ಕೊಲ್ಲಾಪುರದಲ್ಲಿ ಗೋಪಾಲ ಜೋಶಿ ಬಂಧಿಸಿ ಹುಬ್ಬಳ್ಳಿಗೆ ಕರೆತಂದ ಪೊಲೀಸರು

KannadaprabhaNewsNetwork |  
Published : Oct 20, 2024, 01:58 AM ISTUpdated : Oct 20, 2024, 01:59 AM IST
56456 | Kannada Prabha

ಸಾರಾಂಶ

ನಟ ದರ್ಶನ್ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಸಿಪಿ ಚಂದನ್ ನೇತೃತ್ವದ ಬೆಂಗಳೂರಿನ ಬಸವೇಶ್ವರ ನಗರ ಠಾಣೆ ಪೊಲೀಸರ ತಂಡವು ಗೋಪಾಲ ಜೋಶಿ ಅ‍ವರನ್ನು ಕೊಲ್ಲಾಪುರದಲ್ಲಿ ವಶಕ್ಕೆ ಪಡೆದು ಹುಬ್ಬಳ್ಳಿಗೆ ಕರೆತಂದಿದೆ.

ಹುಬ್ಬಳ್ಳಿ:

ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಹೇಳಿ ₹2 ಕೋಟಿ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಗೋಪಾಲ ಜೋಶಿ ಅವರನ್ನು ಬೆಂಗಳೂರು ಪೊಲೀಸರು ಶನಿವಾರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ವಶಕ್ಕೆ ಪಡೆದಿದ್ದಾರೆ.

ನಂತರ ಅಲ್ಲಿಂದ ನೇರವಾಗಿ ಹುಬ್ಬಳ್ಳಿಯ ನಿವಾಸಕ್ಕೆ ಕರೆತಂದು ಪಂಚನಾಮೆ ಮಾಡಿದ್ದಾರೆ. ಬಳಿಕ ಇಲ್ಲಿನ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ ಘಟನೆ ನಡೆದಿದೆ.

ನಟ ದರ್ಶನ್ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಸಿಪಿ ಚಂದನ್ ನೇತೃತ್ವದ ಬೆಂಗಳೂರಿನ ಬಸವೇಶ್ವರ ನಗರ ಠಾಣೆ ಪೊಲೀಸರ ತಂಡವು ಗೋಪಾಲ ಜೋಶಿ ಅ‍ವರನ್ನು ಕೊಲ್ಲಾಪುರದಲ್ಲಿ ವಶಕ್ಕೆ ಪಡೆದು ನಂತರ ಇಲ್ಲಿನ ಇಂದಿರಾ ಕಾಲನಿಯ ಮನೆಗೆ ಕರೆತಂದರು. ಮನೆಯಲ್ಲಿ ಕೆಲಕಾಲ ತಪಾಸಣೆ ನಡೆಸಿದ ಪೊಲೀಸರು, ನಗದು ಹಾಗೂ ಕೆಲ ದಾಖಲೆಗಳನ್ನು ವಶಪಡಿಸಿಕೊಂಡರು. ಈ ವೇಳೆ ಸಾಕಷ್ಟು ಪ್ರಮಾಣದ ಹಣ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ನಂತರ ಅಲ್ಲಿಂದ ನೇರವಾಗಿ ಕೇಶ್ವಾಪುರ ಪೊಲೀಸ್‌ ಠಾಣೆಗೆ ಕರೆತಂದು ಕೆಲಕಾಲ ವಿಚಾರಣೆಗೆ ಒಪಡಿಸಲಾಯಿತು. ನಂತರ ದೂರುದಾರೆ ಸುನಿತಾ ಚವ್ಹಾಣ ಅವರನ್ನೂ ಠಾಣೆಗೆ ಕರೆಸಿದ ಪೊಲೀಸರು ಅವರಿಂದ ಪ್ರಕರಣದ ಕುರಿತು ಮಾಹಿತಿ ಪಡೆದುಕೊಂಡರು.

ಪೊಲೀಸರ ವಿಚಾರಣೆಯ ನಂತರ ಹೊರಬಂದ ದೂರುದಾರೆ ಸುನಿತಾ ಚವ್ಹಾಣ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಪ್ರಕರಣವು ಇನ್ನೂ ತನಿಖಾ ಹಂತದಲ್ಲಿದೆ. ಈ ಕುರಿತು ನಾನು ಯಾವುದೇ ರೀತಿಯ ಮಾಹಿತಿ ನೀಡುವುದಿಲ್ಲ ಎಂದು ಹೇಳಿ ಅಲ್ಲಿಂದ ಹೊರಟುಹೋದರು.

