ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ: ಶಾಸಕ ರಾಯರಡ್ಡಿ

KannadaprabhaNewsNetwork | Published : Apr 8, 2025 12:32 AM

ಸಾರಾಂಶ

ಬೇವೂರನಲ್ಲಿ ನೀರಾವರಿ ಯೋಜನೆಗೆ ಬಿಜೆಪಿಯವರು ಅಡಿಗಲ್ಲು ಹಾಕಿದ್ದರು. ಅದು ಎಲ್ಲಿದೆ? ಅದಕ್ಕೆ ನಾನು ಹೇಳಿದ್ದು ಅದು ಅಡಿಗಲ್ಲು ಅಲ್ಲ, ಅದು ಅಡ್ಡಗಲ್ಲು. ಏಕೆಂದರೆ ಕೃಷ್ಣಾ ಬಿ ಸ್ಕೀಂ ಯೋಜನೆ ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಿರುವಾಗ ತಾಲೂಕಿನಲ್ಲಿ ನೀರಾವರಿ ಮಾಡುತ್ತೇನೆಂದು ಸುಳ್ಳು ಭಾಷಣ ಮಾಡಿ ಜನರ ದಾರಿ ತಪ್ಪಿಸುವ ಕಾರ್ಯ ಮಾಡುವುದೇ ಬಿಜೆಪಿಯವರ ಕೆಲಸವಾಗಿದೆ.

ಯಲಬುರ್ಗಾ:

ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ. ಬಹುತೇಕ ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ. ಅವರನ್ನು ಸುಧಾರಿಸಬೇಕಾದ ಜನರೂ ಭ್ರಷ್ಟರಾದರೆ ಗತಿಯೇನು? ಚುನಾವಣೆ ಬಂದರೆ ಕೋಟ್ಯಂತರ ರುಪಾಯಿ ಹಣ ಖರ್ಚು ಮಾಡಿ ಮತ ಪಡೆಯಬೇಕು. ನಮ್ಮಂತಹ ರಾಜಕಾರಣಿಗಳಿಗೆ ಏನು ಬೆಲೆಯಿದೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಬೇವೂರು ಗ್ರಾಮದಲ್ಲಿ ಸೋಮವಾರ ಲೋಕೋಪಯೋಗಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಬಸ್ ನಿಲ್ದಾಣ, ಪ್ರವಾಸಿ ಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಾರು ಅಭಿವೃದ್ಧಿ ಪರ ಕೆಲಸ ಮಾಡುತ್ತಾರೋ ಅಂತಹವರನ್ನು ಜನತೆ ಆಯ್ಕೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದ ಅವರು, ಇದೇ ಬೇವೂರನಲ್ಲಿ ನೀರಾವರಿ ಯೋಜನೆಗೆ ಬಿಜೆಪಿಯವರು ಅಡಿಗಲ್ಲು ಹಾಕಿದ್ದರು. ಅದು ಎಲ್ಲಿದೆ? ಅದಕ್ಕೆ ನಾನು ಹೇಳಿದ್ದು ಅದು ಅಡಿಗಲ್ಲು ಅಲ್ಲ, ಅದು ಅಡ್ಡಗಲ್ಲು. ಏಕೆಂದರೆ ಕೃಷ್ಣಾ ಬಿ ಸ್ಕೀಂ ಯೋಜನೆ ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಿರುವಾಗ ತಾಲೂಕಿನಲ್ಲಿ ನೀರಾವರಿ ಮಾಡುತ್ತೇನೆಂದು ಸುಳ್ಳು ಭಾಷಣ ಮಾಡಿ ಜನರ ದಾರಿ ತಪ್ಪಿಸುವ ಕಾರ್ಯ ಮಾಡುವುದೇ ಬಿಜೆಪಿಯವರ ಕೆಲಸವಾಗಿದೆ. ₹ ೯೭೦ಕೋಟಿ ವೆಚ್ಚದಲ್ಲಿ ೩೦ ಹೊಸ ಕೆರೆ ನಿರ್ಮಿಸಿ ಅವುಗಳಿಗೆ ನೀರು ತುಂಬಿಸಲಾಗುವುದು. ಇಂತಹ ಬೃಹತ್ ಯೋಜನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕ್ಷೇತ್ರದ ಜನತೆ ಎಷ್ಟು ಸ್ಮರಿಸಿದರು ಸಾಲದು ಎಂದು ಗುಣಗಾನ ಮಾಡಿದರು.

ಬಿಜೆಪಿ ಸಂಸದರನ್ನೇ ಪ್ರಧಾನಿ ನರೇಂದ್ರ ಮೋದಿ ಸರಿಯಾಗಿ ಮಾತನಾಡಿಸಲ್ಲ. ಇನ್ನೂ ನಮ್ಮ ಸಂಸದ ರಾಜಶೇಖರ ಹಿಟ್ನಾಳ್‌ಗೆ ಅನುದಾನ ನೀಡುವುದು ದೂರದ ಮಾತು ಎಂದ ರಾಯರಡ್ಡಿ, ರಾಜ್ಯದಲ್ಲಿ ಮುಜರಾಯಿ ಇಲಾಖೆ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ನೀಡುತ್ತದೆ. ಅದರಂತೆ ಕೇಂದ್ರ ಸರ್ಕಾರವು ದೇಗುಲ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಕಿತ್ತುಹಾಕಿ:

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗಾಗಿ ಜೆಜೆಎಂ ಕುಡಿಯುವ ನೀರಿನ ಯೋಜನೆಗೆ ಬಳಸಿದ ಎಲ್ಲ ಪೈಪ್‌ಗಳು ಕಳೆಪೆ ದರ್ಜೆಯಾಗಿದ್ದು ಅವುಗಳನ್ನು ಕಿತ್ತುಹಾಕಿ ಹೊಸ ಪೈಪಲೈನ್ ಅಳವಡಿಸುವಂತೆ ಸೂಚಿಸಿದ್ದೇನೆ. ಜನರಿಗೆ ಸಮರ್ಪಕ ಕುಡಿಯುವ ನೀರು ಕೊಡದಿದ್ದರೆ ಡಿಸಿ, ಸಿಇಒ, ಎಸಿ ಮೇಲೆ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆಂದ ಅವರು, ಸರ್ಕಾರಿ ಕಟ್ಟಡಗಳು ಸರಿ ಇಲ್ಲದಿದ್ದರೆ ಮುಲಾಜಿಯಿಲ್ಲದೆ ಕಿತ್ತುಹಾಕಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಯಲಬುರ್ಗ ಮಾದರಿ ಕ್ಷೇತ್ರ:

ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ ಸಾರಿಗೆ ಸಚಿವ ರಾಮಲಿಂಗಾರಡ್ಡಿ, ಶಾಸಕ ಬಸವರಾಜ ರಾಯರಡ್ಡಿಯಂತೆ ಕ್ಷೇತ್ರದ ಅಭಿವೃದ್ದಿ ಹೇಗೆ ಮಾಡಬೇಕೆಂಬುದನ್ನು ಬೇರೆ ಶಾಸಕರು ನೋಡಿ ಕಲಿತುಕೊಳ್ಳಬೇಕಿದೆ. ಈ ಕ್ಷೇತ್ರದಲ್ಲಿ ೧೮ ಹೊಸ ನಿಲ್ದಾಣ ನಿರ್ಮಿಸಿಕೊಳ್ಳಲಿದ್ದಾರೆ. ರಾಜ್ಯದ ಯಾವ ತಾಲೂಕಿನಲ್ಲೂ ಇಷ್ಟೊಂದು ನಿಲ್ದಾಣಗಳಿಲ್ಲ. ಕೊಪ್ಪಳದ ಹುಲಿಗೆಮ್ಮ ದೇವಸ್ಥಾನ ಹಾಗೂ ಆಂಜನಾದ್ರಿ ಬೆಟ್ಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ₹ ೧೦೦ ಕೋಟಿ ಅನುದಾನ ನೀಡಿದ್ದು ಅಗತ್ಯ ಮೂಲಭೂತ ಸೌಕರ್ಯ ದೊರಕಿಸಿ ಸಾರ್ವಜನಿರಿಗೆ ಅನುಕೂಲ ಕಲ್ಪಿಸಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಈ ವೇಳೆಯಲ್ಲಿ ಸಂಸದ ರಾಜಶೇಖರ ಹಿಟ್ನಾಳ, ಗ್ರಾಪಂ ಅಧ್ಯಕ್ಷೆ ಅಂದಮ್ಮ ಬಳಿಗಾರ, ಜಿಲ್ಲಾಧಿಕಾರಿ ನಲೀನ್ ಅತುಲ್, ಎಸಿ ಕ್ಯಾ. ಮಹೇಶ ಮಾಲಗತ್ತಿ, ಸಾರಿಗೆ ಅಧಿಕಾರಿ ಎಂ. ರಾಚಪ್ಪ, ರಮೇಶ ಚಿಣಗಿ, ಹೇಮಂತರಾಜ, ಮಲ್ಲಿಕಾರ್ಜುನ, ತಹಸೀಲ್ದಾರ್‌ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಪಾಟೀಲ, ಮುಖಂಡರಾದ ವೀರನಗೌಡ ಬಳೂಟಗಿ, ಕೆರಿಬಸಪ್ಪ ನಿಡಗುಂದಿ, ಎ.ಜಿ. ಭಾವಿಮನಿ, ರಾಘವೇಂದ್ರ ಜೋಶಿ, ಮಹೇಶ ಹಳ್ಳಿ, ಹನುಮಂತಗೌಡ ಚೆಂಡೂರು, ಆನಂದ ಉಳ್ಳಾಗಡ್ಡಿ, ಡಾ. ಶಿವನಗೌಡ ದಾನರೆಡ್ಡಿ ಇದ್ದರು. ರಾಯರಡ್ಡಿ ಸಹೋದರನ ಕಿರಿಕ್‌ಶಾಸಕ ಬಸವರಾಜ ರಾಯರಡ್ಡಿ ಮಾತನಾಡುತ್ತಿದ್ದಾಗ ಅವರ ಸಹೋದರ ಶಿವಣ್ಣ ರಾಯರಡ್ಡಿ ಸಾರಿಗೆ ಸಚಿವ ರಾಮಲಿಂಗಾರಡ್ಡಿ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಮಧ್ಯೆ ನಿಂತುಕೊಂಡು ಕೈಯಲ್ಲಿ ದಾಖಲೆ ಹಿಡಿದುಕೊಂಡು ಪದೇ ಪದೇ ಮಾತನಾಡಿಸುತ್ತಿದ್ದರು. ಆಗ ಆಯಿತು ಹೋಗಿ ಎಂದು ಹೇಳಿದರೂ ಸುಮ್ಮನೆ ಆಗದಿದ್ದಾಗ ಸಚಿವರು ರ‍್ರೀ ಅಲ್ಲಿ ಶಾಸಕರು ಮಾತನಾಡುತ್ತಿದ್ದಾರೆ. ನಿಮಗೆ ಗೊತ್ತಾಗಲ್ಲ ಎಂದು ಏರುಧ್ವನಿಯಲ್ಲಿ ಗದುರಿಸಿದಾಗ ವೇದಿಕೆಯಿಂದ ಶಿವಣ್ಣ ಕಾಲಕ್ಕಿತ್ತರು.

Share this article