ಗೂಂಡಾಗಳ ಅಡ್ಡೆಯಾದ ಪೊಲೀಸ್‌ ಆಯುಕ್ತರ ಕಚೇರಿ: ಬೆಲ್ಲದ

KannadaprabhaNewsNetwork |  
Published : May 01, 2026, 02:00 AM IST
30ಡಿಡಬ್ಲೂಡಿ1ಅರವಿಂದ ಬೆಲ್ಲದ | Kannada Prabha

ಸಾರಾಂಶ

ನಾಡಿನ ವಿವಿಧ ಕಡೆಗಳಿಂದ ಧಾರವಾಡಕ್ಕೆ ವಿದ್ಯಾರ್ಥಿಗಳು ಬರುತ್ತಾರೆ. ಇದು ಧಾರವಾಡದ ಅಸ್ಮಿತೆ ಹೌದು. ಆದರೆ, ಡ್ರಗ್ ಪೆಡ್ಲರ್ ಬಳಸಿಕೊಂಡು ವಿದ್ಯಾರ್ಥಿಗಳು, ಅವರ ಪಾಲಕರಿಂದ ಹಣ ಮಾಡುವ ಕಾರ್ಯಕ್ಕೆ ಪೊಲೀಸರು ಕೈ ಹಾಕಿದ್ದಾರೆ.

ಧಾರವಾಡ:

ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮೀಷನರೇಟ್‌ ಕಚೇರಿಯು ಗೂಂಡಾಗಳ ಅಡ್ಡೆಯಾಗಿದ್ದು, ಅನೇಕ ಡೀಲ್‌ಗಳು ಆಯುಕ್ತರ ಸಮ್ಮುಖದಲ್ಲಿಯೇ ನಡೆಯುತ್ತಿವೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿದವರು, ಗೂಂಡಾಗಳು ಪೊಲೀಸ್‌ ಆಯುಕ್ತರ ಕಚೇರಿ ಖುರ್ಚಿಗಳಲ್ಲಿ ಕೂರುತ್ತಿದ್ದು, ಪೊಲೀಸ್‌ ಅಧಿಕಾರಿಗಳು ಅವರ ಎದುರು ಎದ್ದು ನಿಲ್ಲಬೇಕಿದೆ. ಸ್ವತಃ ಪೊಲೀಸ್‌ ಆಯುಕ್ತರು ಇಸ್ಲೀಟ್‌ ಕ್ಲಬ್‌ ತೆರೆಯಲು ಅನುಮತಿ ನೀಡುವುದು, ಗೂಂಡಾಗಳೊಂದಿಗೆ ಫೋಟೋ ತೆಗೆಯಿಸಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ. ಅ‍ವಳಿ ನಗರದಲ್ಲಿ ಆಗುತ್ತಿರುವ ಅಪರಾಧ ತಡೆಯಬೇಕಾದ ಪೊಲೀಸರು ದಲ್ಲಾಳಿಗಳ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಉಸ್ತುವಾರಿ ಸಚಿವರು, ಗೃಹ ಸಚಿವರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹಣ ಮಾಡ್ತಿದ್ದಾರೆ ಪೊಲೀಸರು:

ನಾಡಿನ ವಿವಿಧ ಕಡೆಗಳಿಂದ ಧಾರವಾಡಕ್ಕೆ ವಿದ್ಯಾರ್ಥಿಗಳು ಬರುತ್ತಾರೆ. ಇದು ಧಾರವಾಡದ ಅಸ್ಮಿತೆ ಹೌದು. ಆದರೆ, ಡ್ರಗ್ ಪೆಡ್ಲರ್ ಬಳಸಿಕೊಂಡು ವಿದ್ಯಾರ್ಥಿಗಳು, ಅವರ ಪಾಲಕರಿಂದ ಹಣ ಮಾಡುವ ಕಾರ್ಯಕ್ಕೆ ಪೊಲೀಸರು ಕೈ ಹಾಕಿದ್ದಾರೆ. ಡ್ರಗ್ಸ್‌ ಬಳಕೆ ಮಾಡದೇ ಇದ್ದರೂ ಬಿಎಸ್ಸಿ ವಿದ್ಯಾರ್ಥಿ ಆದಿತ್ಯ ಪೊಲೀಸರ ಕಿರುಕುಳಕ್ಕೆ ಬಲಿಯಾಗಿದ್ದು ಉತ್ತಮ ಉದಾಹರಣೆ. ಆದಿತ್ಯ ಮುಖ್ಯಮಂತ್ರಿಗೆ ರಾಜಕೀಯ ಮರುಜನ್ಮ ನೀಡಿದ್ದ ಬಾದಾಮಿ ತಾಲೂಕಿನವನು. ಅವನ ಸಾವಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡಬೇಕಿದೆ ಎಂದರು.