ಪ್ರಹ್ಲಾದ ಜೋಶಿ ಪಾತ್ರ ಏನೂ ಇಲ್ಲ:ಲೋಕಸಭಾ ಟಿಕೆಟ್ ನೀಡುವುದಾಗಿ ವಂಚಿಸಿದ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಹೆಸರನ್ನು ಸುಮ್ಮನೆ ಎಳೆದು ತರಲಾಗುತ್ತಿದೆ. ಇದರಲ್ಲಿ ಅವರ ಪಾತ್ರ ಏನೂ ಇಲ್ಲ ಎಂದು ದೂರುದಾರೆ ಸುನಿತಾ ಚವ್ಹಾಣ ಸ್ಪಷ್ಟಪಡಿಸಿದರು.

ಇಲ್ಲಿನ ಕೇಶ್ವಾಪುರ ಪೊಲೀಸ್‌ ಠಾಣೆಗೆ ಶನಿವಾರ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ವಿರುದ್ಧ ನಾನು ದೂರು ಕೊಟ್ಟಿದ್ದೇನೋ ಅವರ ಬಗ್ಗೆ ಮಾತ್ರ ಮಾಧ್ಯಮದವರು ವಿಷಯ ಪ್ರಸ್ತಾಪ ಮಾಡಬೇಕು. ದೇವಾನಂದ ಚವ್ಹಾಣ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಅಮಿತ್ ಶಾ ಮತ್ತು ಮಾಜಿ ಪ್ರಧಾನಿ ಅವರ ಪಾತ್ರವೇನೂ ಇಲ್ಲ. ಅವರ ಹೆಸರು ಕೇಳಿ ಬರುತ್ತಿರುವುದು ನನಗೆ ನೋವುಂಟು ಮಾಡಿದೆ. ಪ್ರಹ್ಲಾದ ಜೋಶಿ ಅವರು ಒಳ್ಳೆಯವರು, ಪಾಪದ ವ್ಯಕ್ತಿ, ಅವರನ್ನು ಭೇಟಿ ಆಗಲು ಆಗಿಲ್ಲ. ಈ ಪ್ರಕರಣದಲ್ಲಿ ಅವರ ಪಾತ್ರವೇನೂ ಇಲ್ಲ. ಅವರ ಹೆಸರನ್ನು ಗೋಪಾಲ ಜೋಶಿ ಅವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.ಪಕ್ಷದಿಂದ ನಮಗೆ ಟಿಕೆಟ್ ಸಿಗುವ ಸಾಧ್ಯತೆ ಇತ್ತು.‌ ಈ ವೇಳೆ ಶೇಖರ ನಾಯ್ಕ ಎಂಬುವವನು ಕರೆ ಮಾಡಿ ಉತ್ತರ ಕರ್ನಾಟಕ ಭಾಗದಿಂದ ನಿಮ್ಮನ್ನು ಪಕ್ಷದಿಂದ ಕೈಬಿಡುವುದಿಲ್ಲ ಎಂದು ತಿಳಿಸಿದ್ದರು. ನಂತರದಲ್ಲಿ ಬೇರೆಯವರಿಗೆ ಟಿಕೆಟ್ ದೊರೆತಿದೆ ಎಂದು ಗೊತ್ತಾದಾಗ ನಾನು ಸುಮ್ಮನಾಗಿದ್ದೆ. ಆಗ ‌ಗೋಪಾಲ ಜೋಶಿ ಅವರ ಮೊಬೈಲ್‌ನಿಂದ ಕರೆಮಾಡಿ, ಈಗಿರುವ ಸಂಸದರು ಅನಾರೋಗ್ಯವಾಗಿದ್ದಾರೆ. ಹಾಗಾಗಿ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರು. ಆದರೆ, ನನ್ನಿಂದ ಹಣ ಪಡೆದು ಟಿಕೆಟ್‌ ನೀಡದೇ, ಹಣ‍ನ್ನು ಮರಳಿಸದೇ ಇರುವುದರಿಂದ ನನಗೆ ಅನ್ಯಾಯವಾಗಿದ್ದು, ಹಾಗಾಗಿ ನ್ಯಾಯಕ್ಕಾಗಿ ನಾನು ಠಾಣೆಯ ಮೆಟ್ಟಿಲು ಏರಿರುವುದಾಗಿ ತಿಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