5 ಹುಲಿಗಳ ಸಾವಿಗೆ ವಿಷಪ್ರಾಶನ ಕಾರಣ!

KannadaprabhaNewsNetwork |  
Published : Jun 28, 2025, 01:33 AM ISTUpdated : Jun 28, 2025, 06:05 AM IST
ಮಲೆಮಹದೇಶ್ವರ ಬೆಟ್ಟ ವನ್ಯಧಾಮದ ಮೀಣ್ಯಂಗೆ ಬಳಿ ಹುಲಿಗಳ ಅಂತ್ಯಕ್ರಿಯೆಯು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಸಮ್ಮುಖದಲ್ಲಿ ನಡೆಯಿತು. | Kannada Prabha

ಸಾರಾಂಶ

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಚಾಮರಾಜನಗರ ಜಿಲ್ಲೆಯ 5 ಹುಲಿಗಳ ಸಾವಿನ ಪ್ರಕರಣದ ತನಿಖೆ ಮಹತ್ವದ ತಿರುವು ಪಡೆದಿದೆ. ಬೇಟೆ ಆಡಿದ್ದ ಹಸುವನ್ನು ತಿಂದು 4 ಮರಿ ಮತ್ತು ತಾಯಿ ಹುಲಿ ಸಾವನ್ನಪ್ಪಲು ವಿಷ ಪ್ರಾಶನ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.  

 ಚಾಮರಾಜನಗರ :  ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಚಾಮರಾಜನಗರ ಜಿಲ್ಲೆಯ 5 ಹುಲಿಗಳ ಸಾವಿನ ಪ್ರಕರಣದ ತನಿಖೆ ಮಹತ್ವದ ತಿರುವು ಪಡೆದಿದೆ. ಬೇಟೆ ಆಡಿದ್ದ ಹಸುವನ್ನು ತಿಂದು 4 ಮರಿ ಮತ್ತು ತಾಯಿ ಹುಲಿ ಸಾವನ್ನಪ್ಪಲು ವಿಷ ಪ್ರಾಶನ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಇದೇ ವೇಳೆ, ಈ ಕೃತ್ಯದ ಹಿಂದಿದ್ದಾರೆ ಎನ್ನಲಾದ 6 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಚಾಮರಾಜನಗರ ಹನೂರು ತಾಲೂಕಿನ ಹೂಗ್ಯಂ ವಲಯದ ಮೀಣ್ಯಂನಲ್ಲಿ 5 ಹುಲಿಗಳು ಮೃತಪಟ್ಟಿದ್ದವು. ಶುಕ್ರವಾರ ಇವುಗಳ ಮರಣೋತ್ತರ ಪರೀಕ್ಷೆ ನಡೆಯಿತು. ಈ ವೇಳೆ ಹುಲಿಗಳ ಸಾವಿಗೆ ವಿಷ ಪ್ರಾಶನ ಕಾರಣ ಎಂಬುದು ಕಂಡು ಬಂದಿದೆ. ಇದನ್ನು ಅರಣ್ಯಾಧಿಕಾರಿಗಳು ದೃಢಪಡಿಸಿದ್ದಾರೆ.

ಇನ್ನು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರ ಸಮ್ಮುಖದಲ್ಲಿ ಹುಲಿಗಳ ಕಳೆಬರವನ್ನು ಸುಟ್ಟುಹಾಕಲಾಯಿತು. ಈ ಮಧ್ಯೆ ಹಸುವಿನ ದೇಹಕ್ಕೆ ಕ್ರಿಮಿನಾಶಕ ಸಿಂಪಡಿಸಿದ ಶಂಕೆ ಮೇರೆಗೆ 6 ಮಂದಿಯನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ, ಕೇಂದ್ರ ಸರ್ಕಾರ ಹುಲಿಗಳ ಸಾವಿನ ತನಿಖೆಗೆ ವಿಶೇಷ ತಂಡವನ್ನು ರಚಿಸಿದೆ.

ವಿಧಿವಿಜ್ಞಾನ ಲ್ಯಾಬ್‌ಗೆ ರವಾನೆ:

