ಧಾರವಾಡ: ಕಾವ್ಯಕ್ಕೆ ಎಷ್ಟೇ ಮಹತ್ವದ್ದಿದ್ದರೂ ವೈಯಕ್ತಿಕ ನೆಲೆಯಲ್ಲಿ ಹುಟ್ಟಿ ಸಾಮಾಜಿಕ ನೆಲೆಯಲ್ಲಿ ಕೊನೆಗೊಳ್ಳುತ್ತದೆ ಎಂದು ಹಿರಿಯ ಕವಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು.
ಕೇಂದ್ರ ಸಾಹಿತ್ಯ ಅಕಾಡೆಮಿಯು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ “ಕವಿ-ಅನುವಾದಕ” ಎಂಬ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.ಕವಿ ತನ್ನ ಅಂತರಂಗದ ಭಾವನೆಗಳ ಮೂಲಕ ಹೇಳಬೇಕಾದ ಸಂಗತಿಗಳನ್ನು ಪ್ರತಿಮೆಗಳನ್ನು ಬಳಸಿ ರೂಪಕ ಭಾಷೆಯಲ್ಲಿ ನಿವೇದಿಸಿಕೊಳ್ಳಬೇಕಾಗುತ್ತದೆ. ಅದನ್ನು ಎಷ್ಟು ತೀವ್ರವಾಗಿ ಮಾಡಲು ಸಾಧ್ಯವಿದೆಯೋ, ಅಷ್ಟು ಎತ್ತರಕ್ಕೆ ಕಾವ್ಯ ತಲಪುತ್ತದೆ. ಶಬ್ದಗಳ ದುಂದುಗಾರಿಕೆಯನ್ನು ಮಾಡದೇ ಕಡಿಮೆ ಪದಗಳನ್ನು ಬಳಸಿ ಹೆಚ್ಚು ವಿಸ್ತಾರಕ್ಕೆ ವ್ಯಾಪಿಸಿದಾಗಲೇ ಬರವಣಿಗೆ ಯಶಸ್ವಿಯಾದಂತೆ. ಇದೊಂದು ನಿರಂತರ ಅರಿವಿನ ಸೃಜನ ಕ್ರಿಯೆಯಾಗಿದ್ದು ಕವಿಯಾದವನು ಅದನ್ನು ಕಾಯ್ದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಕವಿ ಪಟ್ಟಣಶೆಟ್ಟಿ ತಮ್ಮ ಕೆಲವು ಕವಿತೆಗಳನ್ನು ವಾಚಿಸಿದರು. ಅವುಗಳ ಹಿಂದಿ ಅನುವಾದವನ್ನು ಪ್ರೊ. ಧರಣೇಂದ್ರ ಕುರಕುರಿ ವಾಚಿಸಿದರು. ಪ್ರೊ. ಕುರಕುರಿ ಮಾತನಾಡಿ, ಅನುವಾದ ಸವಾಲಿನ ಕೆಲಸವಾಗಿದ್ದು, ಒಂದು ಭಾಷೆಯ ಸಂಸ್ಕೃತಿಯನ್ನು ಮತ್ತೊಂದು ಭಾಷೆಯ ಪರದೆಯ ಮೇಲೆ ಮೂಡಿಸುವುದು ವಿಶೇಷ ಅನುಭವ ನೀಡುತ್ತದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗರಾಜ ಅಂಗಡಿ ಸ್ವಾಗತಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯ ಚನ್ನಪ್ಪ ಅಂಗಡಿ ಪರಿಚಯಿಸಿದರು.
ಕಾರ್ತಿಕ ಕಣವಿ, ಅಭಿಷೇಕ ಕಣವಿ, ಪ್ರಮೀಳಾ ಜಕ್ಕಣ್ಣವರ, ಶ್ರೀಧರ ಗಸ್ತಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಭಾವಗೀತೆಗಳನ್ನು ಹಾಡಿದರು. ಬಿ.ಎಸ್. ಶಿರೋಳ, ಡಿ.ಎಂ. ಹಿರೇಮಠ, ಬಸು ಬೇವಿನಗಿಡದ, ಹೇಮಾ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಹಿರೇಮಠ, ರಾಜೇಶ್ವರಿ ಮಹೇಶ್ವರಯ್ಯ, ಅರವಿಂದ ಯಾಳಗಿ, ಪ್ರಕಾಶ ಗರುಡ, ಕೆ.ಎಸ್. ಕೌಜಲಗಿ, ಪ್ರಕಾಶ ಕಡಮೆ, ಮಾಯಾ ರಾಮನ್, ಅರವಿಂದ ಬಾಗಲಕೋಟ, ಬಿ.ಆರ್. ಪೊಲೀಸಪಾಟೀಲ, ಭಾರತಿ ಹಿರೇಮಠ, ಜಿನದತ್ತ ಹಡಗಲಿ, ಶಶಿಧರ ತೋಡಕರ ಇದ್ದರು.