ಹಾವೇರಿ: ಬರ ಪರಿಹಾರ ಪಡೆಯಲು ಇರುವ ನಿಯಮಗಳನ್ನು ರಾಜ್ಯ ಸರ್ಕಾರದವರು ಸರಿಯಾಗಿ ಪಾಲನೆ ಮಾಡಲಿಲ್ಲ. ಅದರಲ್ಲಿ ರಾಜಕಾರಣ ಮಾಡುತ್ತ ಕಾಲಹರಣ ಮಾಡಿದರು. ಬರ ಪರಿಹಾರ ಬಿಡುಗಡೆ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆ ಜಾರಿಯಲಿದ್ದರೂ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಅನುಮತಿ ಪಡೆದು ರಾಜ್ಯಕ್ಕೆ ಬರ ಪರಿಹಾರ ನೀಡಿರುವುದು, ರಾಜ್ಯದ ರೈತರ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇರುವ ಕಾಳಜಿ ತೋರಿಸುತ್ತದೆ ಎಂದರು.
ಮಾನೆ ಸಾಧನೆ ಹೇಳಿಕೊಳ್ಳಲಿ: ಶ್ರೀನಿವಾಸ ಮಾನೆ ಹಾನಗಲ್ಲನಲ್ಲೇ ಇರುತ್ತಾರೆ. ಸಮ್ಮಸಗಿ, ಮಾರನಬೀಡ ಮೂರು ಏತ ನೀರಾವರಿ ₹೬೦೦ ಕೋಟಿ ವೆಚ್ಚದಲ್ಲಿ ಮಾಡಿದ್ದು ಯಾರು ಎಂದು ತಿಳಿದುಕೊಳ್ಳಲಿ. ತಿಳುವಳ್ಳಿ ಏತ ನೀರಾವರಿ, ಧರ್ಮಾ ಕಾಲುವೆ ಆಧುನೀಕರಣ ಮಾಡಿದಾಗ ಜಲಸಂಪನ್ಮೂಲ ಸಚಿವರು ಯಾರಿದ್ದರು ಎಂಬುದನ್ನು ಮಾನೆಯವರು ತಿಳಿದುಕೊಳ್ಳಲಿ. ಅವರ ಸಾಧನೆ ಹೇಳಿಕೊಳ್ಳಲು ಅವರ ಬಳಿ ಏನೂ ಇಲ್ಲ. ಹೀಗಾಗಿ ಅವರು ನನ್ನ ಬಗ್ಗೆಯೇ ಮಾತನಾಡುತ್ತಾರೆ. ಅವರ ಸಾಧನೆ ಅವರು ಹೇಳಿಕೊಳ್ಳಲಿ ಎಂದರು.