ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ರಾಜಕೀಯ ಕ್ಷೇತ್ರ ಬಹುಮುಖ್ಯ: ಚಲುವರಾಯಸ್ವಾಮಿ

KannadaprabhaNewsNetwork | Published : Apr 23, 2025 12:33 AM

ಸಾರಾಂಶ

2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾಗಮಂಗಲದಿಂದ ಶ್ರವಣಬೆಳಗೊಳ ರಸ್ತೆ ನಿರ್ಮಾಣಕ್ಕೆ 30 ಕೋಟಿ ರು. ಅನುದಾನ ಮಂಜೂರು ಮಾಡಿಸಲಾಗಿತ್ತು. ನಂತರದ 5 ವರ್ಷದಲ್ಲಿ ಬಂದವರು ಆ ರಸ್ತೆಯನ್ನು ಪೂರ್ಣಗೊಳಿಸಲು ಆಗಿಲ್ಲ.

ಕನ್ನಡಪ್ರಭ ವಾರ್ತೆ ನಾಗಮಂಗಲ

ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಜಾಪ್ರಭುತ್ವದಲ್ಲಿ ರಾಜಕೀಯ ಕ್ಷೇತ್ರ ಬಹುಮುಖ್ಯ. ಜನರು ನಮ್ಮನ್ನು ಸೋಲಿಸಲಿ ಅಥವಾ ಗೆಲ್ಲಿಸಲಿ. ಜಿಲ್ಲೆಯ ಜನರ ಸೇವೆ ಮಾಡುವುದು ನಮ್ಮ ಮೊದಲ ಕರ್ತವ್ಯ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ದೊಡ್ಡಬಾಲ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀಹುಚ್ಚಪ್ಪಸ್ವಾಮಿ ಮತ್ತು 14 ಕೂಟದ ದೇವರುಗಳ ಜಾತ್ರಾ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ದ್ವೇಷ ಅಸೂಯೆ ತುಂಬಿರುವ ವ್ಯವಸ್ಥೆಯಲ್ಲಿ ಒಂದಷ್ಟು ಒಳ್ಳೆಯ ಕೆಲಸಗಳಾಗುತ್ತಿವೆ. ಸಿಎಂ ಸಿದ್ದರಾಮಯ್ಯರಂತೆ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಶಕ್ತಿ ಬರುತ್ತಿದೆ ಎಂದರೆ ಇಂತಹ ಧಾರ್ಮಿಕ ಪದ್ಧತಿ ದೇವರ ಅನುಗ್ರಹ ಇದೆ ಎಂದು ನಂಬಲೇಬೇಕು ಎಂದರು.2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾಗಮಂಗಲದಿಂದ ಶ್ರವಣಬೆಳಗೊಳ ರಸ್ತೆ ನಿರ್ಮಾಣಕ್ಕೆ 30 ಕೋಟಿ ರು. ಅನುದಾನ ಮಂಜೂರು ಮಾಡಿಸಲಾಗಿತ್ತು. ನಂತರದ 5 ವರ್ಷದಲ್ಲಿ ಬಂದವರು ಆ ರಸ್ತೆಯನ್ನು ಪೂರ್ಣಗೊಳಿಸಲು ಆಗಿಲ್ಲ ಎಂದು ದೂರಿದರು.

ಚನ್ನರಾಯಪಟ್ಟಣ, ಕೆ.ಆರ್.ಪೇಟೆ ತಾಲೂಕಿನ ಹಲವು ಕೆರೆಗಳೂ ಸೇರಿದಂತೆ ತಾಲೂಕಿನ 70 ರಿಂದ 100 ಕೆರೆಗಳಿಗೆ ನೀರು ತುಂಬಿಸಲು ಅಂದು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿ 260 ಕೋಟಿ ರು. ವೆಚ್ಚದ ಏತ ನೀರಾವರಿ ಯೋಜನೆಗೆ ಮಂಜೂರಾತಿ ಕೊಡಿಸಲಾಗಿತ್ತು. ನಂತರದಲ್ಲಿ ಮುಖ್ಯಮಂತ್ರಿಯಾಗಿದ್ದವರು ಯೋಜನೆಯ ಕಾಮಗಾರಿ ಪ್ರಾರಂಭಿಸಲು ಆಗಲಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರನ್ನು ಜರಿದರು.

