ಕನ್ನಡಪ್ರಭ ವಾರ್ತೆ ಕೆಜಿಎಫ್
ಲೋಕಸಭೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, ಡಿ.ಎ.ಆರ್. ಸಿಪಿಎಂಎಫ್ ಹಾಗೂ ಕೆ.ಎಸ್.ಆರ್.ಪಿ ಅಧಿಕಾರಿ ಸಿಬ್ಬಂದಿಗೆ ಬಂಗಾರಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಮತ್ತು ಕೆ.ಜಿ.ಎಫ್‌ನ ಸ್ಕೂಲ್ ಆಫ್ ಮೈನ್ಸ್‌ನಲ್ಲಿ ತಿಳುವಳಿಕೆ ಸಭೆಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆ ಪ್ರಯುಕ್ತ ಚುನಾವಣಾ ಆಯೋಗದ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೆ ತರಲು ಆಯಾ ಠಾಣಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದು, ಯಾವುದೇ ಪೊಲೀಸ್ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ಯಾವುದೇ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳೊಂದಿಗೆ ಗುರುತಿಸಿಕೊಳ್ಳಬಾರದು, ಹಾಗೊಮ್ಮೆ ಎಲ್ಲಾದರೂ ದೂರು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಸ್‌ಪಿ ಕೆ.ಎಂ.ಶಾಂತರಾಜು ಎಚ್ಚರಿಸಿದರು.
ಚುನಾವಣೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ, ಆಯಾ ಠಾಣಾ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಒಳ ಪ್ರವೇಶಿಸುವ ಹಾಗೂ ಹೊರಹೋಗುವ ಎಲ್ಲಾ ವಾಹನಗಳನ್ನು ತಪಾಸಣೆಗೆ ಒಳಪಡಿಸಬೇಕು, ಅಕ್ರಮವಾಗಿ ಯಾವುದೇ ಬೆಲೆಬಾಳುವ ವಸ್ತುಗಳು, ಉಡುಗೊರೆಗಳು, ಹಣವನ್ನು ಕಂಡಲ್ಲಿ ಮುಟ್ಟುಗೋಲು ಹಾಕಿಕೊಂಡು ಕೂಡಲೇ ಪ್ರಕರಣ ದಾಖಲಿಸಬೇಕು, ಬಂದೂಕು, ಮಾರಣಾಯುಧಗಳನ್ನು ಯಾರೂ ಸಾರ್ವಜನಿಕ ಸ್ಥಳಗಳಲ್ಲಿ ಕೊಂಡೊಯ್ಯದಂತೆ ಅಗತ್ಯ ಕ್ರಮವಹಿಸಬೇಕು, ಸಮಾಜಘಾತುಕ ಶಕ್ತಿಗಳು, ರೌಡಿ, ಗೂಂಡಾ ಪಟ್ಟಿಯಲ್ಲಿರುವವರ ಮೇಲೆ ತೀವ್ರ ನಿಗಾ ಇಡಬೇಕು, ಅಂತಹವರ ಚಲನವಲನಗಳ ಬಗ್ಗೆ ಸಾರ್ವಜನಿಕರ ಸಹಕಾರದಿಂದ ಮಾಹಿತಿ ಗೌಪ್ಯವಾಗಿ ಸಂಗ್ರಹಿಸಬೇಕು ಎಂದರು.ಕೋಲಾರ ಲೋಕಸಭಾ ಕ್ಷೇತ್ರದ ಕೆಜಿಎಫ್ ಹಾಗೂ ಬಂಗಾರಪೇಟೆ ವ್ಯಾಪ್ತಿಯಲ್ಲಿ ಏನಾದರೂ ಕಾನೂನು ಬಾಹಿರ ಪ್ರಕರಣಗಳು ಕಂಡು ಬಂದಲ್ಲಿ ಅಂತಹವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು, ಅಕ್ರಮ ಮದ್ಯ ಮಾರಾಟ ಹಾಗೂ ಹಂಚಿಕೆ ತಡೆಯುವಲ್ಲಿ ತಕ್ಷಣವೇ ಕಾರ್ಯಾಚರಣೆ ನಡೆಸಲಾಗುವುದು, ತಪ್ಪಿದ್ದಲ್ಲಿ ಅಂತಹ ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಸ್‌ಪಿ ಕೆ.ಎಂ.ಶಾಂತರಾಜು ಎಚ್ಚರಿಸಿದರು.
ಬಂಗಾರಪೇಟೆ ಹಾಗೂ ಕೆಜಿಎಫ್ ವಿಧಾನಸಭಾ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಕೆಜಿಎಫ್ ಪೊಲೀಸ್ ಜಿಲ್ಲೆಯ ವ್ಯಾಪ್ತಿಯ ಮತಗಟ್ಟೆಗಳ ಪೈಕಿ ಸೂಕ್ಷ್ಮ ಹಾಗೂ ಅತೀಸೂಕ್ಷ್ಮವೆಂದು ಗುರುತಿಸಿರುವ ಕಡೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು.
ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿಗಳಿಗೆ ಮತಗಟ್ಟೆ, ಚುನಾವಣೆ ಕರ್ತವ್ಯದಲ್ಲಿ ಮೂಲಭೂತವಾಗಿ ಅವಶ್ಯಕವುಳ್ಳ ವಸ್ತುಗಳ ಕಿಟ್ಟನ್ನು ಹಾಗೂ ತಿಳುವಳಿಕೆ ಪುಸ್ತಕವನ್ನು ಕೆ.ಎಂ.ಶಾಂತರಾಜು ವಿತರಿಸಿದರು.
ಕೆಜಿಎಫ್ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್: