ಕುಕನೂರು:
ಪೊಲೀಸ್ ಸರ್ಪಗಾವಲಿನೊಂದಿಗೆ ಜಾಗದ ಸರ್ವೇ ನಂ. 78ರ ಸುತ್ತಮುತ್ತಲಿನ ಜಾಗದ ಗಡಿ ಭಾಗವನ್ನು ಸಹಾಯಕ ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ ನೇತೃತ್ವದಲ್ಲಿ ತಹಸೀಲ್ದಾರ್ ಎಚ್. ಪ್ರಾಣೇಶ್ ಜತೆಗೆ ಸರ್ವೇ ಅಧಿಕಾರಿಗಳೊಂದಿಗೆ ಸರ್ವೇ ನಡೆಸಲಾಯಿತು. ಸಿಪಿಐ ಮೌನೇಶ ಮಾಲಿಪಾಟೀಲ್ ಹಾಗೂ ಡಿ.ಆರ್. ಪೊಲೀಸ್ ಸಿಬ್ಬಂದಿಗಳಿದ್ದರು.
ದೇವಸ್ಥಾನದ ಜಾಗದಲ್ಲಿ ತಾಲೂಕಾಡಳಿತ ಸೌಧ ಮತ್ತು ನೂತನ ನ್ಯಾಯಾಲಯ ಮತ್ತು ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಈ ಜಾಗವನ್ನು ನಿಗದಿಪಡಿಸಿ ಜಿಲ್ಲಾಧಿಕಾರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಹ ಸಲ್ಲಿಸಿದ್ದರು. ಈ ಜಾಗವನ್ನು ಸರ್ಕಾರಿ ಕಟ್ಟಡಕ್ಕೆ ನೀಡುವುದಿಲ್ಲ ಎಂದು ಗುದ್ನೇಪ್ಪನಮಠ ವಾರ್ಡ್ ನಿವಾಸಿಗಳು ನ್ಯಾಯಾಲಯದ ಮೆಟ್ಟಿಲೇರಿ ತಡಯಾಜ್ಞೆ ತಂದಿದ್ದರು. ಸದ್ಯ ಸರ್ವೇ ನಂ.78ರ ಹೊರತುಪಡಿಸಿದ ಜಾಗವನ್ನು ಅಳೆತೆ ಮಾಡಲಾಗಿದ್ದು, ಈ ಸರ್ವೇ ಕಾರ್ಯ ನಿವಾಸಿಗಳಲ್ಲಿ ಮತ್ತಷ್ಟು ತಿರುವು ನೀಡಿದೆ.ಸರ್ಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಗ್ರಾಮಸ್ಥರು ಮತ್ತು ಸರ್ಕಾರಿ ಅಧಿಕಾರಿಗಳ ನಡುವೆ ಈಗಾಗಲೇ ತಿಕ್ಕಾಟ ನಡೆದು ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ನ್ಯಾಯಾಲಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಿದೆ ಎನ್ನಲಾಗಿದೆ. ಆದರೂ ಕೂಡ ಅಧಿಕಾರಿಗಳು ಮತ್ತೊಮ್ಮೆ ಸರ್ವೇ ಕಾರ್ಯಕ್ಕೆ ಮುಂದಾಗಿದ್ದು ದೇವಸ್ಥಾನದ ಭೂಮಿ ಕೈತಪ್ಪುವ ಭೀತಿಯಲ್ಲಿ ದೇವಸ್ಥಾನ ಸೇವಕರು ಮತ್ತು ಗ್ರಾಮಸ್ಥರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.