ನಶೆ ಏರಿಸಿಕೊಂಡವರಿಗೆ ಪೊಲೀಸ್‌ ಟ್ರೀಟ್‌ಮೆಂಟ್‌

KannadaprabhaNewsNetwork |  
Published : Jul 29, 2024, 12:56 AM IST
ಹುಬ್ಬಳ್ಳಿಯ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಮಾದಕ ವಸ್ತುಗಳನ್ನು ಉಪಯೋಗಿಸುವಂತವರನ್ನು ವಶಕ್ಕೆ ಪಡೆದು ಅವರಿಗೆ ಸಮಾಲೋಚನೆಯ ಮೂಲಕ ಅರಿವು ಮೂಡಿಸಲಾಯಿತು. | Kannada Prabha

ಸಾರಾಂಶ

ಮಾದಕ ವಸ್ತು ಬಳಕೆದಾರರ ಮೇಲೆ ವಿಶೇಷ ನಿಗಾವಹಿಸಿ ದಾಳಿ ನಡೆಸಿದ ಪೊಲೀಸರು, ಮಹಾನಗರದ ಪ್ರತಿ ಠಾಣೆ ವ್ಯಾಪ್ತಿಯಲ್ಲೂ 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವೇಳೆ 254 ಜನರಲ್ಲಿ ಪಾಸಿಟಿವ್ ಪತ್ತೆಯಾಗಿದೆ.

ಹುಬ್ಬಳ್ಳಿ:

ಹು-ಧಾ ಮಹಾನಗರದಲ್ಲಿ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತು ಬಳಸುವವರ ಮೇಲೆ ದಾಳಿ ನಡೆಸಿ 399 ಜನರನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸಲಾಗಿದೆ.

ಕಮೀಷನರೇಟ್‌ ವ್ಯಾಪ್ತಿಯಲ್ಲಿ ಮಾದಕ ವಸ್ತು ವ್ಯಸನಿಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಪೊಲೀಸರು ಗಾಂಜಾ ಪೆಡ್ಲರ್‌ ಸೇರಿದಂತೆ ಮಾರಾಟಗಾರರನ್ನು ಬಂಧಿಸಿದ್ದಾರೆ. ಈಚೆಗೆ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ಹೇಳಿದಂತೆ ಈಗ ಮಾದಕ ವಸ್ತು ಸೇವನೆ ಮಾಡುವವರ ಮನೆಗಳ ಮೇಲೆ ದಾಳಿ ಮಾಡಿ ಅವರನ್ನು ವಶಕ್ಕೆ ಪಡೆದು ಇಲ್ಲಿನ ಕಿಮ್ಸ್‌, ಧಾರವಾಡ ಜಿಲ್ಲಾಸ್ಪತ್ರೆ, ಧಾರವಾಡ ಮಾನಸಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು.

254 ಜನರಲ್ಲಿ ಪಾಸಿಟಿವ್‌:

ಮಾದಕ ವಸ್ತು ಬಳಕೆದಾರರ ಮೇಲೆ ವಿಶೇಷ ನಿಗಾವಹಿಸಿ ದಾಳಿ ನಡೆಸಿದ ಪೊಲೀಸರು, ಮಹಾನಗರದ ಪ್ರತಿ ಠಾಣೆ ವ್ಯಾಪ್ತಿಯಲ್ಲೂ 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವೇಳೆ 254 ಜನರಲ್ಲಿ ಪಾಸಿಟಿವ್ ಪತ್ತೆಯಾಗಿದ್ದು, ಇವರ ವಿರುದ್ಧ ಕಾನೂನು ಕ್ರಮ ಸಹ ಕೈಗೊಳ್ಳಲಾಗಿದೆ. ಒಟ್ಟು 59 ಎನ್‌ಡಿಪಿಎಸ್ ಪ್ರಕರಣ ದಾಖಲಾಗಿವೆ.

ಕೌನ್ಸೆಲಿಂಗ್‌:

ಮಾದಕ ವಸ್ತು ಬಳಕೆದಾರರ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಜತೆಗೆ ಕೌನ್ಸೆಲಿಂಗ್ ಸಹ ನಡೆಸಲಾಯಿತು. ವೈದ್ಯಕೀಯ ಪರೀಕ್ಷೆ ನಂತರ ಇಲ್ಲಿಯ ಗ್ಲಾಸ್‌ಹೌಸ್ ಬಳಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪಕ್ಕೆ ಬಳಕೆದಾರರನ್ನು ಕರೆದೊಯ್ಯಲಾಯಿತು. ಅಲ್ಲಿ ಮಾನಸಿಕ ತಜ್ಞ ವೈದ್ಯರು ಬಳಕೆದಾರರ ಜತೆಗೆ ಆಪ್ತಸಮಾಲೋಚನೆ ನಡೆಸಿ ಅವರ ಮಾನಸಿಕ ಸ್ಥಿತಿ-ಗತಿ ಬಗ್ಗೆ ವಿವರಿಸಲಾಯಿತು. ಇದರೊಂದಿಗೆ ಪೋಷಕರಿಗೆ ಮಕ್ಕಳ ಬಗ್ಗೆ ಹೇಗೆಲ್ಲಾ ಕಾಳಜಿ ವಹಿಸಬೇಕೆಂಬುದರ ಕುರಿತು ತಜ್ಞ ವೈದ್ಯರು ಅರಿವು ಮೂಡಿಸಿದರು.

