ಕೆಲವೇ ತಿಂಗಳಲ್ಲಿ ರಾಜಕೀಯ ಕ್ರಾಂತಿ: ಎಚ್‌ಡಿಕೆ

KannadaprabhaNewsNetwork |  
Published : Nov 23, 2025, 02:00 AM IST
ಎಚ್‌.ಡಿ.ಕುಮಾರಸ್ವಾಮಿ | Kannada Prabha

ಸಾರಾಂಶ

ಮುಂದಿನ ಐದಾರು ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆಯುವ ಸಾಧ್ಯತೆಯಿದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂದಿನ ಐದಾರು ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆಯುವ ಸಾಧ್ಯತೆಯಿದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್‌ ರಜತ ಮಹೋತ್ಸವದ ಪ್ರಯುಕ್ತ ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ನಡೆದ ಜೆಡಿಎಸ್‌ ರಾಷ್ಟ್ರೀಯ ಮಹಾ ಅಧಿವೇಶನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ ಮುಂದಿನ ದಿನಗಳಲ್ಲಿ ಯಾರೂ ಕೂಡ ನಿರೀಕ್ಷೆ ಮಾಡದ ಬೆಳವಣಿಗೆಗಳು ನಡೆಯಲಿವೆ ಎಂದು ಭವಿಷ್ಯ ನುಡಿದರು.ರಾಜಕೀಯದಲ್ಲಿ ಯಾರು ಯಾವಾಗ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಪ್ರಸ್ತುತ ರಾಜ್ಯದಲ್ಲಿ ಅಂತಹ ಪರಿಸ್ಥಿತಿ ಸೃಷ್ಟಿ ಆಗಿದೆ ಎಂದು ಕಾಂಗ್ರೆಸ್‌ ಪಕ್ಷದ ಬೆಳವಣಿಗೆಗಳ ಬಗ್ಗೆ ಪರೋಕ್ಷವಾಗಿ ಹೇಳಿದರು.

ದಿನಕ್ಕೊಂದು, ಕ್ಷಣಕ್ಕೊಂದು ರಾಜಕೀಯ ಬೆಳವಣಿಗೆ ನಡೆಯುತ್ತಿರುವುದು ನೋಡಿದರೆ ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ರಾಜಕೀಯ ಕ್ರಾಂತಿಯೇ ಆಗುವ ಸಾಧ್ಯತೆ ಇದೆ. ಹೀಗಾಗಿ ಕಾರ್ಯಕರ್ತರು ಮತ್ತು ಮುಖಂಡರು ಜನರ ಜತೆಯೇ ಇರಬೇಕು. ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಕೇಂದ್ರ ಸಚಿವರು ಕರೆ ನೀಡಿದರು.

ಪಕ್ಷಕ್ಕೆ ಒಂದು ಅವಕಾಶ ಕೊಡಿ:

ರಾಜ್ಯ ಕಾಂಗ್ರೆಸ್‌ ಸರ್ಕಾರದ ಕೆಟ್ಟ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ. ತೆರಿಗೆ, ದರ ಏರಿಕೆ ಸುಲಿಗೆಯಿಂದ ಬೇಸತ್ತು ಹೋಗಿದ್ದಾರೆ. ಮುಂದೆ ನಮ್ಮ ಪಕ್ಷಕ್ಕೆ ಒಂದು ಅವಕಾಶ ಕೊಡಿ. ಐದು ವರ್ಷದಲ್ಲಿ‌ ಯಾವ ರೀತಿ ಆಡಳಿತ ಕೊಡಬೇಕು, ಜನರಿಗೆ ಏನೆಲ್ಲ ಒಳ್ಳೆಯದು ಮಾಡಬೇಕು ಎಂಬುದನ್ನು ಸಾಬೀತು ಮಾಡಿ ತೋರಿಸುತ್ತೇನೆ. ಒಂದು ವೇಳೆ ಜನ ಮೆಚ್ಚುವ ಸರ್ಕಾರ ನನ್ನಿಂದ ಕೊಡಲು ಆಗದಿದ್ದರೆ ಈ ಜನ್ಮದಲ್ಲಿ ಮತ್ತೆ ನನ್ನ ಮುಖ ತೋರಿಸಲ್ಲ ಎಂದು ಹೇಳಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ರಾಜ್ಯದ ಸಾಲ 7.50 ಲಕ್ಷ ಕೋಟಿ ರು. ದಾಟಿದೆ. ಸಿದ್ದರಾಮಯ್ಯ ಒಬ್ಬರೇ 5ರಿಂದ 5.50 ಲಕ್ಷ ಕೋಟಿ ರು. ಸಾಲ ಮಾಡಿದ್ದಾರೆ. ಏನಕ್ಕೆ ಇಷ್ಟು ಸಾಲ ಮಾಡಿದರು? ಯಾವ ಪುರುಷಾರ್ಥಕ್ಕೆ ಮಾಡಿದರು ಎಂಬುದನ್ನು ಜನರಿಗೆ ಉತ್ತರ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ನಾವು ಯಾರಿಗೂ ಅನ್ಯಾಯ ಮಾಡಿಲ್ಲ:

