ಸರಗಳ್ಳತನ ಸೇರಿ ವಂಚನೆಗಳ ಬಗ್ಗೆ ಪೊಲೀಸರಿಂದ ಮನೆ, ಮನೆಗೆ ಜಾಗೃತಿ

KannadaprabhaNewsNetwork |  
Published : Jul 20, 2025, 01:24 AM IST
ಗಜೇಂದ್ರಗಡ ಪಿಎಸ್‌ಐ ಸೋಮನಗೌಡ ಗೌಡ್ರ ಅವರು ಮನೆ, ಮನೆಗೆ ತೆರಳಿ ಕಾನೂನು ಜಾಗೃತಿ ಮೂಡಿಸಿದರು. | Kannada Prabha

ಸಾರಾಂಶ

ವಾಹನ ಕಳ್ಳರಿಂದ, ಸರಗಳ್ಳತನ ಹಾಗೂ ಸೈಬರ್ ಅಪರಾಧ ಸೇರಿ ಇತರ ವಂಚನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ನಾಗರಿಕರು ಕೈಜೋಡಿಸಬೇಕು ಎಂದು ಪಿಎಸ್‌ಐ ಸೋಮನಗೌಡ ಗೌಡ್ರ ಹೇಳಿದರು.

ಗಜೇಂದ್ರಗಡ: ವಾಹನ ಕಳ್ಳರಿಂದ, ಸರಗಳ್ಳತನ ಹಾಗೂ ಸೈಬರ್ ಅಪರಾಧ ಸೇರಿ ಇತರ ವಂಚನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ನಾಗರಿಕರು ಕೈಜೋಡಿಸಬೇಕು ಎಂದು ಪಿಎಸ್‌ಐ ಸೋಮನಗೌಡ ಗೌಡ್ರ ಹೇಳಿದರು.