ಆಯುಕ್ತರ ದುಡಾಳಿತವೇ ಕಾರಣ:

ಪೊಲೀಸ್ ಆಯುಕ್ತರ ದುರಾಡಳಿತದಿಂದ ಅವಳಿ ನಗರದಲ್ಲಿ ಸಾಕಷ್ಟು ಅಪರಾಧಿ ಚಟುವಟಿಕೆಗಳು ನಡೆಯುತ್ತಿವೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷವೂ ಇದೆ. ಉತ್ತರ ಕರ್ನಾಟಕದ ಎರಡನೇ ರಾಜಧಾನಿ ಹುಬ್ಬಳ್ಳಿ-ಧಾರವಾಡ ದರೋಡೆಕೋರರ ಬೀಡಾಗುತ್ತಿದೆ. ಕಾನೂನು ಸುವ್ಯವಸ್ಥೆ ಕೆಟ್ಟು ಹೋಗಿದೆ. ಪೊಲೀಸ್ ಇಲಾಖೆ ಕಾನೂನು ವಿರೋಧಿ ಕೆಲಸದಲ್ಲಿ ತೊಡಗಿದೆ. ಚಿಕ್ಕ ಮಕ್ಕಳು ಸಹ ಡ್ರಗ್ಸ್ ಸೇವನೆಯಲ್ಲಿ ತೊಡಗಿದ್ದಾರೆ. ಅದನ್ನು ಮಟ್ಟ ಹಾಕುವ ಬದಲು ಪೊಲೀಸ್‌ ಇಲಾಖೆ ಹಣ ಮಾಡುವ ದಂಧೆ ನಡೆಸುತ್ತಿದೆ ಎಂದು ಬೆಲ್ಲದ ಪೊಲೀಸ್ ಆಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವ್ಯವಹಾರ ಕುದರಿಲ್ಲ:

ಧಾರವಾಡ ಉಪ ನಗರ ಠಾಣೆಗೆ ಐದು ತಿಂಗಳಿಂದ ಇನ್‌ಸ್ಪೆಕ್ಟರ್‌ ಇಲ್ಲ. ವ್ಯವಹಾರ ಕುದರದೇ ಇರುವುದರಿಂದ ನೇಮಕಾತಿ ಆಗಿಲ್ಲ ಎನ್ನಿಸುತ್ತಿದೆ. ಇದು ರಾಜ್ಯ ಸರ್ಕಾರದ ವೈಫಲ್ಯ. ಸಾವಿರಾರು ವಿದ್ಯಾರ್ಥಿಗಳು ಇರುವ, ವಿಶ್ವವಿದ್ಯಾಲಯಗಳು, ಹತ್ತಾರು ಸರ್ಕಾರಿ ಕಚೇರಿ ಸೇರಿದಂತೆ ದೊಡ್ಡ ವ್ಯಾಪ್ತಿ ಹೊಂದಿರುವ ಠಾಣೆಗೆ ಅಧಿಕಾರಿ ನೇಮಕಾತಿ ಇಲ್ಲ. ಹಾಗೇಯೇ, ವಿದ್ಯಾಗಿರಿ ಠಾಣೆ ವ್ಯಾಪ್ತಿಯೂ ದೊಡ್ಡದಿದೆ. ನಿಯಮಗಳ ಪ್ರಕಾರ ಪೊಲೀಸ್‌ ಠಾಣೆ ವಿಭಜಿಸಬೇಕು. ಇದಕ್ಕೆ ಬೇಕಾದ ಅಂಕಿ-ಅಂಶಗಳನ್ನು ಗೃಹ ಸಚಿವರಿಗೆ ಕಳಹಿಸಿದ್ದೇನೆ. ಕ್ರಮ ಯಾವಾಗ ಎನ್ನುವುದೇ ಬೇಸರ ತಂದಿದೆ ಎಂದು ಬೆಲ್ಲದ ಕಳವಳ ವ್ಯಕ್ತಪಡಿಸಿದರು.

ಪೊಲೀಸ್‌ ಕಿರುಕುಳ: ಸಿಬಿಐ ತನಿಖೆಗೆ ಬೆಲ್ಲದ ಆಗ್ರಹ

ಪೊಲೀಸರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಆದಿತ್ಯಾ ಮ್ಯಾಗೇರಿ ಪ್ರಕರಣದಲ್ಲಿ ಮೂವರು ಕಾನ್‌ಸ್ಟೇಬಲ್‌ಗಳನ್ನು ಅಮಾನತು ಮಾಡಿದ್ದು, ತಪ್ಪಿನ ಬೇರು ಪತ್ತೆ ಹಚ್ಚಲು ತನಿಖೆಯನ್ನು ಸಿಬಿಐಗೆ ಅಥವಾ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ವಿಧಾನಸಭಾ ಉಪ ನಾಯಕ ಅರವಿಂದ ಬೆಲ್ಲದ ಆಗ್ರಹಿಸಿದರು. ಎರಡು ದಿನಗಳೊಳಗೆ ಸರ್ಕಾರ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳದೇ ಹೋದಲ್ಲಿ ಧಾರವಾಡದಿಂದ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಬೆಲ್ಲದ ನೀಡಿದರು. ಅಲ್ಲದೇ, ಮೃತನ ತಾಯಿ ತೀರಾ ಬಡವರಿದ್ದು, ರಾಜ್ಯ ಸರ್ಕಾರ ₹ 50 ಲಕ್ಷ ಪರಿಹಾರ ಹಾಗೂ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಶಿರಹಟ್ಟಿಯ ಫಕೀರೇಶ್ವರ ರಥೋತ್ಸವ
ಎಚ್ಐವಿಗೆ ಸೂಕ್ತ ಚಿಕಿತ್ಸೆ ಪಡೆಯಲಿ: ಡಿ.ಎನ್. ಚಂದ್ರಶೇಖರ