ಜನರು ಹಾಗೂ ಕಾರ್ಯಕರ್ತರಿಂದ ಜೆಡಿಎಸ್ ಉಳಿದಿದೆ. ಜನತೆಗೆ ನಮ್ಮ ಕೈಲಾದಷ್ಟು ಒಳ್ಳೆಯದನ್ನು ಮಾಡಿದ್ದೇವೆ. ನಾವೇನು ಅನ್ಯಾಯ ಮಾಡಿದ್ದೇವೆ ಈ ರಾಜ್ಯಕ್ಕೆ? ದೇವೇಗೌಡರು ಏನು ಅನ್ಯಾಯ ಮಾಡಿದ್ದಾರೆ? ನಮಗೆ ಯಾಕೆ ಪೂರ್ಣ ಪ್ರಮಾಣದ ಆಶೀರ್ವಾದ ಸಿಕ್ಕಿಲ್ಲ? ಯಾವ ಸಮುದಾಯಕ್ಕೂ ನಮ್ಮ ಪಕ್ಷದಿಂದ ಅನ್ಯಾಯ ಆಗಿಲ್ಲ. ಬೇರೆ ಬೇರೆ ರಾಜ್ಯಗಳ ಜನರು ದೇವೇಗೌಡರನ್ನು ನೆನಪು ಮಾಡಿಕೊಳ್ಳುತ್ತಾರೆ. ನಮ್ಮ ರಾಜ್ಯದ ಜನತೆಗೆ ಏಕೆ ಅಂತಹ ಭಾವನೆ ಇಲ್ಲ ಎಂದು ಸಚಿವರು ಅತೀವ ಬೇಸರ ವ್ಯಕ್ತಪಡಿಸಿದರು.

ಜಾತಿ ಗಣತಿ ಹೆಸರಿನಲ್ಲಿ ಜನರ ವಿಭಜನೆ:ಅಭಿವೃದ್ಧಿ ಹೆಸರಿನಲ್ಲಿ ರಾಜಕಾರಣ ಮಾಡಲು ಇವರಿಗೆ ಆಗುತ್ತಿಲ್ಲ. ಅದರಿಂದಲೇ ವಾಮಮಾರ್ಗಗಳ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲಿವೆ ಕಾಂತರಾಜು, ಜಯಪ್ರಕಾಶ್ ಹೆಗಡೆ, ಮಧುಸೂದನ್ ನಾಯ್ಕ್ ವರದಿಗಳು? ಸ್ವಲ್ಪ ಹೇಳುತ್ತೀರಾ ಮುಖ್ಯಮಂತ್ರಿಗಳೇ ಎಂದು ಕುಮಾರಸ್ವಾಮಿ ಅವರು ಹರಿಹಾಯ್ದರು.