ರಾಜ್ಯ ಪೊಲೀಸ್ ವತಿಯಿಂದ ಆರಂಭಿಸಿರುವ ಮನೆ, ಮನೆಗೆ ಪೊಲೀಸ್ ಕಾರ್ಯಕ್ರಮ ಹಿನ್ನೆಲೆ ಶನಿವಾರ ಸ್ಥಳೀಯ ವಿವಿಧ ಬಡಾವಣೆಗಳ ಮನೆ, ಮನೆಗೆ ತೆರಳಿ ಮಾಹಿತಿ ನೀಡಿದ ಬಳಿಕ ಮಾತನಾಡಿದರು.ಸಾರ್ವಜನಿಕರಿಗೆ ಜನಸ್ನೇಹಿಯಾಗಲು ಜಿಲ್ಲಾ ಪೊಲೀಸ್ ಈಗಾಗಲೇ ಅನೇಕ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ಕಾನೂನು ನಿಯಮಗಳ ಪಾಲನೆ ಮಹತ್ವವನ್ನು ತಿಳಿಸಿಕೊಡಲಾಗುತ್ತಿದೆ. ನೆರೆ ನೆರೆಹೊರೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ, ಮಕ್ಕಳಿಗೆ ತೊಂದರೆ ಆಗುತ್ತಿದ್ದರೆ ಹಾಗೂ ಮಾದಕ ವಸ್ತುಗಳ ಮಾರಾಟ ಚಟುವಟಿಕೆಯ ಮಾಹಿತಿಯನ್ನು ನಿರ್ಭಯವಾಗಿ ಹಂಚಿಕೊಳ್ಳಲು ಮನೆ, ಮನೆಗೆ ಪೊಲೀಸರು ಬಂದಾಗ ಸಾರ್ವಜನಿಕರು ಹಂಚಿಕೊಳ್ಳಬಹುದು ಎಂದ ಅವರು, ಪಟ್ಟಣದ ಪ್ರತಿ ಬಡಾವಣೆಗೆ ಭೇಟಿ ನೀಡಿದಾಗ ಪೊಲೀಸರು ಬಡಾವಣೆಯ ನಿವಾಸಿಗಳ ಮೂಬೈಲ್ ಸಂಖ್ಯೆ ಪಡೆದು ಮನೆಕಳ್ಳತನ, ವಾಹನ ಕಳ್ಳತನ ಹಾಗೂ ಸರಗಳ್ಳತನ ಕೃತ್ಯದಿಂದ ಪಾರಾಗಲು ಅನುಸರಿಸಬಹುದಾದ ಎಚ್ಚರಿಕೆ ನಿಯಮಗಳು. ಮನೆ ಬಾಡಿಗೆ ನೀಡುವಾಗ ಗಮನದಲ್ಲಿಡಬೇಕಾದ ಅಂಶಗಳ ಜತೆಗೆ ಫೇಸ್‌ಬುಕ್, ಇನಸ್ಟಾಗ್ರಾಂ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ, ಎಟಿಎಂ ವಂಚನೆ ಸೇರಿ ಸೈಬರ ಅಪರಾಧ ತಡೆಗಟ್ಟುವ ಎಚ್ಚರಿಕೆಯ ಕ್ರಮಗಳ ಬಗ್ಗೆ ವಿಸ್ತೃತ ಮಾಹಿತಿ ಹಂಚಿಕೊಳ್ಳಲು ಆಯಾ ಬಡಾವಣೆಯ ವಾಟ್ಸಾಪ್ ಗ್ರುಪ್ ರಚಿಸಲಾಗುವುದು. ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿ ಸಮೂಹಕ್ಕೆ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ಅಪರಾಧ, ಕಾನೂನು ಪಾಲನೆ ಮಹತ್ವ ಮತ್ತು ಸಂಚಾರಿ ನಿಯಮಗಳ ಪಾಲನೆಯ ಕುರಿತ ಜಾಗೃತಿಗಾಗಿ ಶಾಲಾ ಕಾಲೇಜುಗಳಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳ ಆಯೋಜನೆ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದರು.ಈ ವೇಳೆ ಪಿಎಸ್ಐ ಸೋಮನಗೌಡ ಗೌಡ್ರ ಹಾಗೂ ಸಿಬ್ಬಂದಿಗಳಾದ ಎಸ್. ಡಿ. ಗೌಡರ, ಶೋಯಬ್ ಖಾಜಿ ಇದ್ದರು. ಪಟ್ಟಣದ ರೇವಡಿ ಅವರ ಬಡಾವಣೆ, ನವನಗರ, ಸೇವಾಲಾಲ್ ಬಡಾವಣೆ ಸೇರಿ ವಿವಿಧ ಬಡಾವಣೆಗಳಲ್ಲಿ ಪೊಲೀಸರು ಮನೆ,ಮನೆಗೆ ತೆರಳಿ ಕಾನೂನು ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿದರು.

ಪಟ್ಟಣದ ೨೩ ವಾರ್ಡ್‌ಗಳು ಸೇರಿ ಸುತ್ತಲಿನ ಗ್ರಾಮಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈಗ ಮನೆ, ಮನೆಗೆ ತರಳಿ ಬಡಾವಣೆಯ ಸಾರ್ವಜನಿಕರೊಂದಿಗೆ ಬೆರೆಯಲು ಹಾಗೂ ಸಾರ್ವಜನಿಕರು ನಿರ್ಭಯವಾಗಿ ಅಹವಾಲು ತಿಳಿಸಲು ಧೈರ್ಯ ತುಂಬಿ, ವಾಟ್ಸಪ್ ಗ್ರುಪ್ ರಚಿಸಿ ಕಾನೂನು ಪಾಲನೆ ಸೇರಿ ಅಗತ್ಯ ಜಾಗೃತಿಯ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಗಜೇಂದ್ರಗಡ ಪಿಎಸ್‌ಐ ಸೋಮನಗೌಡ ಗೌಡ್ರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾವೇರಿ ಒಡಲಿಗೆ ತ್ಯಾಜ್ಯ ಎಸೆತ ವಿರುದ್ಧ ಪ್ರತಿಭಟನೆ
ಪ್ರವಾಸಿಗರಿಂದ ಕೊಡಗಿನಲ್ಲಿ ಹೊಸ ವರ್ಷಾಚರಣೆ ಸಂಭ್ರಮ