ಮೃತಪಟ್ಟ 5 ಹುಲಿಗಳಲ್ಲಿ ಒಂದು ತಾಯಿ ಹುಲಿ, 3 ಹೆಣ್ಣು ಹುಲಿ ಒಂದು ಗಂಡು ಹುಲಿ ಮರಿಗಳಾಗಿವೆ. ತಾಯಿ ಹುಲಿಗೆ 8 ವರ್ಷ ಮತ್ತು ಮರಿಗಳಿಗೆ 8-10 ತಿಂಗಳು ಎಂದು ಅರಣ್ಯ ಇಲಾಖೆ ಅಂದಾಜು ಮಾಡಿದೆ. ಹುಲಿಗಳು ಮೃತಪಟ್ಟು 3 ದಿನಗಳಾಗಿದ್ದು, ಹಸುವಿನ ಮೃತದೇಹಕ್ಕೆ ಕ್ರಿಮಿನಾಶಕ ಸಿಂಪಡಿಸಿದ್ದರಿಂದ ಹಸುವಿನ ಮಾಂಸ ತಿಂದಿದ್ದ ಹುಲಿಗಳು ಮೃತಪಟ್ಟಿವೆ. ಹೆಚ್ಚಿನ ಮಾಹಿತಿ, ಯಾವ ವಿಷ, ಎಷ್ಟು ಪ್ರಮಾಣದಲ್ಲಿ ಹುಲಿಗಳ ಮೈ ಸೇರಿದೆ ಎಂದು ಖಚಿತ ಪಡಿಸಿಕೊಳ್ಳಲು ಹುಲಿಗಳು ಮತ್ತು ಹಸುವಿನ ಅಂಗಾಂಗದ ಕೆಲವು ಭಾಗಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.

ಇನ್ನು ವಿಷಪ್ರಾಶಣದಿಂದ ಅಸುನೀಗಿದ ಹುಲಿ ಕುಟುಂಬದ ಕಳೇಬರಗಳನ್ನು ಎನ್‌ಟಿಸಿಎ ಮಾರ್ಗಸೂಚಿ ಅನ್ವಯ ಅಂತ್ಯಕ್ರಿಯೆ ನಡೆಸಲಾಯಿತು. ಹುಲಿಗಳ ಮೃತದೇಹದ ಆಸುಪಾಸಲ್ಲೇ ಸಿಕ್ಕಿದ್ದ ಹಸುವಿನ ದೇಹವನ್ನು ಪ್ರತ್ಯೇಕವಾಗಿ ಸುಡಲಾಗಿದೆ.

6 ದನಗಾಹಿಗಳು ವಶಕ್ಕೆ:

ಹುಲಿ ಬೇಟೆಯಾಡಿದ್ದ ಹಸುವಿಗೆ ಕ್ರಿಮಿನಾಶಕ ಹಾಕಿರುವ ಶಂಕೆ ಮೇರೆಗೆ ಹನೂರು ತಾಲೂಕಿನ ಐದು ಹಾಗೂ ತಮಿಳುನಾಡು ಮೂಲದ ಒಬ್ಬ ಸೇರಿದಂತೆ ಒಟ್ಟು 6 ಮಂದಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಮೃತಪಟ್ಟಿರುವ ಹಸುವಿನ ಮಾಲೀಕ ಇನ್ನೂ ಯಾರೆಂಬುದು ಪತ್ತೆಯಾಗಿಲ್ಲ, ಪೊಲೀಸರು ಇದರ ಬೆನ್ನು ಬಿದ್ದಿದ್ದು ಸಿಡಿಆರ್ ಮತ್ತು ಟವರ್ ಲೊಕೇಷನ್ ಆಧಾರದಲ್ಲಿ ವಿಷ ಹಾಕಿದವರ ಮತ್ತು ಮಾಲೀಕನ ಪತ್ತೆಗೆ ಬಲೆ ಬೀಸಿದ್ದಾರೆ.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ:

5 ಹುಲಿಗಳು ಮೃತಪಟ್ಟಿದ್ದನ್ನು ಗಂಭೀರವಾಗಿ ಪರಿಗಣಿಸಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮೀಣ್ಯಂಗೆ ಭೇಟಿ ಕೊಟ್ಟು ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಹುಲಿಗಳ ಅಂತ್ಯಕ್ರಿಯೆಯು ಕೂಡ ಸಚಿವರ ಸಮ್ಮುಖದಲ್ಲಿ ನಡೆಯಿತು. ಬಳಿಕ ಮಾಧ್ಯಮದವರೊಂದಿಗೆ ಖಂಡ್ರೆ ಮಾತನಾಡಿ, ವಿಷ ಪ್ರಾಶನದಿಂದ ಹುಲಿಗಳು ಅಸುನೀಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ, ತಪ್ಪಿತಸ್ಥರ ವಿರುದ್ಧ ಕಾನೂನು ರಿತ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ರಸ್ತೆ ಸಮೀಪವೇ ಹುಲಿಗಳು ಸತ್ತಿದ್ದರೂ ಗೊತ್ತಾಗಲು 3 ದಿನ ಬೇಕಾಗಿದ್ದು ಅರಣ್ಯ ಇಲಾಖೆ ನಿರ್ಲಕ್ಷ್ಯ ಇಲ್ಲವೇ ಎಂಬ ಪ್ರಶ್ನೆಗೆ ಗರಂ ಆಗಿ ಹಾರಿಕೆ ಉತ್ತರ ಕೊಟ್ಟು ನಡೆದರು.

