ರಾಜಕೀಯ ಸರ್ವಾಧಿಕಾರ ಖಂಡನೀಯ: ಕಾಂಗ್ರೆಸ್ ಆಕ್ರೋಶ

KannadaprabhaNewsNetwork | Published : Jan 25, 2024 2:00 AM

ಸಾರಾಂಶ

ದೊಡ್ಡಬಳ್ಳಾಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ 'ಭಾರತ್ ಜೋಡೋ ನ್ಯಾಯಯಾತ್ರೆ' ಮೇಲೆ ದಾಳಿ ಯತ್ನ ನಡೆಸಿದ ಅಸ್ಸಾಂ ಸರ್ಕಾರ ಹಾಗೂ ಬಿಜೆಪಿ ಕಾರ್ಯಕರ್ತರ ನಡೆ ಖಂಡಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ದೊಡ್ಡಬಳ್ಳಾಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ''ಭಾರತ್ ಜೋಡೋ ನ್ಯಾಯಯಾತ್ರೆ'' ಮೇಲೆ ದಾಳಿ ಯತ್ನ ನಡೆಸಿದ ಅಸ್ಸಾಂ ಸರ್ಕಾರ ಹಾಗೂ ಬಿಜೆಪಿ ಕಾರ್ಯಕರ್ತರ ನಡೆ ಖಂಡಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ದೊಡ್ಡಬಳ್ಳಾಪುರ ಕ್ಷೇತ್ರದ ಮಾಜಿ ಶಾಸಕ ಟಿ. ವೆಂಕಟರಮಣಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್‌ ವಿರುದ್ಧ ಘೋಷಣೆ ಕೂಗಲಾಯಿತು.

ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ಅಸ್ಸಾಂ ಸರ್ಕಾರ ರಾಹುಲ್‌ ಗಾಂಧಿ ಅವರ ನ್ಯಾಯಯಾತ್ರೆಯನ್ನು ತಡೆಯುವ ದುಸ್ಸಾಹಸ ಮಾಡಿದೆ. ರಾಜಕೀಯ ಪ್ರೇರಿತ ದಾಳಿಗಳು ಖಂಡನೀಯ. ದೇಶದ ಸಾಂವಿಧಾನಿಕ ವ್ಯವಸ್ಥೆಯ ವಿರುದ್ಧ ಹೆಣೆದಿರುವ ಚಿತಾವಣೆಗೆ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಗಾಂಧಿಮಾರ್ಗದಲ್ಲಿ ನಡೆಯುತ್ತಿರುವ ಶಾಂತಿಯುತ ಯಾತ್ರೆಯನ್ನು ಗುರಿಯಾಗಿಸಿ ನಡೆದಿರುವ ದಾಳಿ ಅಕ್ಷಮ್ಯ. ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಅತ್ಯಂತ ಆತಂಕ ಎದುರಿಸುತ್ತಿದೆ ಎಂಬುದಕ್ಕೆ ಈ ಸರ್ವಾಧಿಕಾರಿ ಧೋರಣೆ ಮತ್ತು ನಡೆಯೇ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್. ಗೌಡ ಮಾತನಾಡಿ, ಮಣಿಪುರದಿಂದ ಆರಂಭಿಸಿದ ಭಾರತ್ ಜೋಡೋ ನ್ಯಾಯಯಾತ್ರೆಯು ಅಸ್ಸಾಂ ಪ್ರವೇಶಿಸಿದಾಗ ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ಬಿಜೆಪಿ ಮುಖಂಡರು ಗೂಂಡಗಳನ್ನು ಬಿಟ್ಟು ನ್ಯಾಯಯಾತ್ರೆಗೆ ಅಡ್ಡಿಪಡಿಸಿದ್ದಾರೆ. ರಾಹುಲ್ ಸಾಗುತ್ತಿದ್ದ ಬಸ್ ಅಡ್ಡಗಟ್ಟಿ ಅವರ ಮೇಲೆ ದಾಳಿ ನಡೆಸಲು ಯತ್ನಿಸಲಾಗಿದೆ. ಅಸ್ಸಾಂ ಮುಖ್ಯಮಂತ್ರಿ ನಿಮಂತ್ ಬಿಸ್ವಾಸ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ದಾಳಿ ಯತ್ನ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ಮುಖಂಡ ಸಿ.ಡಿ ಸತ್ಯನಾರಾಯಣಗೌಡ, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಪ್ಪ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ಮುಖಂಡರಾದ ಆಂಜನಮೂರ್ತಿ, ಶಿವಶಂಕರ್, ನಾರಾಯಣಗೌಡ, ಆದಿತ್ಯ ನಾಗೇಶ್, ರೇವತಿ ಅನಂತ ರಾಮ್, ಮಮತಾ, ಮುನಿಕೃಷ್ಣ, ಜವಾಜಿ ರಾಜೇಶ್, ಜನಾರ್ದನ್, ಅಪಕಾರನಹಳ್ಳಿ ಶ್ರೀನಿವಾಸ್, ರಮೇಶ್, ವಿನೋದ್ ಕುಮಾರ್, ಮುನಿರಾಜು, ಮಾರಪ್ಪ ಉಮೇಶ್, ರಾಮಾಂಜಿನಪ್ಪ ಸೇರಿದಂತೆ ಅನೇಕರಿದ್ದರು.23ಕೆಡಿಬಿಪಿ1-

ದೊಡ್ಡಬಳ್ಳಾಪುರದಲ್ಲಿ ಬೆಂ.ಗ್ರಾ ಜಿಲ್ಲಾ ಕಾಂಗ್ರೆಸ್‌ ನೇತೃತ್ವದಲ್ಲಿ ರಾಹುಲ್‌ ಗಾಂಧಿ ಅವರ ನ್ಯಾಯಯಾತ್ರೆ ವೇಳೆ ಅಸ್ಸಾಂನಲ್ಲಿ ನಡೆದ ರಾಜಕೀಯ ಪ್ರೇರಿತ ದಾಳಿ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

Share this article