ಗದಗ: ಸಮಾಜದ ಒಳತಿಗಾಗಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವುದು, ನೊಂದವರ ಧ್ವನಿಯಾಗಿ ಕೆಲಸ ಮಾಡುವಲ್ಲಿ ಪೊಲೀಸ್ ಇಲಾಖೆಯ ಸೇವೆ ಅಪಾರವಾಗಿದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಬಸವರಾಜ ಹೇಳಿದರು.
ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧ ತಡೆ ಕಾರ್ಯದಲ್ಲಿ ನಿರಂತರ ಶ್ರಮ ವಹಿಸಿ ಕೆಲಸ ನಿರ್ವಹಿಸುತ್ತಿದೆ. ಇಂತಹ ಕಾರ್ಯದಿಂದಾಗಿಯೇ ಪೊಲೀಸರ ತ್ಯಾಗ, ಬಲಿದಾನ, ಸಾಹಸ ಸ್ಮರಣೀಯವಾದುದು ಎಂದರು.
ಪೊಲೀಸ ಇಲ್ಲದ ಸಮಾಜ ಕಲ್ಪಿಸಿಕೊಳ್ಳುವುದು ಅಸಾಧ್ಯ. ಅನ್ಯಾಯ, ಸುಲಿಗೆ ತಡೆದು ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆ ನಿಲ್ಲಲು ಪೊಲೀಸ್ ಇಲಾಖೆಯ ಶ್ರಮ ಅಪರಮಿತ. ಭಯೋತ್ಪಾದನೆ ನಿರ್ಮೂಲನೆಗೆ ಪ್ರಾಣತ್ಯಾಗಕ್ಕೂ ಪೊಲೀಸರು ಸಿದ್ಧ. ಇದಕ್ಕೆ ಉದಾಹರಣೆ ಸಂಸದ್ ಭವನದ ಮೇಲಿನ ಹಾಗೂ ಮುಂಬೈನ ತಾಜ್ ಹೋಟೆಲ್ ಮೇಲಿನ ದಾಳಿ ಸಾಕ್ಷಿಯಾಗಿವೆ.ಸಾರ್ವಜನಿಕರು ಅಪರಾಧ ನಡೆದಾಗ ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಿ ಅಪರಾಧಿಗಳಿಗೆ ತಕ್ಕ ಶಿಕ್ಷೆ ಕೊಡಿಸಲು ಸೂಕ್ತ ಸಹಕಾರ ನೀಡಬೇಕು. ಅಲ್ಲದೇ ಭಯೋತ್ಪಾದನೆಯಂತಹ ಕೃತ್ಯಗಳು ನಡೆದಾಗ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಅಮಾಯಕರ ಜೀವಹಾನಿ ತಪ್ಪಿಸಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ನಿರಂತರವಾಗಿ ಇರಬೇಕು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿ, ಭಾರತ-ಚೀನಾ ಗಡಿಯಲ್ಲಿ ಚೀನಾ ಸೇನೆಯಿಂದ ಅಕ್ಟೋಬರ್ 21,1959ರಲ್ಲಿ ನಡೆದ ದಾಳಿಯಲ್ಲಿ ಹತ್ತಕ್ಕೂ ಪೊಲೀಸರು ಹುತಾತ್ಮರಾದರು. ಇದರ ನೆನಪಿಗಾಗಿ ಹಾಗೂ ದೇಶದ ಆಂತರಿಕ ಭದ್ರತೆಗಾಗಿ ಪೊಲೀಸ್ ಹುತಾತ್ಮ ದಿನ ಪ್ರತಿ ವರ್ಷ ಆಚರಿಸಲಾಗುತ್ತಿದೆ. ದೇಶದಲ್ಲಿ 216 ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು 2024ರಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ್ದು, ಇದರಲ್ಲಿ ಗದಗ ಜಿಲ್ಲೆಯ ಮೂವರು ಪೊಲೀಸರು ಸೇರಿದ್ದಾರೆ ಎಂದು ಅವರ ಹೆಸರನ್ನು ಸ್ಮರಿಸಿದರು.
ಗದಗ ಬೆಟಗೇರಿ ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಜಿ, ಎಸ್.ಎನ್. ಬಳ್ಳಾರಿ, ರಾಮಣ್ಣ ಫಲದೊಡ್ಡಿ, ಚಿನ್ಮಯ ಹೆಗಡೆ, ಗಣೇಶ ಬ್ಯಾಳಿ, ಬಾಷಾಸಾಬ ಮಲ್ಲಸಮುದ್ರ, ಚಂದ್ರಕಾಂತ ಚವ್ಹಾಣ, ಪೊಲೀಸ್ ಇಲಾಖೆಯ ಪ್ರಭಾರ ಸಹಾಯಕ ಆಡಳಿತಾಧಿಕಾರಿ ಮಲ್ಲನಗೌಡ ಕೆ.ಎಚ್., ಬೆಟಗೇರಿ ಸಿಪಿಐ ಡಿ.ಬಿ. ಸಿಂಧೆ, ಗದಗ ಗ್ರಾಮೀಣ ಪಿಎಸ್‌ಐ ಎಲ್.ಕೆ. ಜೂಲಕಟ್ಟಿ, ಮಹಿಳಾ ಪಿಎಸ್‌ಐ ಶಕುಂತಲಾ, ಬಿ.ಎಸ್. ಬಾರಕೇರ, ಸಿ.ಎಸ್. ಜಕ್ಕನಗೌಡ್ರ, ಎನ್. ಬಿ. ಭಂಗಿ, ಎಸ್.ಎಸ್. ಹೂಲಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ರಾಮು ವಗ್ಗಿ, ಗಣೇಶ ಪೈ ಗೌರವ ಸಮರ್ಪಿಸಿದರು.