ಪೊಲೀಸ್ ಇಲಾಖೆ ಜನಸ್ನೇಹಿ ಕರ್ತವ್ಯ ನಿರ್ವಹಣೆ: ಎಸ್ಪಿ

KannadaprabhaNewsNetwork |  
Published : Aug 30, 2026, 02:15 AM IST
ಚಿತ್ರ : ಸಭೆಯಲ್ಲಿ ಪಾಲ್ಗೊಂಡಿದ್ದವರು.  | Kannada Prabha

ಸಾರಾಂಶ

ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆಯು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಮಡಿಕೇರಿ : ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆಯು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆಯಿತು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಪರಿಶಿಷ್ಟರ ಅಹವಾಲು ಆಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಮಾತನಾಡಿ ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಸ್ಪಂದಿಸದಿದ್ದಲ್ಲಿ ಮಾಹಿತಿ ನೀಡಬಹುದಾಗಿದೆ ಎಂದರು.

ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ, ಸೇವನೆ ಮತ್ತಿತರ ಸಂಬಂಧ ಕಳೆದ 8 ತಿಂಗಳಲ್ಲಿ 237 ಪ್ರಕರಣಗಳನ್ನು ದಾಖಲಿಸಲಾಗಿದ್ದು, 333 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಮಾದಕ ವ್ಯಸನಕ್ಕೆ ತುತ್ತಾಗದಂತೆ ಹಾಡಿ ಪ್ರದೇಶಗಳು ಸೇರಿದಂತೆ ಇತರೆ ಕಡೆಗಳಲ್ಲಿ ಜಾಗೃತಿ ಮೂಡಿಸಿ, ಸಮಾಜದಲ್ಲಿ ಇತರರಂತೆ ಬದುಕು ಕಟ್ಟಿಕೊಳ್ಳುವಂತಾಗಲು ಪೊಲೀಸ್ ಇಲಾಖೆಯಿಂದ ಹೆಚ್ಚಿನ ಅರಿವು ಮೂಡಿಸುತ್ತಿದೆ ಎಂದರು.

ಪ್ರತೀ ತಿಂಗಳು ಪೊಲೀಸ್ ಠಾಣೆಯಲ್ಲಿ ಪ್ಲಾಂಟರ್ಸ್ ಮಾಲೀಕರ ಜೊತೆ ಸಭೆ ನಡೆಸಲಾಗುತ್ತಿದ್ದು, ರಾಜ್ಯದ ಹೊರ ಭಾಗದಿಂದ ಬರುವ ಕೂಲಿ ಕಾರ್ಮಿಕರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ ಎಂದರು.

ಸಮಿತಿ ಸದಸ್ಯರಾದ ಕೊಡ್ಲಿಪೇಟೆಯ ಜನಾರ್ಧನ ಜೆ.ಎಲ್ ಅವರು ಮಾತನಾಡಿ ಶನಿವಾರಸಂತೆ, ಕೊಡ್ಲಿಪೇಟೆ ಮತ್ತಿತರ ಕಡೆಗಳಲ್ಲಿ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದು, ಈ ಬಗ್ಗೆ ನಿಗಾವಹಿಸಬೇಕು ಎಂದು ಕೋರಿದರು.

ಕೆ.ಬಿ.ರಾಜು ಅವರು ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಹಲವು ರೀತಿಯ ಹೋರಾಟ ಮಾಡಬೇಕಾಗುತ್ತದೆ. ಅಂತಹ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ಹೋರಾಟಗಾರರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಅವರು ಮನವಿ ಮಾಡಿದರು.ಸಮಿತಿ ಸದಸ್ಯರಾದ ಪಿ.ಪಿ.ಸುಕುಮಾರ್ ಅವರು ಮಾತನಾಡಿ ಶಾಲಾ-ಕಾಲೇಜು ಹಂತದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು ಎಂದರು.

ಡಿವೈಎಸ್‌ಪಿ ಮಹೇಶ್ ಕುಮಾರ್ ಅವರು ಲೈನ್‌ಮನೆಗಳು ಸೇರಿದಂತೆ ಹಲವು ಕಡೆಗಳಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ತಳ ಮಟ್ಟದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುವ ಪ್ರದೇಶದಲ್ಲಿ ಪರಿಶೀಲಿಸಲಾಗುತ್ತದೆ. ಅಸ್ಸಾಂ ಇತರೆ ಕಡೆಗಳಿಂದ ಬಂದಿರುವವರ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ಜೊತೆಗೆ ಮಾಲೀಕರ ಜೊತೆಯೂ ಸಹ ಸಮಾಲೋಚನೆ ನಡೆಸಲಾಗುತ್ತದೆ. ಸಂಶಯ ಇದಲ್ಲಿ ಪರಿಶೀಲಿಸಲಾಗುತ್ತದೆ ಎಂದರು.

ಸಹಾಯಕ ಸಬ್ ಇನ್ಸ್ಪೆಕ್ಟರ್ ಸುಮತಿ ಅವರು ಮಾತನಾಡಿ ಹಾಡಿ ಜನರಿಗೆ ಆಧಾರ್ ಕಾರ್ಡ್ ಮತ್ತಿತರ ಪ್ರಮಾಣ ಪತ್ರಗಳು ಇನ್ನೂ ಸಹ ಪಡೆದುಕೊಳ್ಳದಿದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಬಹುದಾಗಿದೆ ಎಂದರು. ಪಿಎಸ್‌ಐ ನವೀನ್ ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪ್ರಕರಣಗಳನ್ನು ದಾಖಲಿಸಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ನಾಗರಿಕ ಹಕ್ಕು ಕಾಯ್ದೆ ಆರಂಭವಾಗಿದ್ದು, ಇದರ ಅವಕಾಶವನ್ನು ಬಳಸಿಕೊಳ್ಳುವಂತಾಗಬೇಕು ಎಂದು ಅವರು ಕೋರಿದರು.ಡಿವೈಎಸ್‌ಪಿಗಳಾದ ಚಂದ್ರಶೇಖರ್ ಮತ್ತು ಸೂರಜ್ ಅವರು ತಮ್ಮ ಉಪ ವಿಭಾಗ ಮಟ್ಟದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಪೊಲೀಸ್ ಅಧಿಕಾರಿ ಐ.ಪಿ.ಮೇದಪ್ಪ ಅವರು ಕಳೆದ ಬಾರಿ ಸಭೆಯ ಅನುಪಾಲನಾ ವರದಿ ಮಂಡಿಸಿದರು. ದಲಿತ ಸಂಘರ್ಷ ಸಮಿತಿಯ ಎಚ್.ಎಲ್.ದಿವಾಕರ ಅವರು ಮಾತನಾಡಿದರು.ಪ್ರಮುಖರಾದ ಪರಮೇಶ್ ಅವರು ಮಾತನಾಡಿದರು. ಜಿಲ್ಲೆಯ ಉತ್ತರ ಭಾಗದ ವೀರೇಂದ್ರ ಅವರು ಮಾತನಾಡಿದರು. ಪ್ರಮುಖರಾದ ದೇವರಾಜು ಅವರು ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆ ಬೆಳ್ಳಿಹಬ್ಬ ಊರಿಗೆ ಹಬ್ಬವಾಗಲಿ: ಸೀತಾರಾಮ ರೈ
ವಿವಿಧ ಸಮಸ್ಯೆಗಳ ಬಗ್ಗೆ ಮನವಿಗೆ ಆರೋಗ್ಯ ಇಲಾಖೆ ಸ್ಪಂದನೆ