ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರಗತಿಯ ಕುರಿತ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ರಾಜಕಾರಣಿಗಳು ರಸ್ತೆ, ಚರಂಡಿ ನಿರ್ಮಿಸುವುದೇ ನಿಜವಾದ ಅಭಿವೃದ್ಧಿ ಎಂದುಕೊಂಡಿದ್ದಾರೆ. ರೈತ ಮತ್ತು ಕನ್ನಡಪರ ಸಂಘಟನೆಗಳು, ಹೋರಾಟಗಾರರು ನೆಲ-ಜಲ, ನಾಡು-ನುಡಿ ಮತ್ತು ತಮ್ಮ ಸಂಘಟನೆಗಳ ಉದ್ದೇಶ ಈಡೇರಿಕೆಗಾಗಿ ಹೋರಾಟವನ್ನು ನಡೆಸುತ್ತಾರೆ. ಆದರೆ, ಮಂಡ್ಯದ ಸಾಂಸ್ಕೃತಿಕ ವಲಯ ಅಭಿವೃದ್ಧಿಗೆ ಧ್ವನಿ ಎತ್ತುವವರು ಯಾರು?. ಸಚಿವರು, ಶಾಸಕರಿಗೆ ಈ ಬಗ್ಗೆ ಯೋಚಿಸಲೂ ಸಮಯವಿಲ್ಲ. ಜಿಲ್ಲಾಡಳಿತ ತನ್ನದೇ ಕೆಲಸ ಕಾರ್ಯಗಳಲ್ಲಿ ಮುಳುಗಿದೆ. ಇದಕ್ಕಾಗಿ ಪ್ರತಿ ತಾಲೂಕಿನಲ್ಲಿ ಜನಪರ ಕಾಳಜಿ ಇರುವ ಮುಖಂಡರನ್ನು ಕರೆಸಿ ಒಂದು ಸಮಿತಿ ಮಾಡಿ ಆದ್ಯತಾ ವಲಯವನ್ನು ಗುರುತಿಸಿ ಸ್ವಾಮೀಜಿ ಮತ್ತು ಸಚಿವರನ್ನು ಕರೆದು ಅವರ ಮುಂದೆ ಮಂಡಿಸಿ ಕಾರ್ಯ ಪ್ರವೃತ್ತರಾಗಬೇಕಾಗಿದೆ. ಈ ಉದ್ದೇಶಕ್ಕಾಗಿ ಜೂನ್ ೭ ರಂದು ಸಭೆ ಕರೆಯಲಾಗುವುದು ಎಂದರು.
ಮಂಡ್ಯದಲ್ಲಿ ನಾಲ್ವಡಿ ಮತ್ತು ಕೆಂಪೇಗೌಡ ಅವರ ಪ್ರತಿಮೆ ಸ್ಥಾಪಿಸಬೇಕು. ಇದಕ್ಕಾಗಿ ಸರ್ಕಾರದ ಮೇಲೆ ಅವಲಂಬಿತರಾಗದೇ ಬೇರೆ ಸಾಧ್ಯತೆಗಳನ್ನು ಯೋಚಿಸಬೇಕು. ಮಂಡ್ಯ ಅಭಿವೃದ್ಧಿಗೆ ಉಸ್ತುವಾರಿ ಸಚಿವ ಚಲುವರಾಯಸ್ವಾಮಿಯವರಿಗಿಂತ ಇನ್ಯಾವ ನಾಯಕರು ಬೇಕು. ಅವರು ಮನಸು ಮಾಡಿದರೆ ಇದೇನು ಅಸಾಧ್ಯವಲ್ಲ. ಆದರೆ, ಈ ಬಗ್ಗೆ ನಾನು ಹೇಳಲು ಹೋದರೆ ನಿಷ್ಠುರವಾಗುತ್ತಿದೆ. ಗೌರವ, ಪ್ರೀತಿ, ವಿಶ್ವಾಸ ಬೇರೆ. ಇಲ್ಲಿನ ಅಭಿವೃದ್ಧಿಗಾಗಿ ಮಾತನಾಡುವುದು ಬೇರೆ ಬೇಸರ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಉತ್ತಮವಾಗಿ ನಾಟಕ ಪ್ರದರ್ಶಿಸಲು ಉತ್ತಮ ರಂಗಮಂದಿರ ಎಲ್ಲಿದೆ?. ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ಮತ್ತು ಅಂಬೇಡ್ಕರ್ ಭವನ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಮದ್ದೂರಿನ ಶಿವಪುರ ಸತ್ಯಾಗ್ರಹ ಸೌಧದ ಅಭಿವೃದ್ಧಿಯ ಬಗ್ಗೆ ಯಾರು ಪ್ರಸ್ತಾಪ ಮಾಡುತ್ತಿಲ್ಲ. ಏಳು ಕೋಟಿ ವೆಚ್ಚದಲ್ಲಿ ಕಿಷ್ಕಿಂಧೆಯಂತ ಜಾಗದಲ್ಲಿ ಕನ್ನಡ ಭವನ ಕಟ್ಟುವ ಬದಲು ಎರಡು ಎಕರೆ ವಿಸ್ತೀರ್ಣ ಇರುವ ಜಾಗದಲ್ಲಿ ನಿರ್ಮಿಸುವುದು ಸೂಕ್ತ. ಎಲ್ಲವೂ ಮಂಡ್ಯದ ಮಧ್ಯದಲ್ಲೇ ಆಗಬೇಕು ಎನ್ನುವುದಾದರೆ ಮಂಡ್ಯ ಬೆಳೆಯುವುದು ಯಾವಾಗ? ಇಲ್ಲೊಂದು ಬಯಲು ರಂಗಮಂದಿರವಿಲ್ಲ. ಅದರ ಬಗ್ಗೆ ದನಿ ಎತ್ತುವವರೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘಟನೆಗಳಿಗೆ ಇರುವ ಶಕ್ತಿ ಯಾರಿಗೂ ಇಲ್ಲ. ಹಾಗಾಗಿ ಎಲ್ಲರನ್ನು ಒಂದುಗೂಡಿಸಿ ಒತ್ತಡ ಹಾಕುವ ಕೆಲಸ ಮಾಡಬೇಕಾಗಿದೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ ಎಚ್.ಡಿ. ಚೌಡಯ್ಯನವರು ಮನವಿ ಮಾಡಿದ್ದನ್ನು ಬಿಟ್ಟರೆ ಬೇರೆ ಯಾರೂ ಅವರನ್ನು ಬಳಸಿಕೊಳ್ಳಲಿಲ್ಲ. ಉತ್ತರ ಕರ್ನಾಟಕದ ಕೂಡಲಸಂಗಮ, ಬಸವಕಲ್ಯಾಣದಲ್ಲಿ ಅಭಿವೃದ್ಧಿಗೆ ಹಣ ಹರಿದುಹೋಗುತ್ತಿದೆ. ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ಮಾಡಲಾಗಿದೆ. ಮಂಡ್ಯದಂತ ಜಿಲ್ಲೆಗೆ ಯಾವ ಅನುದಾನವೂ ಇಲ್ಲ. ಇದನ್ನು ಪ್ರಶ್ನಿಸಬೇಕಾದ ಹೋರಾಟಗಾರರು, ಸಾಹಿತಿಗಳು, ಸಂಘಟನೆಗಳಲ್ಲಿ ಪ್ರಾಮಾಣಿಕತೆ ಇಲ್ಲ ಎಂದು ಬೇಸರದಿಂದ ನುಡಿದರು.