟ್ಟುವುದು ವಿಶೇಷತೆ. ಈ ನಿಟ್ಟಿನಲ್ಲಿ ತಾವೆಲ್ಲರೂ ಕಥೆ, ಕವನ ಬರೆಯಲು ಮುಂದಾಗಬೇಕು ಎಂದು ಸಾಹಿತಿ, ಗಾಯಕ ಆರ್. ರವಿಕುಮಾರ್ ತಿಳಿಸಿದರು.ಪಟ್ಟಣದ ವಿವೇಕಾನಂದ ಕಾಲೇಜಿನಲ್ಲಿ ಹನೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಕಾವ್ಯ ಕಮ್ಮಟ ಕವನ ರಚನೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವ್ಯಕ್ತಿ ಬೆಂದರೆ ಬೇಂದ್ರೆಯಾಗಲು ಸಾಧ್ಯ. ನಮಗೆ ನೋವುಗಳು ಬಂದಾಗ ಮಾತ್ರ ಕವನ ಕಥೆಗಳು ಹುಟ್ಟಿಕೊಳ್ಳುತ್ತವೆ. ಅದಕ್ಕೆ ಉದಾಹರಣೆಯಾಗಿ ಇಡೀ ಜಿಲ್ಲೆಯೇ ಹೆಮ್ಮೆ ಪಡುವಂತಹ ಕೇಂದ್ರ ಸಾಹಿತ್ಯ ಪರಿಷತ್ತು ಪ್ರಶಸ್ತಿ ಪಡೆದ ಸ್ವಾಮಿ ಪೊನ್ನಾಚಿ ಸಹ ಇದೆ ಜಿಲ್ಲೆಯವರಾಗಿದ್ದು ನಮಗೆ ಹೆಮ್ಮೆಯ ವಿಷಯವಾಗಿದೆ. ಅವರದೇ ಮಾರ್ಗದರ್ಶನದಲ್ಲಿ ನಾನು ಸಹ ಕಥೆ ಬರೆದು ಬಹುಮಾನ ಪಡೆದುಕೊಂಡಿರುವುದು ನಿದರ್ಶನವಾಗಿದೆ. ನೀವು ಸಹ ಅದೇ ಮಾರ್ಗದಲ್ಲಿ ನಡೆಯಿರಿ ನಿಮ್ಮಲ್ಲೂ ಸಹ ಒಳ್ಳೊಳ್ಳೆ ಕಥೆ, ಕವನ, ಕಾವ್ಯ ಹುಟ್ಟಲಿ ಎಂದರು.

ಸಾಹಿತಿ ರಾಜೇಂದ್ರ ಪ್ರಸಾದ್ ಮಾತನಾಡಿ, ಮಕ್ಕಳು ದೊಡ್ಡವರು ಓದುವ ಬರೆಯುವ ಹವ್ಯಾಸದಿಂದ ದೂರ ಉಳಿದಿರುವುದು. ಇತ್ತೀಚಿನ ದಿನಗಳಲ್ಲಿ ಸಾಹಿತ್ಯದ ಕಡೆ ಒಲವು ಕಡಿಮೆ ಆಗುವುದಕ್ಕೆ ಕಾರಣವಾಗಿದೆ. ಮೊದಲು ಓದುವ, ವಿಚಾರ ತಿಳಿದುಕೊಳ್ಳುವ, ಹವ್ಯಾಸ ಬೆಳೆಸಿಕೊಳ್ಳಬೇಕು. ಆ ಮೂಲಕ ಸಾಹಿತ್ಯದ ಕಡೆ ಒಲವು ಬೆಳೆಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಇದೆ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಮಲ್ಲೇಶ್, ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾದ ಮಧುಸೂದನ್, ಸಾಹಿತಿಗಳಾದ ರಾಜೇಂದ್ರ ಪ್ರಸಾದ್, ಬಾಳಗುಣಸೆ ಮಂಜುನಾಥ್, ಸ್ವಾಮಿ ಪೊನ್ನಾಚಿ, ಕಂದವೇಲು, ಕಸಾಪ ಕಾರ್ಯದರ್ಶಿ ಅಭಿಲಾಷ್ ಹಾಗೂ ಕವಿ ಮಿತ್ರರು, ವಿದ್ಯಾರ್ಥಿಗಳು ಇನ್ನಿತರರು ಉಪಸ್ಥಿತರಿದ್ದರು.

Share this article