ಹುಬ್ಬಳ್ಳಿ:
ದೇಶದೊಳಗಿನ ಸಮಾಜದ ಸ್ವಾಸ್ಥ್ಯ ಕಾಪಾಡಲು ಪೊಲೀಸ್ ಇಲಾಖೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಷ್ಟೇ ಅಲ್ಲ, ಸಾರ್ವಜನಿಕರು ಕಾನೂನು ಪಾಲನೆ ಮಾಡುವ ಮೂಲಕ ಸಹಕಾರ ನೀಡಬೇಕಾಗುತ್ತದೆ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪಲ್ಲವಿ ಬಿ.ಆರ್. ಹೇಳಿದರು.ಅವರು ಇಲ್ಲಿನ ಕಾರವಾರ ರಸ್ತೆಯ ಹಳೆಯ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಆಯುಕ್ತಾಲಯ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿ ಅವರು ಮಾತನಾಡಿದರು. ದೇಶದ ಗಡಿ ಪ್ರದೇಶದಲ್ಲಿ ಶತ್ರುಗಳನ್ನು ತಡೆಯಲು ಸೈನಿಕರು ನಿರತರಾಗಿದ್ದಾರೆ. ದೇಶದೊಳಗೆ ಸಮಾಜದಲ್ಲಿ ಶಾಂತಿ ನೆಲೆಸಲು ಪೊಲೀಸರು ಕಾರ್ಯನಿರತರಾಗಿರುತ್ತಾರೆ. ನಾವು ಹಬ್ಬದಲ್ಲಿ ಸಂಭ್ರಮಿಸುವಾಗ ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದು ಎಂದು ಪೊಲೀಸರು ಕಾರ್ಯನಿರ್ವಹಿಸುತ್ತಾರೆ. ಅಂಥ ಇಲಾಖೆಗೆ ನಾವೆಲ್ಲರೂ ಚಿರಋಣಿಯಾಗಿರಬೇಕು. ಅವರ ನಿರಂತರ ಸೇವೆಗೆ ನಾವು ಅಭಾರಿಗಳಾಗಿರಬೇಕು ಎಂದರು.
ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ದೇಶದಲ್ಲಿ 2024 ಸೆ. 1ರಿಂದ 2025 ಆ. 31ರ ವರೆಗೆ 191 ಪೊಲೀಸ್ ಅಧಿಕಾರಿ, ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೃತಪಟ್ಟಿದ್ದಾರೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಿರ್ಮಾಣ ಮಾಡುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರವೂ ಮುಖ್ಯ ಎಂದರು.ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಗಣ್ಯರು ಪುಷ್ಪಗುಚ್ಛ ಸಮರ್ಪಿಸಿ ನಮನ ಸಲ್ಲಿಸಿದರು. ಪರೇಡ್ ಕಮಾಂಡರ್ ಆರ್‌ಪಿಐ ಸಂತೋಷ ಬೋಜಪ್ಪನವರ ನೇತೃತ್ವದ ಪೊಲೀಸ್ ಪಡೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿತು.
ಕಾರ್ಯಕ್ರಮದಲ್ಲಿ ಹುಡಾ ಅಧ್ಯಕ್ಷ ಶಾಕೀರ್ ಸನದಿ, ಮಾಜಿ ಸಂಸದ ಐ.ಜಿ. ಸನದಿ, ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್‌ನ ಮಾಲೀಕ ವಿ.ಎಸ್.ವಿ. ಪ್ರಸಾದ್, ಮುಖಂಡ ವೆಂಕಟೇಶ ಕಾಟವೆ, ಡಿಸಿಪಿಗಳಾದ ಮಹಾನಿಂಗ್ ನಂದಗಾವಿ, ರವೀಶ್ ಸಿ.ಆರ್. ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು.