ಕಾರವಾರ: ಹಲವು ಕಡೆಯಲ್ಲಿ ಗುಡ್ಡ, ಸೇತುವೆ ಕುಸಿತದಂಹತ ದುರಂತಗಳು ನಡೆದಿದೆ. ಕಾರವಾರದ ಕಾಳಿ ನದಿಗೆ ಕಟ್ಟಲಾದ ಸೇತುವೆ ಕುಸಿದಿದ್ದ ವೇಳೆ ಸಮಯ ಪ್ರಜ್ಞೆ ಮೆರೆದ ಪೊಲೀಸ್ ಸಿಬ್ಬಂದಿಯಿಂದ ಆಗಬಹುದಾದ ಭಾರಿ ದೊಡ್ಡ ಅನಾಹುತ ತಪ್ಪಿದೆ.
ತಾಲೂಕಿನ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿನಯ ಕಾಣಕೋಣಕರ ಭಾರಿ ಅನಾಹುತ ತಪ್ಪಿಸಿದವರಾಗಿದ್ದು, ಮಂಗಳವಾರ ರಾತ್ರಿ ಪಾಳಿಯಲ್ಲಿದ್ದ ವಿನಯಗೆ ಸೇತುವೆ ಕುಸಿದ ಬಗ್ಗೆ ಮಾಹಿತಿ ಬಂದಿದೆ. ತಕ್ಷಣವೇ ಎಚ್ಚೆತ್ತ ಅವರು, ೪ ಲಾರಿ ಹಾಗೂ ಕೆಲವು ವಾಹನಗಳನ್ನು ಒವರ್ ಟೇಕ್ ಮಾಡಿಕೊಂಡುಹೋಗಿ ತಡೆದು ವಾಪಸ್ ಹೋಗುವಂತೆ ತಿಳಿಸಿದ್ದಾರೆ. ಬಳಿಕ ಠಾಣೆಯ ಪಿಎಸ್‌ಐ ಮಾಂತೇಶ ಹಾಗೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಲಾರಿಯೊಂದು ಕಾಳಿ ನದಿಗೆ ಬಿದ್ದ ಬಗ್ಗೆ ತಿಳಿದು ಸ್ಥಳೀಯ ಮೀನುಗಾರರ ಸಹಾಯದಿಂದ ಬೋಟ್ ಮೂಲಕ ತೆರಳಿ ಆ ಲಾರಿ ಚಾಲಕನನ್ನು ರಕ್ಷಿಸಿದ್ದಾರೆ. ವಿನಯ ಅವರ ಈ ಕರ್ತವ್ಯಪ್ರಜ್ಞೆಯಿಂದ ಹಲವರ ಜೀವ ಉಳಿದಿದೆ. ಆಗಬಹುದಾದ ದೊಡ್ಡ ದುರಂತ ತಪ್ಪಿದೆ.ಸಚಿವ ಮಂಕಾಳ ವೈದ್ಯ, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠ ನಾರಾಯಣ ಹಾಗೂ ಸಾರ್ವಜನಿಕರು ಸಮಯಪ್ರಜ್ಞೆ ತೋರಿ ಹಲವರ ಜೀವ ಕಾಪಾಡಿದ ವಿನಯ ಅವರನ್ನು ಅಭಿನಂದಿಸಿದ್ದಾರೆ.ಸಚಿವರ ಶ್ಲಾಘನೆ: ಸ್ವಾತಂತ್ರ್ಯೋತ್ಸವದಂದು ಸಮಯಪ್ರಜ್ಞೆ, ಕರ್ತವ್ಯನಿಷ್ಠೆ ತೋರಿದ ಪೊಲೀಸ್ ಕಾನ್‌ಸ್ಟೇಬಲ್ ವಿನಯ ಹಾಗೂ ರಕ್ಷಣೆ ಕಾರ್ಯದಲ್ಲಿ ಪಾಲ್ಗೊಂಡ ಸ್ಥಳೀಯ ಮೀನುಗಾರರನ್ನು ಗೌರವಿಸಲಾಗುತ್ತದೆ. ವಿನಯ ಅವರ ಕಾರ್ಯದಿಂದಾಗಿ ಹಲವರ ಪ್ರಾಣ ಉಳಿದಿದೆ. ಇಂತಹ ತುರ್ತು ಸಂದರ್ಭದಲ್ಲಿ ಸಹಕಾರ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಚಿವ ಮಂಕಾಳು ವೈದ್ಯ ತಿಳಿಸಿದರು.