ಗ್ಯಾರಂಟಿ ಹೆಸರಿನಲ್ಲಿ ದರೋಡೆ:ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಲೂಟಿ ಮಾಡುತ್ತಿದೆ. ಇನ್ನೂ ಎಷ್ಟು ದರೋಡೆ ಮಾಡುತ್ತೀರಿ? ಎಷ್ಟೊಂದು ತೆರಿಗೆಗಳನ್ನು ಏರಿಸಿದಿರಿ? ಎಷ್ಟೊಂದು ಬೆಲೆಗಳನ್ನು ಹೆಚ್ಚಳ ಮಾಡಿದಿರಿ? ಬಿ ಖಾತಾ ಎ ಖಾತಾ ತೆರಿಗೆ ಎಂದು ಧೋಖಾ ಮಾಡುತ್ತಿದ್ದೀರಿ. ಬೆಂಗಳೂರಿನಲ್ಲಿ, ರಾಜ್ಯದಲ್ಲಿ ರಸ್ತೆ ಗುಂಡಿಗೆ ಬಿದ್ದು ಎಷ್ಟೋ ಜನ ಸಾವನ್ನಪ್ಪಿದ್ದಾರೆ. ಕಬ್ಬು ಬೆಳೆಗಾರರ ಕಬ್ಬಿಗೆ ಬೆಂಕಿ ಹಾಕಿದ್ದು ಯಾರು ಅಂತಾ ಗೊತ್ತಿಲ್ಲಾ. ಈ ಪಾಪ ಸುಮ್ಮನೆ ಬಿಡಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ಸಿದ್ದರಾಮಯ್ಯ ಅವರು 25- 30 ವರ್ಷದಿಂದಲೂ ಅಧಿಕಾರದಲ್ಲಿಯೇ ಇದ್ದಾರೆ. ಈ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ? ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದಾರೆ. ಏನು ಸಾಧನೆ ಮಾಡಿದ್ದೀರಿ? ಬೆಂಗಳೂರು ನಗರವನ್ನು ಹೋಳು ಮಾಡಿ ಗ್ರೇಟರ್ ಬೆಂಗಳೂರು ಅಂತ ಮಾಡಿ ಐವರು ಮೇಯರ್ ಗಳನ್ನು ಮಾಡಿ ಏನು ಮಾಡುವಿರಿ ಎಂದು ಟೀಕಾಪ್ರಹಾರ ನಡೆಸಿದರು.

ಜ್ಯೋತಿಷಿಯನ್ನೇ ಟ್ರ್ಯಾಪ್ ಮಾಡಿ ಗೌಡರಿಗೆ ವಂಚನೆ:ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ತಮ್ಮ ಇಡೀ ಬದುಕನ್ನು ಜನರಿಗೆ ಮೀಸಲಿಟ್ಟರು. ಅವರು ಅಧಿಕಾರಕ್ಕಾಗಿ ಇನ್ನೊಬ್ಬರ ಮನೆ ಬಾಗಿಲಿಗೆ ಹೋದವರಲ್ಲ. ಈ ರಾಜ್ಯವನ್ನು ದೀರ್ಘ ಕಾಲ ಆಳಿದ ದೇವರಾಜ ಅರಸು ಅವರೇ ಮುಂದೆ ಬಂದು ನನ್ನ ನಮ್ಮ ಜೊತೆ ಕೈ ಜೋಡಿಸು ಎಂದು ಹೇಳಿದರೂ ದೇವೇಗೌಡರು ಕೇಳಲಿಲ್ಲ. ಒಂದು ಆದರ್ಶ, ಮೌಲ್ಯ ಇಟ್ಟುಕೊಂಡು ಅವರು ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಅಂತಹವರ ಮೇಲೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಿದರು. ದೇವೇಗೌಡರು ಜ್ಯೋತಿಷ್ಯ ನಂಬುತ್ತಾರೆ ಎಂದು ಆ ಜ್ಯೋತಿಷಿಗಳನ್ನು ಟ್ರ್ಯಾಪ್ ಮಾಡಿ ವಂಚಿಸಿದರು. ಅಲ್ಲದೆ, ಮೈಸೂರಿನಲ್ಲಿ ದೇವೇಗೌಡರು 500 ನಿವೇಶನಗಳನ್ನು ಖರೀದಿ ಮಾಡಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಿದರು. ದೇವೇಗೌಡರ ವಿರುದ್ದ ಸಿಐಡಿ, ಲೋಕಾಯುಕ್ತ ಸೇರಿ ಅನೇಕ ತನಿಖೆಗಳನ್ನು ನಡೆಸಿದರು. ಕೊನೆಗೆ ಸತ್ಯಕ್ಕೆ ಜಯವಾಯಿತು. ದೇವೇಗೌಡರು ಏನೆಂಬುದು ರಾಜ್ಯದ ಜನತೆಗೆ ತಿಳಿಯಿತು ಎಂದು ಅವರು ಹೇಳಿದರು.ಸಿಎಂ ಕುರ್ಚಿಗೆ ಕಾಂಗ್ರೆಸ್‌ನಲ್ಲಿ ಶಾಸಕರ ಖರೀದಿ: ಪ್ರಹ್ಲಾದ್‌ ಜೋಶಿ:

ರಾಜ್ಯದ ಜನ ಕಾಂಗ್ರೆಸ್‌ಗೆ ಪ್ರಚಂಡ ಬಹುಮತ ಕೊಟ್ಟಿದ್ದರೂ ದ್ರೋಹ ಬಗೆಯುತ್ತಿದ್ದಾರೆ. ಕುರ್ಚಿಗಾಗಿ ಶಾಸಕರ ಖರೀದಿಗೆ ಇಳಿದಿದ್ದು, ಜೈಲಿಗೂ ಹೋಗಿ ಭೇಟಿಯಾಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಸಂಪೂರ್ಣ ಆಡಳಿತ ಮರೆತಿದೆ. ರಾಜ್ಯದ ಜನ, ರೈತರು ಸಂಕಷ್ಟದಲ್ಲಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬೆಂಗಳೂರಿನಲ್ಲಿ ಹಾಡುಹಗಲೇ ದರೋಡೆ ನಡೆದಿದೆ. ಇದನ್ನೆಲ್ಲ ನೋಡಿದರೆ ಸರ್ಕಾರಕ್ಕೆ ಆಡಳಿತದ ಕಡೆಗೆ ಗಮನ ಕಡಿಮೆ ಆಗಿದ್ದು, ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ಶಾಸಕರು ಚೀಟಿ ಕೊಟ್ಟು ವರ್ಗಾವಣೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಗುದ್ದಾಟ ಶುರುವಾಗಿದ್ದು, ವೋಟಿಂಗ್‌ನಲ್ಲಿ ತಮ್ಮ ನಂಬರ್ ಹೊಂದಿಸುವುದಕ್ಕೆ ಇಳಿದಿದ್ದಾರೆ. ಈ ಜಗಳದಲ್ಲಿ ರಸ್ತೆಗಳು ಅಭಿವೃದ್ಧಿಯಾಗುತ್ತಿಲ್ಲ. ನೀರಾವರಿ ಯೋಜನೆಗಳಿಗೆ ಹಣವಿಲ್ಲ ಎಂದರು.ಏಕನಾಥ ಶಿಂಧೆ ಮಾಡಲು ಬಯಸಲ್ಲ:

ರಾಜ್ಯದಲ್ಲಿ ಅಸ್ಥಿರತೆ ನಡುವೆಯೂ ಯಾರನ್ನೋ ಕರೆದುಕೊಂಡು ಬಂದು ಏಕನಾಥ ಶಿಂಧೆ ಮಾಡಲು ನಾವು ಬಯಸುವುದಿಲ್ಲ. ಅಂಥ ಪ್ರಯತ್ನಕ್ಕೆ ನಾವು ಕೈಹಾಕುವುದಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಜನರು ಪೂರ್ಣ ಬಹುಮತ ನೀಡಿದ್ದು, ಅವರು 5 ವರ್ಷ ಅಧಿಕಾರ ನಡೆಸಲಿ. ಆದರೆ, ಒಳ್ಳೆಯ ಆಡಳಿತ ನೀಡಲಿ. ಮಹಾರಾಷ್ಟ್ರದಲ್ಲಿ ನಾವು ಬಹುಮತ ಗಳಿಸಿ ಅತಿ ದೊಡ್ಡ ಪಕ್ಷವಾಗಿದ್ದೇವು. ನಮಗೆ ಜನಮನ್ನಣೆ ಇತ್ತು. ಏಕನಾಥ ಶಿಂಧೆ ಶಿವಸೇನೆಯಿಂದ ಹೊರಗೆ ಬಂದು ನಮ್ಮ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದೇವು. ಕರ್ನಾಟಕದಲ್ಲಿ ಹಾಗೇ ಆಗುವುದಿಲ್ಲ ಎಂದು ಹೇಳಿದರು.

PREV

Recommended Stories

ತಂತ್ರಜ್ಞಾನವನ್ನು ಒಳ್ಳೆಯದಕ್ಕೆ ಬಳಸಿ: ಶಾಸಕ ಅಶೋಕ ಪಟ್ಟಣ
ಸೈಕ್ಲಿಂಗ್‌ ಪಟುಗಳಿಗೆ ಸಂವಿಧಾನ ಪಾಠ ಮಾಡಿದ ಸಚಿವ ಸಂತೋಷ ಲಾಡ್