ಕನ್ನಡಪ್ರಭ ವಾರ್ತೆ ಮಾಲೂರು
ಮರುಮತ ಎಣಿಕೆಯಲ್ಲಿ ಹಿನ್ನಡೆಯಾಗಿ ಮೋಸ ಮಾಡಿ ಶಾಸಕನಾಗಿರುವುದು ಸಾಬೀತಾದರೆ ರಾಜಕೀಯದಿಂದಲೇ ನಿವೃತ್ತಿ ಪಡೆದು ಮನೆಯಲ್ಲಿರುವುದಾಗಿ ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ಅವರು ನಗರದ ಬಸ್ ನಿಲ್ದಾಣ ಕಟ್ಟಡ ಕಾಮಗಾರಿ ತೆರುವುಗೊಳಿಸುತ್ತಿರುವುದನ್ನು ವೀಕ್ಷಿಸಿ ಮಾತನಾಡಿ, ವಿರೋಧ ಪಕ್ಷದ ಕೆಲವರು ಮರುಮತ ಎಣಿಕೆ ಹಾಗೂ ಅಸಿಂಧು ಆದೇಶ ಬಗ್ಗೆ ಮಾತನಾಡುತ್ತಿದ್ದಾರೆ, ಮತ್ತೊಮ್ಮೆ ಶಾಸಕರಾಗುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.ತಿರುಕನ ಕನಸು ಕಾಣಬೇಡಿ
ನ್ಯಾಯಾಲಯದ ಆದೇಶದ ಮೇಲೆ ಗೌರವವಿದೆ, ಉಚ್ಚ ನ್ಯಾಯಾಲಯ ನ್ಯಾಯಾಧೀಶರು ಆದೇಶ ನೀಡಿ ಮೇಲ್ಮನವಿಗೆ ಅವಕಾಶ ಕಲ್ಪಿಸಿದ್ದಾರೆ, ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದ ಶಾಸಕರು ತಾಲೂಕಿನ ಅಭಿವೃದ್ಧಿಗೆ ನ್ಯಾಯಾಲಯದ ಆದೇಶವನ್ನು ತಳುಕು ಹಾಕುವುದು ಬೇಡ ತಿರುಕನ ಕನಸು ಕಾಣುವುದು ಬೇಡ ಮರುಮತ ಎಣಿಕೆಯಾದರೆ ಮೂರನೇ ಬಾರಿಗೆ ಗೆಲುವು ನಮ್ಮದೆ ಇದೆ ಎಂದರು.ತೀರ್ಫು ತಮ್ಮ ವಿರುದ್ಧ ಬರಲಿದೆ ಎಂದು ಗೋತ್ತಾಗಿ ಬಸ್ ನಿಲ್ದಾಣವನ್ನು ತುರ್ತಾಗಿ ತೆರವು ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಬಗ್ಗೆ ಪ್ರತಿಕ್ರಿಸಿದ ಶಾಸಕರು, ನಾನು ಆ ಭ್ರಮೆಯಲ್ಲಿಲ್ಲ. ಮಂಜುನಾಥ ಗೌಡ ಆಕಸ್ಮಿಕವಾಗಿ ಹೊಸಕೋಟೆ ತಾಲೂಕಿನಿಂದ ಮಾಲೂರು ತಾಲೂಕಿನ ರಾಜಕಾರಣಕ್ಕೆ ಬಂದಿದ್ದಾರೆ, ನಾನು ಹಾಗೆ ಬಂದಿಲ್ಲ ಕೆಳ ಹಂತದಿಂದ ನನ್ನ ತಾಲೂಕಿನ ಜನತೆ ನನ್ನನ್ನು ರಾಜಕೀಯವಾಗಿ ಆಶೀರ್ವಾದ ಮಾಡಿದ್ದಾರೆ, ಅಭಿವೃದ್ಧಿಗಾಗಿ ಏನು ಮಾಡಬೇಕು ಅದನ್ನೇ ಮಾಡುತ್ತೇನೆ ಎಂದರು.