ವಿಶೇಷ ತನಿಖಾ ತಂಡ:

ಹುಲಿಗಳ ಸಾವಿನ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ವಿಶೇಷ ತನಿಖಾ ತಂಡ ರಚಿಸಿದೆ. ಬೆಂಗಳೂರು ಪ್ರಾದೇಶಿಕ ಕಚೇರಿಯ ಎಐಜಿವಿ ಹರಿಣಿ ಹಾಗೂ ದಕ್ಷಿಣ ವಿಭಾಗದ ಡಬ್ಯ್ಲುಸಿಸಿಬಿ ಆರ್‌ಡಿಡಿ ತೆನ್‌ಮೋಳಿ ತನಿಖಾ ತಂಡದಲ್ಲಿದ್ದು 2 ವಾರದೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ತನಿಖೆಗೆ ಸಹಕಾರ ನೀಡುವಂತೆ ಎನ್‌ಟಿಸಿಎ ಡಿಐಡಿಎಫ್‌ ಜಿ.ಭಾನುಮತಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವಿಷಪ್ರಾಶನದಿಂದ ಹುಲಿಗಳ ಸಾವು: ಸಿಸಿಎಫ್‌

ಮಲೆಮಹದೇಶ್ವರ ಬೆಟ್ಟ ವನ್ಯಧಾಮದ ಹೂಗ್ಯಂ ವಲಯದ ಮಿಣ್ಯಂನಲ್ಲಿ ಹುಲಿಗಳು ವಿಷಪ್ರಾಶನದಿಂದ ಸಾವನ್ನಪ್ಪಿವೆ. ಹುಲಿಗಳ ಹಾಗೂ ಹಸುವಿನ ಅಂಗಾಂಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹುಲಿಗಳ ದೇಹಕ್ಕೆ ಸೇರಿರುವ ವಿಷ ಯಾವುದು, ಎಷ್ಟು ಪ್ರಮಾಣದಲ್ಲಿ ಸೇರಿದೆ ಎಂಬುಂದು ವರದಿ ಬಳಿಕ ತಿಳಿಯಲಿದೆ. ಹುಲಿ ಬೇಟೆಯಾಡಿದ ನಂತರ ಹಸುವಿನ ಕಳೇಬರಹಕ್ಕೆ ವಿಷ ಹಾಕಲಾಗಿದೆಯೇ ಅಥವಾ ವಿಷ ಪ್ರಶಾನವಾದ ಹಸುವನ್ನು ಕಾಡಿನೊಳಗೆ ಇರಿಸಲಾಗಿತ್ತೇ ಎಂಬ ಮಾಹಿತಿ ಕಲೆಯಾಕಲಾಗುತ್ತಿದೆ.

- ಟಿ.ಹೀರಾಲಾಲ್‌, ಮುಖ್ಯ ಅರಣ್ಯಸಂರಕ್ಷಣಾಧಿಕಾರಿ, ಚಾಮರಾಜನಗರ

ಒಂದೇ ಸಾರಿ 5 ಹುಲಿ

ಸಾವು ಘೋರ: ಡಿಸಿಎಫ್‌

ಒಂದೇ ಬಾರಿ ಎರಡು ಮೂರು ಕಾಡು ಪ್ರಾಣಿಗಳು ಸಾವನ್ನಪ್ಪಿದ್ದು ಕಂಡಿದ್ದೇನೆ. ಹಿಂದೆ ನಾಗರಹೊಳೆ ಅಭಯಾರಣ್ಯದಲ್ಲೂ ಈ ರೀತಿ‌ ಘಟನೆ ಆಗಿತ್ತು. ಆದರೆ ಒಂದೇ ಸಾರಿ 5 ಹುಲಿ ಸಾವನ್ನಪ್ಪಿರೋದು ಘೋರ. ಇದನ್ನು ಎಸಿಎಫ್ ತಂಡ ತನಿಖೆ ಮಾಡುತ್ತಿದೆ. ಮರಣೋತ್ತರ ಪರೀಕ್ಷೆಯೂ ತನಿಖೆ ಒಂದು ಭಾಗವಾಗಿದ್ದು, ಪ್ರಾಥಮಿಕವಾಗಿ ವಿಷ ಪ್ರಾಶನದಿಂದ ಸಾವು ಸಂಭವಿಸಿರೋದು ಬೆಳಕಿಗೆ ಬಂದಿದೆ. ಪಶು ಸಂಗೋಪನೆ ಇಲಾಖೆ ಕೂಡ ಕಾಡಂಚಿನ ಜನರನ್ನ ಜಾಗೃತಿಗೊಳಿಸಬೇಕು. ಹೈಬ್ರೀಡ್ ಹಸುಗಳನ್ನು ಕೊಡಿಸಿ ಕೊಟ್ಟಿಗೆಯಲ್ಲೇ ಸಾಕುವಂತೆ ನೋಡಿಕೊಳ್ಳಬೇಕು.

-ಚಕ್ರಪಾಣಿ, ಡಿಸಿಎಫ್‌, ಮಲೆಮಹದೇಶ್ವರ ಬೆಟ್ಟ ವನ್ಯಧಾಮ.

PREV
Read more Articles on

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