ಹಳೆಯ ಅನುದಾನ 260 ಕೋಟಿ ರು. ಅಲ್ಲದೇ, ಕೈಬಿಟ್ಟು ಹೋಗಿದ್ದ ತಾಲೂಕಿನ ಮತ್ತಷ್ಟು ಕೆರೆಗಳಿಗೆ ನೀರು ತುಂಬಿಸಲು ಹೆಚ್ಚುವರಿಯಾಗಿ 113 ಕೋಟಿ ರು. ಸೇರಿಸಿ ಕಳೆದ 6 ತಿಂಗಳ ಹಿಂದೆ ಯೋಜನೆ ಮಂಜೂರು ಮಾಡಿಸಲಾಗಿದೆ. ಎರಡು ತಿಂಗಳಲ್ಲಿ ಕಾಮಗಾರಿ ಆರಂಭಿಸಿ ಮುಂದಿನ ಎರಡು ಮೂರು ವರ್ಷಗಳಲ್ಲಿ ಪೂರ್ಣಗೊಳಿಸಿ ಈ ಭಾಗದ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುವುದು ಎಂದರು.

ನಾಗಮಂಗಲ, ಕೆ.ಆರ್.ಪೇಟೆ ಮತ್ತು ಪಾಂಡವಪುರ ತಾಲೂಕಿನ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವ 700 ಕೋಟಿ ರು.ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ನಾನು ಪ್ರಥಮ ಬಾರಿಗೆ ಶಾಸಕನಾಗಿದ್ದ ವೇಳೆ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಮತ್ತು ನೀರಾವರಿ ಇಲಾಖೆಯ ಎಂಡಿ ತಿಮ್ಮೇಗೌಡ ಅವರು ನೆನಗುದಿಗೆ ಬಿದ್ದಿದ್ದ ತಿಪಟೂರು, ತುರುವೇಕೆರೆ ತಾಲೂಕಿನಿಂದ ಹಾಯ್ದು ನಾಗಮಂಗಲ ತಾಲೂಕಿನ ಎನ್‌ಬಿಸಿ ನಾಲಾ ಅಭಿವೃದ್ಧಿ ಕಾಮಗಾರಿಗೆ ಮಂಜೂರಾತಿ ನೀಡಿ ಹಣ ಬಿಡುಗಡೆ ಮಾಡಿಸಿದ್ದರು. ಅದೇ ಎನ್‌ಬಿಸಿ ನಾಗಮಂಗಲಕ್ಕೆ ತಲುಪಲು ಸಾಧ್ಯವಾಗದಿರುವುದರಿಂದ 600 ಕೋಟಿ ರು. ವೆಚ್ಚದಲ್ಲಿ ನಾಲಾ ಆಧುನೀಕರಣ ಕಾಮಗಾರಿಗೆ ಕಳೆದ ಸಚಿವ ಸಂಪುಟ ಸಭೆಯಲ್ಲಿ ಮಂಜೂರಾತಿ ಕೊಡಿಸಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ 224 ಮಳೆ ಆಶ್ರಿತ ತಾಲೂಕುಗಳಿಗೆ ಕೃಷಿ ಹೊಂಡ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದಾರೆ. ಕೃಷಿ ಇಲಾಖೆಯಲ್ಲಿ 1 ಸಾವಿರ ಕೋಟಿಗೂ ಹೆಚ್ಚು ಸಹಾಯಧನವನ್ನು ರೈತರ ಅಭಿವೃದ್ಧಿಗಾಗಿ ನೀಡಲಾಗಿದೆ. ಮಂಡ್ಯ ತಾಲೂಕಿನ ಬಸರಾಳು, ನಾಗಮಂಗಲ ತಾಲೂಕಿನ ಹೊಣಕೆರೆ ಮತ್ತು ದೇವಲಾಪುರ ಹೋಬಳಿಯ ಕೆರೆಗಳಿಗೆ ನೀರು ತುಂಬಿಸಲು 1 ಸಾವಿರ ಕೋಟಿ ವೆಚ್ಚದ ಯೋಜನೆಗೆ ಮೊದಲ ಹಂತವಾಗಿ 500 ಕೋಟಿ ರು. ಮಂಜೂರಾತಿ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ, ಕೆ.ಉದಯ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ ಗಂಗಾಧರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಓ ಕೆ.ಆರ್. ನಂದಿನಿ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಸಿ ಕೆ.ಆರ್.ಶ್ರೀನಿವಾಸ್, ತಹಸೀಲ್ದಾರ್ ಜಿ.ಆದರ್ಶ, ಡಿವೈಎಸ್‌ಪಿ ಬಿ.ಚಲುವರಾಜು, ತಾಪಂ ಇಒ ಸತೀಶ್, ಸಮಾಜ ಸೇವಕ ಸ್ಟಾರ್‌ಚಂದ್ರು, ಮನ್ಮುಲ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಸುರೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಜಿಪಂ ಮಾಜಿ ಸದಸ್ಯ ಎಂ.ಪ್ರಸನ್ನ, ಉದ್ಯಮಿ ಶ್ರೀಕಾಂತ್ ಸೇರಿದಂತೆ ಹಲವರು ಇದ್ದರು.

Share this article