ಬಸ್ ನಿಲ್ದಾಣ ಇಂದು ನಿನ್ನೆಯದಲ್ಲಬಸ್ ನಿಲ್ದಾಣ ನಿರ್ಮಾಣ ನಿನ್ನೆ ಮೊನ್ನೆ ಕೈಗೊಂಡ ತೀರ್ಮಾನವಲ್ಲ. ನಗರಸಭೆಯಲ್ಲಿ ಒಂದು ವರ್ಷದಿಂದ ಸಾಮಾನ್ಯ ಸಭೆಗಳಲ್ಲಿ ಚರ್ಚಿಸಿ ತೆಗೆದುಕೊಂಡ ನಿರ್ಧಾರ. ಹಣ ಎಲ್ಲಿಂದ ತರಬೇಕು, ಅಂಗಡಿಗಳ ತೆರವಿಗೆ ಯಾವ ಕ್ರಮ ವಹಿಸಬೇಕು, ಬಸ್ ನಿಲ್ದಾಣವನ್ನು ೨೧.೫ ಕೋಟಿ ರು.ಗಳ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಹಳೆಯ ಬಸ್ ನಿಲ್ದಾಣ ಕಟ್ಟಡಗಳು ತೆರವುಗೊಳಿಸಲಾಗುತ್ತಿದೆ. ಅಂಗಡಿಗಳ ವ್ಯಾಪಾರಸ್ಥರು ಸಹಕಾರ ನೀಡಿ ತೆರವು ಮಾಡಿದ್ದಾರೆ, ಬಸ್ ನಿಲ್ದಾಣದ ಜೊತೆಗೆ ವಾಣಿಜ್ಯ ಸಂಕೀರ್ಣ, ಪಾರ್ಕಿಂಗ್ ವ್ಯವಸ್ಥೆಗೂ ಸಹ ಯೋಜನೆ ಸಿದ್ಧವಾಗಿದೆ ಎಂದರು.ಅಕ್ಟೋಬರ್ ೩೧ ರಂದು ಮುಖ್ಯಮಂತ್ರಿಗಳು ತಾಲೂಕಿಗೆ ಆಗಮಿಸಲಿದ್ದು ಯಾವುದೇ ಕಾರಣಕ್ಕೂ ಕಾರ್ಯಕ್ರಮ ಮುಂದುಡುವುದು ಬೇಡ ಎಂದು ಮುಖ್ಯಮಂತ್ರಿಗಳೇ ತಿಳಿಸಿದ್ದಾರೆ, ಸುಮಾರು ೨೫೦೦ ಕೋಟಿ ರೂಗಳ ವೆಚ್ಚದ ಮೇಲ್ಸೇತುವೆ ನಾಲ್ಕು ಪಥದ ರಸ್ತೆ ಬಸ್ ನಿಲ್ದಾಣ, ಕೆರೆ ಅಭಿವೃದ್ಧಿ, ವಾಲ್ಮೀಕಿ ಭವನ, ವಿದ್ಯಾರ್ಥಿ ನಿಲಯ, ಅಂಬೇಡ್ಕರ್ ವಸತಿ ಶಾಲೆ, ಸೇರಿದಂತೆ ಹಲವು ಕಟ್ಟಡಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ ಎಂದರು.ಗ್ರಾಮೀಣರಿಗೆ ನಿವೇಶನ:
ಗ್ರಾಮೀಣ ಪ್ರದೇಶದಲ್ಲಿಯೂ ಸಹ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನಗಳನ್ನು ನೀಡಲು ಈಗಾಗಲೇ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಿದ್ದು, ನಿವೇಶನಗಳು ಹಂಚಿಕೆಗೆ ಅಗತ್ಯವಿರುವ ಜಮೀನು ಒದಗಿಸಲು ತಾಲೂಕು ಆಡಳಿತ ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಸಭೆಗಳನ್ನು ಸಹ ನಡೆಸಿ ಜಮೀನು ಮಂಜೂರು ಮಾಡಿಸಲು ಪ್ರಯತ್ನ ಮಾಡಲಾಗುತ್ತಿದೆ.ಈ ಸಂದರ್ಭದಲ್ಲಿ ನಗರ ಸಭೆ ಅಧ್ಯಕ್ಷೆ ವಿಜಯಲಕ್ಷ್ಮಿ, ತಹಸೀಲ್ದಾರ್ ಎಂ.ವಿ.ರೂಪ, ದರಕಾಸ್ತು ಸಮಿತಿ ಅಧ್ಯಕ್ಷ ಆನೇಪುರ ಹನುಮಂತಪ್ಪ, ತಾ.ಪಂ. ವಿ.ಕೃಷ್ಣಪ್ಪ, ನಗರಸಭಾ ಸದಸ್ಯರಾದ ಆರ್ ವೆಂಕಟೇಶ್, ಜಾಕಿರ್ ಖಾನ್, ಮುರಳಿಧರ್, ನಗರಸಭೆಯ ಅಧಿಕಾರಿಗಳು ಹಾಜರಿದ್ದರು..