ಬಳ್ಳಾರಿ: ಜಿಲ್ಲೆಯಲ್ಲಿ ದಾಖಲಾಗಿರುವ ಕಾಣೆಯಾದ ಮಕ್ಕಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಪತ್ತೆ ಹಚ್ಚಲು ಆಧುನಿಕ ತಂತ್ರಜ್ಞಾನದ ಸಮರ್ಥ ಬಳಕೆ ಹಾಗೂ ಗುರುತು ಪತ್ತೆಯಾಗದ ಶವಗಳ ಕಡ್ಡಾಯ ಪರಿಶೀಲನೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಲ್ಲಿ ಪತ್ತೆಯಾಗುವ ಗುರುತು ಸಿಗದ ಮೃತದೇಹಗಳು ಮತ್ತು ಅಸ್ವಾಭಾವಿಕ ಸಾವುಗಳ ಪ್ರಕರಣ ನಿಯಮಿತವಾಗಿ ಪರಿಶೀಲಿಸಬೇಕು. ಕಾಣೆಯಾದ ಮಕ್ಕಳ ವಿವರಗಳೊಂದಿಗೆ ಯುಡಿಆರ್ ದಾಖಲೆ ಕ್ರಾಸ್-ವೆರಿಫೈ ನಡೆಸಿ ತನಿಖೆ ಚುರುಕುಗೊಳಿಸಬೇಕು. ತನಿಖಾ ಪ್ರಕ್ರಿಯೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್ ಲೊಕೇಶನ್ ಟ್ರ್ಯಾಕಿಂಗ್ ಹಾಗೂ ಮುಖಚಹರೆ ಗುರುತಿಸುವ ಸುಧಾರಿತ ತಂತ್ರಜ್ಞಾನ ಸಕ್ರಿಯವಾಗಿ ಬಳಸಿಕೊಳ್ಳಬೇಕು ಎಂದರು.
ಪೊಲೀಸ್ ಠಾಣಾ ಮಟ್ಟದಲ್ಲಿ ಮೇಲ್ವಿಚಾರಣೆ: ಪ್ರತಿಯೊಂದು ಠಾಣಾ ವ್ಯಾಪ್ತಿಯಲ್ಲಿ ಬಾಕಿ ಇರುವ ಕಾಣೆಯಾದ ಮಕ್ಕಳ ಪ್ರಕರಣಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಲು ಮತ್ತು ತ್ವರಿತವಾಗಿ ಕುಟುಂಬದವರೊಂದಿಗೆ ಮರುಸಂಪರ್ಕ ಕಲ್ಪಿಸಲು ವಿಶೇಷ ಗಮನ ಹರಿಸಬೇಕು. ಮಕ್ಕಳ ಸುರಕ್ಷತೆ ಪೊಲೀಸ್ ಇಲಾಖೆಯ ಪ್ರಮುಖ ಆದ್ಯತೆಯಾಗಿದ್ದು, ಯಾವುದೇ ನಿರ್ಲಕ್ಷ್ಯಕ್ಕೆ ಆಸ್ಪದ ನೀಡದೆ ಅಧಿಕಾರಿಗಳು ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಮಕ್ಕಳು ಬೆಳೆದಂತೆ ಅವರ ಮುಖಚರ್ಯೆಯಲ್ಲಿ ಉಂಟಾಗುವ ಬದಲಾವಣೆ ಗುರುತಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸಾಪ್ಟ್‌ವೇರ್ ನೆರವು ಪಡೆಯಬಹುದು. ಕೆನಾಲ್ ಅಥವಾ ಡ್ಯಾಂನ ಕೆಳಹಂತದ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಗುರುತು ಪತ್ತೆಯಾಗದ ಮೃತದೇಹಗಳ ವಿವರ ಕಡ್ಡಾಯವಾಗಿ ತಾಳೆ ಮಾಡಿ ಪರಿಶೀಲಿಸುವಂತೆ ನಿರ್ದೇಶನ ನೀಡಿದರು.ಹೊಸ ಪ್ರಕರಣಗಳ ಜತೆಗೆ ಹಳೆಯ ಬಾಕಿ ಉಳಿದಿರುವ ಪ್ರಕರಣ ಮೇಲೂ ನಿರಂತರ ನಿಗಾ ಇರಿಸಿ ಪೋಷಕರೊಂದಿಗೆ ಸಂಪರ್ಕದಲ್ಲಿರುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಅರ್ಥವಾಗುವಂತೆ ಬಾಲ್ಯವಿವಾಹ, ಪೋಕ್ಸೊ ಕಾಯ್ದೆ, ಡ್ರಗ್ಸ್, ಸೈಬರ್ ವಂಚನೆ ಹಾಗೂ ಮಹಿಳಾ ಸುರಕ್ಷತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.