ಮಾ.3ರಿಂದ ಪೋಲಿಯೋ ಲಸಿಕಾಕರಣ ಪ್ರಾರಂಭ

KannadaprabhaNewsNetwork | Published : Mar 1, 2024 2:16 AM

ಸಾರಾಂಶ

ಪ್ರಸ್ತುತ 2024ರ ಮೊದಲ ಪಲ್ಸ್ ಪೋಲಿಯೋ ಮಾ.3ರಿಂದ ಆರಂಭವಾಗಲಿದ್ದು, ಪಲ್ಸ್ ಪೋಲಿಯೋವನ್ನು ಯಶಸ್ವಿಗೊಳಿಸಲು ಮನವಿ

ಚಳ್ಳಕೆರೆ: ಪ್ರಸ್ತುತ 2024ರ ಮೊದಲ ಪಲ್ಸ್ ಪೋಲಿಯೋ ಮಾ.3ರಿಂದ ಆರಂಭವಾಗಲಿದ್ದು, ಪಲ್ಸ್ ಪೋಲಿಯೋವನ್ನು ಯಶಸ್ವಿಗೊಳಿಸಲು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಎಲ್ಲಾ ಇಲಾಖೆ ಮುಖ್ಯಸ್ಥರು ಹಾಗೂ ಸಾರ್ವಜನಿಕರು ಸಹಕಾರ ನೀಡುವಂತೆ ತಹಸೀಲ್ದಾರ್ ರೇಹಾನ್‌ ಪಾಷ ಮನವಿ ಮಾಡಿದರು.

ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.

ಪ್ರತಿವರ್ಷವೂ ಪೋಲಿಯೋ ಯಶಸ್ವಿಗೊಳಿಸುವಲ್ಲಿ ಎಲ್ಲಾ ಇಲಾಖೆಗಳು ಆರೋಗ್ಯ ಇಲಾಖೆಗೆ ನಿರೀಕ್ಷೆಗೂ ಮೀರಿ ಸಹಕಾರ ನೀಡಿವೆ. ನಿಮ್ಮೆಲ್ಲರ ಸಹಕಾರದಿಂದ 2021-22ರಲ್ಲಿ ಪಲ್ಸ್ ಪೋಲಿಯೋ ಯಶಸ್ವಿಯಾಗಲು ಎಲ್ಲರೂ ಕಾರಣಕರ್ತರಾಗಿದ್ದೀರ. ಈ ಬಾರಿಯೂ ಸಹ ಇದರ ಯಶಸ್ಸು ಎಲ್ಲರಿಗೂ ಸಲ್ಲಲಿ ಎಂಬ ಉದ್ದೇಶದಿಂದ ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಎನ್.ಕಾಶಿ ಮಾಹಿತಿ ನೀಡಿ, ರಾಷ್ಟ್ರೀಯ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಇಂದು ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಸಭೆ ಕರೆಯಲಾಗಿದೆ. ಸಾರ್ವಜನಿಕರು, ಸಂಘ ಸಂಸ್ಥೆ ಪ್ರತಿನಿಧಿ, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಪೋಲಿಯೋ ಜಾಗೃತಿ ಹಂತ, ಹಂತವಾಗಿ ಹಮ್ಮಿಕೊಳ್ಳಲಾಗುವುದು. ಜಾಥಾದಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಸಿಬ್ಬಂದಿ ವರ್ಗವೂ ಕೈಜೋಡಿಸುವಂತೆ ಮನವಿ ಮಾಡಿದರು.

ತಾಲೂಕಿನಾದ್ಯಂತ ಒಟ್ಟು ೪೦೧೬೭೭ ಜನಸಂಖ್ಯೆ ಇದ್ದು, ಚಳ್ಳಕೆರೆ ನಗರದ ಜನಸಂಖ್ಯೆ ೫೭೩೫೮, ಗ್ರಾಮೀಣ ಭಾಗದ ಜನಸಂಖ್ಯೆ ೩೪೪೧೩೯, ೦-೫ ವರ್ಷಗಳ ಮಕ್ಕಳ ಸಂಖ್ಯೆ ಒಟ್ಟು ೨೮೮೨೬, ಈ ಪೈಕಿ ಗ್ರಾಮೀಣ ೨೫೪೨೮, ನಗರ ೩೩೯೮, ತಾಲೂಕಿನಾದ್ಯಂತ ಒಟ್ಟು ಮನೆಗಳ ಸಂಖ್ಯೆ ೮೪೬೫೦, ಪಲ್ಸ್ ಪೋಲಿಯೋ ಒಟ್ಟು ಬೂತ್ ೨೩೩, ಒಟ್ಟು ಕಾರ್ಯನಿರ್ವಹಿಸುವ ತಂಡ ೪೭೦, ಮೇಲ್ವಿಚಾರಕರು ೫೧, ಪೋಲಿಯೋ ಯಶಸ್ವಿಗೆ ಕಾರ್ಯನಿರ್ವಹಿಸುವರು ಎಂದರು.

ಈ ಸಂದರ್ಭದಲ್ಲಿ ಸಿಡಿಪಿಒ ಹರಿಪ್ರಸಾದ್, ಬೆಸ್ಕಾಂ ಎಇಇ ರಾಜು, ರೋಟರಿಕ್ಲಬ್ ಅಧ್ಯಕ್ಷ ಕೆ.ನಾಗೇಶ್, ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್, ಡಾ.ಗೀತಾ, ಡಾ.ಸಂದೀಪ್, ಡಾ.ಮಂಜುನಾಥ, ಪ್ರದೀಪ್, ಶರತ್, ಆರೋಗ್ಯ ಶಿಕ್ಷಣ ಅಧಿಕಾರಿ ಎಸ್.ಬಿ.ತಿಪ್ಪೇಸ್ವಾಮಿ, ನಗರಸಭೆ ಆರೋಗ್ಯ ನಿರೀಕ್ಷ ಗಣೇಶ್ ಇದ್ದರು.

Share this article