ಐಆರ್‌ಬಿ ವಿರುದ್ಧ ಹರಿಹಾಯ್ದ ಸಚಿವ ಮಂಕಾಳು ವೈದ್ಯಕಾರವಾರ: ಒಂದು ಸೇತುವೆ ನಿರ್ಮಾಣ ಮಾಡುವಾಗ ಮತ್ತೊಂದು ಸೇತುವೆ ಬಳಸಿಕೊಂಡು ನಿರ್ಮಾಣ ಮಾಡಿದ್ದು ಇದೇ ಮೊದಲಿರಬೇಕು. ಯಾವ ಕಂಪನಿಯೂ ಈ ರೀತಿ ಮಾಡುವುದಿಲ್ಲ. ಕಾಳಿ ಸೇತುವೆ ನಿರ್ಮಿಸುವಾಗ ಐಆರ್‌ಬಿ ಮಾತ್ರ ಹೀಗೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಐಆರ್‌ಬಿ ವಿರುದ್ಧ ಅಸಮಾಧಾನ ಹೊರಹಾಕಿದರು.ನಗರಕ್ಕೆ ಬುಧವಾರ ಆಗಮಿಸಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಹಳೆ ಸೇತುವೆ ಬಿದ್ದಿರುವುದನ್ನು ವೀಕ್ಷಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿ, ಕಾಳಿ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣ ಮಾಡಬೇಕಾದರೆ ಹಳೆಯ ಸೇತುವೆಯನ್ನು ಐಆರ್‌ಬಿ ಬಳಸಿಕೊಂಡಿದೆ. ಯಾರೂ ಕೂಡಾ ಈ ರೀತಿ ಮಾಡುವುದಿಲ್ಲ. ಸೇತುವೆ ಬೀಳಲು ಚತುಷ್ಪಥ ಗುತ್ತಿಗೆ ಪಡೆದ ಐಆರ್‌ಬಿಯೇ ಕಾರಣವಾಗಿದೆ. ಹೊಸ ಸೇತುವೆಯ ಸಾಮರ್ಥ್ಯ(ಫಿಟ್ನೆಸ್) ಪರಿಶೀಲನೆ ಮಾಡಬೇಕಿದೆ. ಈ ಹಿಂದೆ ಸುರಂಗಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ಅವರೇ ತಯಾರಿಸಿದ್ದರು. ಸೇತುವೆಗೆ ಏನು ಮಾಡಿದ್ದಾರೆ ಗೊತ್ತಿಲ್ಲ. ಕಾರವಾರದಿಂದ ಭಟ್ಕಳವರೆಗೆ ಚತುಷ್ಪಥ ನಿರ್ಮಾಣಕ್ಕೆ ಅವರಿಗೆ ಸಹಕಾರ ನೀಡಿದಷ್ಟು ಬೇರೆಯವರಿಗೆ ನೀಡಿದ್ದರೆ ಮತ್ತೊಂದು ರಸ್ತೆ ನಿರ್ಮಾಣವಾಗುತ್ತಿತ್ತು ಎಂದರು.ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ರಾಷ್ಟ್ರೀಯ ಹೆದ್ದಾರಿ ಕೇಂದ್ರ ಸರ್ಕಾರವೇ ನೋಡಿಕೊಳ್ಳುತ್ತದೆ. ರಾಜ್ಯಕ್ಕೆ ಯಾವುದೇ ಅಧಿಕಾರವಿಲ್ಲ. ಒಬ್ಬ ಅಧಿಕಾರಿಯೂ ರಾಜ್ಯ ಸರ್ಕಾರದಿಂದ ಇಲ್ಲ. ಕೇಂದ್ರವೇ ನಿಯಂತ್ರಣ ಹೊಂದಿದೆ. ಅವರು ಹೇಳಿದಷ್ಟು ವ್ಯವಸ್ಥೆ ಮಾಡಿಕೊಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದ ಅವರು, ಭೂಕುಸಿತ ತಡೆಗೆ ಹೆಚ್ಚುವರಿ ಅನುದಾನವನ್ನು ಕೇಂದ್ರಕ್ಕೆ ಕೇಳಿದ್ದೇವೆ. ಸುಪ್ರೀಂ ಕೋರ್ಟ್‌ಗೆ ಹೋಗಿ ಬರ ಪರಿಹಾರ ಪಡೆದುಕೊಳ್ಳುವ ಪರಿಸ್ಥಿತಿ ಕೇಂದ್ರ ಸರ್ಕಾರ ಮಾಡಿದೆ. ಇದಕ್ಕೂ ಅದೇ ರೀತಿ ಮಾಡುತ್ತದೆಯೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.