ಕನ್ನಡಪ್ರಭ ವಾರ್ತೆ ಮಂಗಳೂರುಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಕೇಸಿನ ದೂರಿಗೆ ಸಂಬಂಧಿಸಿ ಅಂತಹ ಶವಗಳ ಮರಣೋತ್ತರ ಪರೀಕ್ಷಾ ವರದಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.
ಹೆಚ್ಚುವರಿ ಪೊಲೀಸರ ನೇಮಕ: ಎಸ್‌ಐಟಿ ತಂಡಕ್ಕೆ ಇನ್ನೂ 20 ಮಂದಿ ಪೊಲೀಸ್ ಅಧಿಕಾರಿಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗಿದೆ. ಹೆಚ್ಚುವರಿ ಸೇರ್ಪಡೆಯಾದವರು ಎಲ್ಲ ದ.ಕ. ಜಿಲ್ಲೆಯ ಹೊರಗಿನ ಅಧಿಕಾರಿಗಳಾಗಿದ್ದಾರೆ.
ಎಸ್‌ಐಟಿ ತಂಡಕ್ಕೆ ದ.ಕ. ಜಿಲ್ಲೆಯ ಪೊಲೀಸರ ಬದಲು ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಅಧಿಕಾರಿ ಹಾಗೂ ಸಿಬ್ಬಂದಿಯ ನೇಮಕ ಮಾಡಲಾಗಿದೆ. ತನಿಖೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹೊರಗಿನ ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಿರುವ ಸಾಧ್ಯತೆ ಹೇಳಲಾಗುತ್ತಿದೆ. ಈ ತಂಡದಲ್ಲಿ ದ.ಕ. ಜಿಲ್ಲೆಯ ಒಂದಿಬ್ಬರು ಮಾತ್ರ ಇದ್ದಾರೆ. ಉಳಿದಂತೆ ಉಡುಪಿ, ಕುಂದಾಪುರ, ಬೈಂದೂರು, ಶಿರಸಿ, ಚಿಕ್ಕಮಗಳೂರು ಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದಾರೆ. ದ.ಕ. ಮೂಲದ ಖಡಕ್ ಅಧಿಕಾರಿ ಸಿ.ಎ.ಸೈಮನ್ ಸೇರಿ 20 ಮಂದಿಯ ತಂಡ ಇದಾಗಿದೆ. ಪ್ರಣವ್ ಮೊಹಾಂತಿ ನೇತೃತ್ವದ ನಾಲ್ವರು ಐಪಿಎಸ್‌ಗಳಿಗೆ ಈ ಮಂದಿ ಸಾಥ್ ನೀಡಲಿದ್ದಾರೆ. ಎಸ್ಪಿ, ಡಿಎಸ್ಪಿ, ಪೊಲೀಸ್ ಇನ್‌ಸ್ಪೆಕ್ಟರ್, ಸಿಪಿಐ, ಎಸ್ಐ, ಎಎಸ್ಐ, ಹೆಡ್ ಕಾನ್‌ಸ್ಟೇಬಲ್ ಒಳಗೊಂಡ ತಂಡವಿದ್ದು, 1 ಎಸ್ಪಿ, 2 ಡಿಎಸ್ಪಿ, 4 ಪಿಐ, 1ಸಿಪಿಐ, 7 ಪಿಎಸ್ಐ,1 ಎಎಸ್ಐ, 4 ಹೆಡ್ ಕಾನ್‌ಸ್ಟೇಬಲ್, ಡಿಸಿಆರ್‌ಇ, ಸಿಇಎನ್, ಕೋಸ್ಟಲ್ ಸೆಕ್ಯುರಿಟಿ ಪೊಲೀಸ್, ಮೆಸ್ಕಾಂ ಪೊಲೀಸರ ತಂಡವನ್ನು ರಚಿಸಲಾಗಿದೆ.