ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಪೊಲೀಸ್‌ ತಪಾಸಣೆ

KannadaprabhaNewsNetwork |  
Published : Nov 23, 2025, 02:30 AM IST
22ಡಿಡಬ್ಲೂಡಿ1ಹು-ಧಾ ಪೊಲೀಸ ಕಮಿಷನರೇಟ್‌ ವತಿಯಿಂದ ಶನಿವಾರ ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ತಪಾಸಣೆ ಮಾಡಲಾಯಿತು. | Kannada Prabha

ಸಾರಾಂಶ

ಪೊಲೀಸ್‌ ಆಯುಕ್ತ ಎನ್. ಶಶಿಕುಮಾರ ನೇತೃತ್ವದಲ್ಲಿ ಡಿಸಿಪಿ ಮಹಾನಿಂಗ್ ನಂದಗಾಂವಿ, ಡಿಸಿಪಿ ರವೀಶ್ ಹಾಗೂ ಪೊಲೀಸ್‌ ಅಧಿಕಾರಿಗಳೊಂದಿಗೆ ಧಾರವಾಡದ ಉಪ ನಗರ ಠಾಣೆ ವ್ಯಾಪ್ತಿಯಲ್ಲಿರುವ ಕಾರಾಗೃಹದ ತಪಾಸಣೆ ಮಾಡಲಾಯಿತು.

ಧಾರವಾಡ:

ಕಾರಾಗೃಹದಲ್ಲಿ ಮೊಬೈಲ್‌ ಬಳಕೆ ಹಾಗೂ ಅಕ್ರಮ ಚಟುವಟಿಕೆ ನಡೆಯತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹು-ಧಾ ಪೊಲೀಸ್‌ ಕಮಿಷನರೇಟ್‌ ವತಿಯಿಂದ ಶನಿವಾರ ಇಲ್ಲಿಯ ಕೇಂದ್ರ ಕಾರಾಗೃಹದಲ್ಲಿ ತಪಾಸಣೆ ಮಾಡಲಾಯಿತು.

ಪೊಲೀಸ್‌ ಆಯುಕ್ತ ಎನ್. ಶಶಿಕುಮಾರ ನೇತೃತ್ವದಲ್ಲಿ ಡಿಸಿಪಿ ಮಹಾನಿಂಗ್ ನಂದಗಾಂವಿ, ಡಿಸಿಪಿ ರವೀಶ್ ಹಾಗೂ ಪೊಲೀಸ್‌ ಅಧಿಕಾರಿಗಳೊಂದಿಗೆ ಇಲ್ಲಿಯ ಉಪ ನಗರ ಠಾಣೆ ವ್ಯಾಪ್ತಿಯಲ್ಲಿರುವ ಕಾರಾಗೃಹದ ತಪಾಸಣೆ ಮಾಡಲಾಯಿತು.

ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್‌ ಆಯುಕ್ತರು, ಈ ಕಾರಾಗೃಹದಲ್ಲಿ 475 ಕೈದಿಗಳಿದ್ದು, ನಿರ್ಬಂಧಿತ ವಸ್ತು‌ಗಳು ಇವೆಯೇ ಎಂಬುದನ್ನು ತಪಾಸಣೆ ಮಾಡಿದ್ದೇವೆ. ಆದರೆ, ಯಾವುದೇ ಅಂತಹ ವಸ್ತುಗಳು ದೊರೆತಿಲ್ಲ. ಕಳೆದ ವಾರ ಎಲ್ಲ ಬ್ಯಾರಕ್‌ಗಳಿಗೆ ಜೈಲಾಧಿಕಾರಿಗಳು ತಪಾಸಣೆ ಸಹ ಮಾಡಿದ್ದರು. ಒಳಗಡೆ ಇರುವ ಕೈದಿಗಳ ಮತ್ತು ಸಿಬ್ಬಂದಿ ಜೊತೆ ನಾನು ಸಮಾಲೋಚನೆ ಸಹ ನಡೆಸಿದ್ದೇನೆ. ಸುರಕ್ಷತೆ ದೃಷ್ಟಿಯಿಂದ ಏನೆಲ್ಲ ಕ್ರಮಗಳಾಗಬೇಕೆಂದು ಕೂಡಾ ಜೈಲಿನ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಎಂದರು.

ಧಾರವಾಡದ ಕೇಂದ್ರ ಕಾರಾಗೃಹವು ನೂರು ವರ್ಷಕ್ಕೆ ಹೆಚ್ಚು ಹಳೆಯ ಜೈಲು. ಇಲ್ಲಿ ಉತ್ತಮ ವ್ಯವಸ್ಥೆ ಇದ್ದು, ನಿತ್ಯವು ಕೈದಿಗಳ ಡೈರಿ ನಿಯಂತ್ರಿಸಲಾಗುತ್ತಿದೆ. ಇಲ್ಲಿ ಬೇಕರಿ ವಸ್ತುಗಳ ತಯಾರಿ, ಕಾರ್ಪೆಂಟರ್ ಕೆಲಸ ಮಾಡಲು ಅವಕಾಶವಿದೆ. ಒಟ್ಟಾರೆ ಯಾವುದೇ ಗೊಂದಲವಿಲ್ಲದೇ ಕಾರಾಗೃಹ ನಡೆಯುತ್ತಿದೆ ಎಂದ ಅವರು, ಕೈದಿಗಳನ್ನು ಭೇಟಿ ಮಾಡುವವರು ನಿರ್ಬಂಧಿತ ವಸ್ತುಗಳನ್ನು ತರಬಾರದು. ಒಂದು ವೇಳೆ ತಂದರೆ ತಮ್ಮ ಮೇಲೂ ಕ್ರಮ ಆಗಲಿದೆ ಎಂದು ಎಚ್ಚರಿಸಿದರು.

ಜೈಲಿನಲ್ಲಿ ಮೊಬೈಲ್ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಆಯುಕ್ತರು, ಒಳಗೆ ಇರುವವರು ಮೊಬೈಲ್ ಬಳಸಿದ್ದ ಪ್ರಕರಣ ಗೊತ್ತಾದ ಮೇಲೆ ಮತ್ತಷ್ಟು ಕಟ್ಟುನಿಟ್ಟು ಮಾಡಲಾಗಿದೆ. ಆದ್ದರಿಂದಲೇ ತಪಾಸಣೆ ಮಾಡಿದಾಗ ಯಾವುದೇ ಮೊಬೈಲ್‌ ಸಿಕ್ಕಿಲ್ಲ, ಕೆಲವು ಕೇಬಲ್ ಮತ್ತು ಹಗ್ಗದಂತ ವಸ್ತುಗಳು ಮಾತ್ರ ಸಿಕ್ಕಿವೆ ಎಂದು ಹೇಳಿದರು.

PREV

Recommended Stories

ಸತತ ಪರಿಶ್ರಮ, ಪ್ರಯತ್ನ ಗುರಿ ಮುಟ್ಟಲು ಸಾಧ್ಯ
ಡಿಕೆ ಸಿಎಂ ಆಗಲೆಂದು 1001ಈಡುಗಾಯಿ, ತುಲಾಭಾರ