ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು ಸರಿಯಲ್ಲ: ಟ್ರಸ್ಟ್ ಸದಸ್ಯ ಆನಂದ್ ಆಕ್ರೋಶ

KannadaprabhaNewsNetwork | Published : Feb 1, 2024 2:03 AM

ಸಾರಾಂಶ

ನಮ್ಮ ಗ್ರಾಪಂನಲ್ಲಿ‌ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷದ ಎಲ್ಲ ಬೆಂಬಲಿತ ಸದಸ್ಯರು ಇದ್ದಾರೆ. ಎಲ್ಲಾ ಪಕ್ಷದವರು ಹನುಮ ಧ್ವಜಕ್ಕೆ ಬೆಂಬಲ‌ ನೀಡಿದ್ದಾರೆ. ಈಗಲೂ ಎಲ್ಲರೂ ಧ್ವಜ ಬೇಕು ಅಂತ ಹೇಳ್ತಿದ್ದಾರೆ. ಆದರೆ, ಪೊಲೀಸರು ರಾಜಕೀಯ ಮಾಡಿ ನಮ್ಮನ್ನು ಹೊಡೆಯುತ್ತಿದ್ದಾರೆ. ನಾನೊಬ್ಬ ರಿಟೈರ್ಡ್ ಪಿಟಿ ಮಾಸ್ಟರ್. ನಮಗೆ ದೇಶ ಭಕ್ತಿಯನ್ನು ಬೇರೆಯವರು ಹೇಳಿಕೊಡುವ ಆಗತ್ಯವಿಲ್ಲ. ಧಾರ್ಮಿಕ ವಿಚಾರ ಬಂದಾಗ ಗ್ರಾಮದ ಯುವಕರು ಆಕ್ರೋಶವಾಗಿದ್ದು ನಿಜ. ಅದನ್ನೇ ನೆಪಮಾಡಿಕೊಂಡು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಧಾರ್ಮಿಕ ವಿಚಾರ ಬಂದಾಗ ಗ್ರಾಮದ ಯುವಕರು ಆಕ್ರೋಶವಾಗಿದ್ದು ನಿಜ. ಅದನ್ನೇ ನೆಪಮಾಡಿಕೊಂಡು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು ಸರಿಯಲ್ಲ ಎಂದು ಕೆರೆಗೋಡು ಗೌರಿಶಂಕರ ಸೇವಾ ಟ್ರಸ್ಟ್ ಸದಸ್ಯ ಆನಂದ್ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಗ್ರಾಪಂನಲ್ಲಿ‌ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷದ ಎಲ್ಲ ಬೆಂಬಲಿತ ಸದಸ್ಯರು ಇದ್ದಾರೆ. ಎಲ್ಲಾ ಪಕ್ಷದವರು ಹನುಮ ಧ್ವಜಕ್ಕೆ ಬೆಂಬಲ‌ ನೀಡಿದ್ದಾರೆ ಎಂದರು.

ಈಗಲೂ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಲ್ಲರೂ ಧ್ವಜ ಬೇಕು ಅಂತ ಹೇಳ್ತಿದ್ದಾರೆ. ಆದರೆ, ಪೊಲೀಸರು ರಾಜಕೀಯ ಮಾಡಿ ನಮ್ಮನ್ನು ಹೊಡೆಯುತ್ತಿದ್ದಾರೆ. ನಾನೊಬ್ಬ ರಿಟೈರ್ಡ್ ಪಿಟಿ ಮಾಸ್ಟರ್. ನಮಗೆ ದೇಶ ಭಕ್ತಿಯನ್ನು ಬೇರೆಯವರು ಹೇಳಿಕೊಡುವ ಆಗತ್ಯವಿಲ್ಲ ಎಂದು ಕಿಡಿಕಾರಿದರು.

108 ಅಡಿ ಧ್ವಜಸ್ತಂಭದಲ್ಲಿ ಚಿಕ್ಕ ರಾಷ್ಟ್ರಧ್ವಜ ಹಾರಿಸಿದ್ದಾರೆ. ಅವರು ಹಾರಿಸಿರುವ ಧ್ವಜ ಮನೆ ಮೇಲೆ‌ ಹಾರಿಸೋ ಧ್ವಜ. ಎಷ್ಟು ಉದ್ದದ ಧ್ವಜಸ್ತಂಭಕ್ಕೆ ಇಷ್ಟು ಅಗಲ ಧ್ವಜ ಹಾಕಬೇಕು ಅಂತ ಇದೆ. ಇವರು‌ ಹಾರಿಸಿರೋ ಬಾವುಟ ಹಾರಾಡುತ್ತಿಲ್ಲ. ಅದನ್ನು ನೋಡಿ‌ ನಮ್ಮ ಕಣ್ಣಲ್ಲಿ ನೀರು ಬರುತ್ತಿದೆ ಎಂದು ವಿಷಾದಿಸಿದರು.