ಸಿಬ್ಬಂದಿ ಹೈರಾಣು:

ಮಾದಕವಸ್ತು ಬಳಕೆದಾರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ನೂರಾರು ಜನರನ್ನು ಏಕಾಏಕಿ ಕಿಮ್ಸ್‌ಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು. ಅದರಲ್ಲೂ ಭಾನುವಾರ ರಜಾ ದಿನ ಇರುವ ಹಿನ್ನೆಲೆಯಲ್ಲಿ ಹೆಚ್ಚು ಸಿಬ್ಬಂದಿ ಇರಲಿಲ್ಲ. ಈ ಸಂದರ್ಭದಲ್ಲಿ ಹಿಂಡು ಹಿಂಡಾಗಿ ಬಂದವರನ್ನು ಪರೀಕ್ಷೆಗೆ ಒಳಪಡಿಸಲು ಅಲ್ಲಿನ ಸಿಬ್ಬಂದಿ ಹೈರಾಣಾದರು. ಬಳಿಕ ಎಚ್ಚೆತ್ತ ಆಸ್ಪತ್ರೆ ವೈದ್ಯಾಧಿಕಾರಿಗಳು ತಕ್ಷಣವೇ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಪರೀಕ್ಷಾ ಕಾರ್ಯ ಮುಂದುವರಿಸಿದರು. ಹೀಗಿದ್ದರೂ ಸಂಜೆಯ ವರೆಗೂ ಪರೀಕ್ಷಾ ಕಾರ್ಯ ನಡೆಯಿತು.103 ಹಾಟ್‌ಸ್ಪಾಟ್‌:

ಮಾದಕ ವಸ್ತು ಬಳಕೆ ತಡೆಗಟ್ಟಲು ದಿಟ್ಟ ಕ್ರಮಕ್ಕೆ ಮುಂದಾಗಿರುವ ಪೊಲೀಸರು, ಮಾದಕವಸ್ತು ಸೇವಿಸುವ ಅಡ್ಡೆಗಳನ್ನು ಪತ್ತೆ ಹಚ್ಚಿದೆ. ಈಗಾಗಲೇ ಹು-ಧಾ ಮಹಾನಗರದ 15 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ 103 ಹಾಟ್‌ಸ್ಪಾಟ್‌ ಗುರುತಿಸಿದೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿ 6, ಗೋಕುಲ್‌ರೋಡ್ 6, ಕೇಶ್ವಾಪುರ 10, ಹುಬ್ಬಳ್ಳಿ ಉಪನಗರ 8, ಕಮರಿಪೇಟೆ 4, ಘಂಟಿಕೇರಿ 5, ಹಳೇಹುಬ್ಬಳ್ಳಿ 13, ಅಶೋಕನಗರ 9, ಎಪಿಎಂಸಿ ನವನಗರ 5, ಬೆಂಡಿಗೇರಿ 6, ಕಸಬಾಪೇಟೆ 4 ಹಾಗೂ ಧಾರವಾಡದ ಉಪನಗರ 9, ಶಹರ 7, ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ಹಾಟ್‌ಸ್ಪಾಟ್‌ಗಳನ್ನು ಗುರುತಿಸಿದೆ.ವಿದ್ಯಾರ್ಥಿಗಳೇ ಹೆಚ್ಚು:

ಪೊಲೀಸರು ನಡೆಸಿದ ದಾಳಿಯ ವೇಳೆಯಲ್ಲಿ ವಶಕ್ಕೆ ಪಡೆದವರಲ್ಲಿ 20-25 ವಯೋಮಾನದ ಯುವಕರು ಮತ್ತು ಕಾಲೇಜು ವಿದ್ಯಾರ್ಥಿಗಳಿದ್ದಾರೆ. ನಂತರ ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡ ಪೊಲೀಸರು, ಅವರ ಪಾಲಕರನ್ನು ಕರೆಯಿಸಿ ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ತಿಳಿವಳಿಕೆ ಹೇಳಿ ಈ ರೀತಿಯ ಚಟುವಟಿಕೆಯಲ್ಲಿ ಮಕ್ಕಳು ಭಾಗಿಯಾಗದಂತೆ ತಿಳಿವಳಿಕೆ ನೀಡಲು, ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸುವಂತೆ ಪಾಲಕರಿಗೆ ತಿಳಿಹೇಳಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?