ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪ್ರಾಕೃತಿಕ ವೈಪರೀತ್ಯ ಮತ್ತು ಸಾಮಾಜಿಕ ಬದಲಾವಣೆಯನ್ನು ಹಿಡಿದಿಡುವಂತಹ ಪ್ರಯತ್ನವನ್ನು ಮಾಡುವ ಕವಿತೆಗಳು ಅವಿನಾಶಿಯಾಗಿವೆ. ಕಾವ್ಯ ಎಲ್ಲ ಕಾಲವನ್ನು ಹಿಡಿದಿಡುವ ಪ್ರಯತ್ನ ಮಾಡುತ್ತದೆ ಎಂದು ಜೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲ ಹಾಗೂ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಲೇಖಕರ ಸಂಘದ ವತಿಯಿಂದ ಆಯೋಜಿಸಿದ್ದ ಯುಗಾದಿ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಆಧುನಿಕ ಯುಗದಲ್ಲೂ ಸಮಾಜದ ಆಗು-ಹೋಗುಗಳಿಗೆ ಕಾವ್ಯ ಕನ್ನಡಿ ಆಗಿರಬೇಕು, ನವ್ಯ, ಬಂಡಾಯ, ದಲಿತ ಮತ್ತು ಇನ್ನಿತರ ಕಾಲಘಟ್ಟಕ್ಕೆ ಅನುಗುಣವಾಗಿ ಕಾವ್ಯ ವಿಸ್ತಾರಗೊಂಡಿದೆ ಎಂದರು. ಪ್ರಸ್ತುತ ಬಂಡವಾಳಶಾಹಿ ವ್ಯವಸ್ಥೆ ನಡುವೆ ಪ್ರತಿಯೊಬ್ಬರೂ ಬದುಕನ್ನು ನೋಡುವ ರೀತಿಯೇ ಬದಲಾಗಿದೆ. ಅನೇಕ ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದೇವೆ. ಇದು ನಮ್ಮ ಭಾಷೆ ಮತ್ತು ಅಭಿವ್ಯಕ್ತಿಯ ಮೇಲೂ ಪರಿಣಾಮವನ್ನು ಬೀರುತ್ತಿದೆ ಎಂದರು.ವೈವಿಧ್ಯತೆ, ಬಹುಸಂಸ್ಕೃತಿಯನ್ನು ಉಳಿಸಿಕೊಂಡು ಜನರ ಪರವಾಗಿ ಕಾವ್ಯ ಹುಟ್ಟಿದರೂ ಅದನ್ನು ಅವರೇ ವಿರೋಧಿಸುವ ಪರಿಸ್ಥಿತಿ ನಿರ್ಮಾಣವಾಗಿದೆ, ನಮ್ಮೊಳಗೆ ಅರಿವು, ಸಮಾಜದ ಸೂಕ್ಷ್ಮ ಪ್ರಜ್ಞೆ ಬೆಳೆಸಿಕೊಂಡಾಗ ಮಾತ್ರ ಉತ್ತಮ ಸಾಹಿತ್ಯವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದರು. ಕಾವ್ಯ ಸಾರ್ವಕಾಲಿಕವಾಗಿದ್ದು, ಸಮಾಜದ ನೋವುಗಳಿಗೆ ಉತ್ತರ ಕಂಡುಕೊಳ್ಳುವಂತೆ ಇರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಲೇಖಕರ ಸಂಘದ ಕಾರ್ಯದರ್ಶಿ ಬಿಸಲವಾಡಿ ಸೋಮಶೇಖರ್ ಜಿಲ್ಲೆಯ ಸಾಹಿತಿಗಳು ಹಾಗೂ ಕವಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಲೇಖಕರ ಸಂಘ ಸ್ಥಾಪಿಸಲಾಗಿದೆ. ಸಾಹಿತಿಗಳು ಹಾಗೂ ಕಲಾವಿದರನ್ನು ಒಗ್ಗೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು. ಕವಿಗಳಾದ ಕಾಳಿಂಗಸ್ವಾಮಿ ಸಿದ್ದಾರ್ಥ, ಪದ್ಮಾಕ್ಷಿ, ದೇವರಾಜು, ಬಳೇಪೇಟೆ ಪ್ರಕಾಶ್, ಪ್ರಕಾಶ್ ಪೊನ್ನಾಚಿ, ಸುಂದರ್ ಕಲಿವೀರ, ಎನ್. ಧನಲಕ್ಷ್ಮೀ, ಯೋಗೇಶ್ ಗುಂಡ್ಲುಪೇಟೆ, ಗುರುಲಿಂಗಮ್ಮ, ಮಂಜುಳಾ ನಾಗರಾಜು, ಕೆಂಪರಾಜು ಕಾಗಲವಾಡಿ, ಮಹೇಶ್ ಸ್ವರಚಿತ ಕವಿತೆಗಳನ್ನು ವಾಚನ ಮಾಡಿದರು. ಕಸಾಪ ಮಾಜಿ ಅಧ್ಯಕ್ಷ ನಾಗಮಲ್ಲಪ್ಪ, ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ರೇಚಂಬಳ್ಳಿ ದುಂಡುಮಾದಯ್ಯ, ಕವಯಿತ್ರಿ ಅಶ್ವಿನಿ ಇದ್ದರು.