ಬಳಂಜ ಸ.ಉ.ಹಿ. ಪ್ರಾಥಮಿಕ ಮತ್ತು ಪ್ರೌಢಶಾಲೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ
ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣ ಸಿಗಬೇಕು ಮತ್ತು ಬಳಂಜ ಶಾಲೆಯನ್ನು ಬೆಳಗಿಸಬೇಕು ಎಂಬ ಬಳಂಜ ಶಾಲಾ ಹಳೆವಿದ್ಯಾರ್ಥಿಗಳ, ಊರವರ ಕಾಳಜಿ ಸಮಾಜಕ್ಕೆ ಮಾದರಿಯಾಗಿದೆ. ಶೈಕ್ಷಣಿಕ ವಿಷಯಗಳಲ್ಲಿ ರಾಜಕೀಯ ಬರಬಾರದು ಅದಕ್ಕೆ ನಾನು ವಿರೋಧವಿದ್ದೇನೆ. ಸರ್ಕಾರದ ಅನುದಾನಕ್ಕೆ ಕಾಯುವುದಕ್ಕಿಂತ ಹಳೆವಿದ್ಯಾರ್ಥಿಗಳು, ಊರವರರು ಶಾಲೆಯ ಬೆಳವಣಿಗೆಗಳಲ್ಲಿ ಪ್ರಮುಖ ಪಾತ್ರ ವಹಿಸಿದಾಗ ಶಾಲೆ ಬೆಳಗಲು ಸಾಧ್ಯ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.ಅವರು ಭಾನುವಾರ ಸ.ಉ.ಹಿ. ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಅಮೃತ ಮಹೋತ್ಸವದ ಪ್ರಯುಕ್ತ ಅನಿಲ್ ನಾಯ್ಗ ಸ್ಮರಣಾರ್ಥವಾಗಿ ಅಶ್ವಥ್ ಹೆಗ್ಡೆ ಫೌಂಡೇಶನ್ ವತಿಯಿಂದ ವೆಟ್ರಿಫೈಡ್ ಟೈಲ್ಸ್ ಅಳವಡಿಕೆ, ಸ್ವಾಗತ ಗೋಪುರ ನವೀಕರಣ, ನೆಲಹಾಸು ಅಳವಡಿಕೆ ಕಾಮಗಾರಿಗಳ ಉದ್ಘಾಟಿಸಿ ಮಾತನಾಡಿದರು.ಶಾಲೆಯ ಹೈಸ್ಕೂಲ್ ಕಟ್ಟಡಕ್ಕೆ ಅನುದಾನ ನೀಡಲಾಗುವುದಲ್ಲದೆ ಮೊದಲನೆಯ ಹಂತವಾಗಿ 10 ಲಕ್ಷ ರು. ವೆಚ್ಚದಲ್ಲಿ ಮಕ್ಕಳ ತಂಗುದಾಣ ಮತ್ತು ಶಾಲಾ ಮುಂಭಾಗದ ಇಂಟರ್ ಲಾಕ್ ಅಳವಡಿಸಿಕೊಡಲಾಗುವುದು. ಶಾಲಾ ಹಳೆವಿದ್ಯಾರ್ಥಿ ಅಶ್ವಥ್ ಹೆಗ್ಡೆಯವರು ಸುಮಾರು 15 ಲಕ್ಷ ರು. ವೆಚ್ಚದಲ್ಲಿ ಶಾಲಾ ನವೀಕರಣ ಮಾಡಿಸಿದ್ದು, ಇವರ ಶಾಲೆಯ ಮೇಲಿನ ಪ್ರೀತಿ ಇತರರಿಗೆ ಮಾದರಿ ಎಂದರು.
ಅಶ್ವಥ್ ಹೆಗ್ಡೆ ಫೌಂಡೇಶನ್ ಅಧ್ಯಕ್ಷ ಅಶ್ವಥ್ ಹೆಗ್ಡೆ ಕುಳೆಂಜಿರೋಡಿ ಗುತ್ತು ಅಧ್ಯಕ್ಷತೆ ವಹಿಸಿ, ಶಾಲೆಯ ಅಮೃತ ಮಹೋತ್ಸವವನ್ನು ಮಾದರಿ ಕಾರ್ಯಕ್ರಮವಾಗಿ ಮಾಡೋಣ ಎಂದರು.
ಹರೀಶ್ ವೈ. ಸ್ವಾಗತಿಸಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು. ನಾದಮಣಿನಾಲ್ಕೂರು ಮತ್ತು ಅಕ್ಷತಾ ಕುಡ್ಲ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಳೆವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ನಡೆಯಿತು.