ನಮ್ಮೂರಿಗೆ ಬೇರೆ ಜಿಲ್ಲೆಯಿಂದ ಯಾರು ಬಂದಿಲ್ಲ. ಪೊಲೀಸರು ನಮ್ಮೂರಿನವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಆ ವೇಳೆ ಕೆಲವರು ಕಲ್ಲು ತೂರಿರಬಹುದು. ಆ ರೀತಿ ಘಟನೆಗೆ ಕಾರಣ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಾರಣ. ಹೆಂಗಸರಿಗೂ ಪೊಲೀಸರು ಹೊಡೆದಿದ್ದಾರೆ. ಪೊಲೀಸ್ ಠಾಣೆಗೆ ಯುವಕರನ್ನು ಕೂರಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಸಿಎಂರನ್ನು ಮೆರವಣಿಗೆ ಮಾಡಿದ್ದೇವೆ:

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೆಡಿಎಸ್‌ನಲ್ಲಿದ್ದಾಗ ನಮ್ಮೂರಿಗೆ ಬಂದಿದ್ದಾರೆ. ಆಗ 101 ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಿದ್ದೇವೆ. ಅಂದು ಅವರನ್ನು‌ ಕರೆದು ಕನ್ನಡರಾಜ್ಯೋತ್ಸವ ಮಾಡಿದ್ದೇವೆ. ಅದನ್ನು ಮರೆತಿದ್ದೀರಾ ಎಂದು ಪ್ರಶ್ನೆ ಮಾಡಿದರು.

ಜಿಲ್ಲಾಡಳಿತ ನಾಳೆಯೇ ಶಾಂತಿ ಸಭೆ ಮಾಡಲಿ. ನಮ್ಮೂರಿನಲ್ಲಿ ಮತ್ತೆ ಶಾಂತಿ ನೆಲಸುವಂತೆ ಮಾಡಬೇಕು. ಮೊದಲು ಇಲ್ಲಿ ಆಗಿರುವ ಸಮಸ್ಯೆ ಬಗೆಹರಿಸಬೇಕು. ಪ್ರಕರಣ ಸತ್ಯಾಸತ್ಯತೆ ತಿಳಿಯಲು ಸಿಬಿಐಗೆ ವಹಿಸಬೇಕು. ನಮಗೆ ನ್ಯಾಯ ಹಾಗೂ ಶಾಂತಿ ಬೇಕು ಅಷ್ಟೇ ಎಂದು ಆಗ್ರಹಿಸಿದರು.

ಮನೆಗಳ ಮೇಲೆ ರಾರಾಜಿಸುತ್ತಿರುವ ಕೇಸರಿ ಧ್ವಜಮಂಡ್ಯ: ಹನುಮಧ್ವಜ ತೆರವು ವಿರೋಧಿಸಿ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಕೇಸರಿಧ್ವಜ ಅಭಿಯಾನ ಆರಂಭವಾಗಿದೆ.ಸ್ವಯಂ ಪ್ರೇರಿತರಾಗಿ ತಮ್ಮ ಮನೆಗಳ ಮೇಲೆ ಕೇಸರಿಧ್ವಜವನ್ನು ಗ್ರಾಮಸ್ಥರು ಹಾರಿಸುತ್ತಿದ್ದಾರೆ. ಗ್ರಾಮದ ಬಹುತೇಕ ಮನೆಗಳ ಕೇಸರಿ ಧ್ವಜ ರಾರಾಜಿಸುತ್ತಿದೆ. ಫೆ.2ರಿಂದ ಮನೆ ಮನೆಗೆ ಹನುಮಧ್ವಜ ಅಭಿಯಾನ ಆರಂಭಿಸಲು ಬಿಜೆಪಿ ನಿರ್ಧರಿಸಿದೆ. ಬಿಜೆಪಿ ಅಭಿಯಾನಕ್ಕೂ ಮುನ್ನವೇ ತಮ್ಮ ಮನೆಗಳ ಮೇಲೆ ಕೇಸರಿ ಧ್ವಜವನ್ನು ಗ್ರಾಮಸ್ಥರು ಹಾರಿಸುತ್ತಿದ್ದಾರೆ.

Share this article