ಮಾಗಡಿ: ಡಾ. ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡುವ ಹಕ್ಕಿದ್ದು, ಶಾಸಕ ಬಾಲಕೃಷ್ಣ ಪೊಲೀಸ್ ಇಲಾಖೆಯಿಂದ ನಮ್ಮನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಎಚ್.ಎಂ.ಕೃಷ್ಣಮೂರ್ತಿ ಆರೋಪಿಸಿದರು.
ನಾನು ತಾಲೂಕಿನಲ್ಲಿ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಲು ಪೊಲೀಸರ ಅನುಮತಿ ಕೇಳಿದರೆ, ನಿಮ್ಮಿಂದ ತಾಲೂಕಿನಲ್ಲಿ ಶಾಂತಿಭಂಗವಾಗುತ್ತಿದೆ. ತಾವು ಮಾಗಡಿಗೆ ಬಂದಾಗ ಶಾಸಕರ ವಿರುದ್ಧ ದಾಖಲೆಗಳಿಲ್ಲದೆ ಆರೋಪ ಮಾಡಿ, ಕಾರ್ಯಕರ್ತರ ನಡುವೆ ಗೊಂದಲ ಸೃಷ್ಟಿಸಿ ಹೋಗುತ್ತಿದ್ದೀರಾ, ನಿಮ್ಮಿಂದ ಮುಚ್ಚಳಿಕೆ ಬರೆಸಿಕೊಳ್ಳಬೇಕಾಗುತ್ತದೆ ಎಂದು ಮಾಗಡಿ ಪೊಲೀಸ್ ಠಾಣೆ ಸಿಎಚ್‌ಸಿ ಗಜೇಂದ್ರ ಕುಮಾರ್ ಅವರು ನೋಟಿಸ್ ನೀಡಿ, ಒಬ್ಬ ಗಣ್ಯರಿಂದ ಜಾಮೀನು ನೀಡಬೇಕು ಎಂದು ತಿಳಿಸಿದ್ದಾರೆ ಎಂದು ಹೇಳಿದರು.
ಶಾಸಕ ಎಚ್.ಸಿ.ಬಾಲಕೃಷ್ಣ ನನ್ನನ್ನು ಪೊಲೀಸ್ ಇಲಾಖೆಯಿಂದ ಕಟ್ಟು ಹಾಕುತ್ತೇನೆಂಬುದು ಅವರ ಭ್ರಮೆ. ಜೂ.18ರಂದು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಲು ಕರೆ ಕೊಟ್ಟಿದ್ದೆ, ಪೊಲೀಸ್ ಇಲಾಖೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿತ್ತು. ಅದಕ್ಕೆ ಲಿಖಿತಾ ರೂಪದಲ್ಲಿ ಮಾಹಿತಿ ಕೊಡುತ್ತೇವೆ ಎಂದು ತಿಳಿಸಿದ್ದಾರೆ. ಶಾಸಕರಿಗೆ ಸಂವಿಧಾನದ ಅಡಿಯಲ್ಲಿ ಕಾನೂನಿದ್ದರೆ ನಮಗೂ ಅದೇ ಸಂವಿಧಾನದಡಿಯಲ್ಲಿ ಪ್ರತಿಭಟನೆ ಮಾಡುವ ಹಕ್ಕಿದೆ. ನನ್ನಿಂದ ಯಾರಿಗಾದರೂ ಅನ್ಯಾಯವಾಗಿದ್ದರೆ ಅದನ್ನು ನೇರವಾಗಿ ಆರೋಪಿಸಲಿ. ಆದರೆ, ನನ್ನ ಹೋರಾಟ ಹತ್ತಿಕ್ಕಲು ಶಾಸಕರಿಂದ ಸಾಧ್ಯವಿಲ್ಲ ಎಂದು ಎಚ್.ಎಂ.ಕೃಷ್ಣಮೂರ್ತಿ ಎಚ್ಚರಿಕೆ ನೀಡಿದರು.ದಲಿತ ಮುಖಂಡ ಮಾಡಬಾಳ್ ಜಯರಾಂ ಮಾತನಾಡಿ, ಕಳೆದ 30 ವರ್ಷಗಳಿಂದಲೂ ಮಾಗಡಿ ತಾಲೂಕಿನಲ್ಲಿ ಕೆಂಪೇಗೌಡರ ಹೆಸರಿನಲ್ಲಿ ತಮ್ಮ ಸ್ವಂತ ಹಣದಲ್ಲಿ ಸಮಾಜ ಸೇವೆ ಮಾಡುತ್ತಿರುವ ಎಚ್.ಎಂ.ಕೃಷ್ಣಮೂರ್ತಿ ಅವರಿಗೆ ಪ್ರತಿಭಟನೆಗೆ ಅನುಮತಿ ನೀಡದೆ, ಪೊಲೀಸ್ ಇಲಾಖೆ ಮೂಲಕ ನೋಟಿಸ್ ಕಳಿಸಿರುವುದು ಸರಿಯಲ್ಲ, ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದಲ್ಲಿ ಅನ್ಯಾಯ ವಿರುದ್ಧ ಹೋರಾಡುವ ಹಕ್ಕು ಪ್ರತಿಯೊಬ್ಬರಿಗೂ ನೀಡಿದೆ ಎಂದು ಹೇಳಿದರು.
(ಫೋಟೋ ಕ್ಯಾಪ್ಷನ್)