ಕನ್ನಡಪ್ರಭ ವಾರ್ತೆ ಹೊಸದುರ್ಗ
ಯಾವುದೇ ಕಂಪನಿ ಹಂತ ಹಂತವಾಗಿ ಬೆಳೆದಾಗ ಮಾತ್ರ ದೀರ್ಘಾವಧಿ ಉದ್ದೇಶ ಈಡೇರಿಸಲು ಸಾಧ್ಯ ಎಂದು ನಬಾರ್ಡ್‌ನ ಮಹಾ ಪ್ರಬಂಧಕ ಟಿ. ರಮೇಶ್ ಹೇಳಿದರು. ತಾಲೂಕಿನ ಶ್ರೀರಾಂಪುರದಲ್ಲಿರುವ ದುರ್ಗದ ಸಿರಿ ರೈತ ಉತ್ಪಾದಕ ಕಂಪನಿಗೆ ಶುಕ್ರವಾರ ಭೇಟಿ ನೀಡಿ ಕಂಪನಿಯ ನಿರ್ದೇಶಕ ಮಂಡಳಿಯ ಜೊತೆ ಮಾತನಾಡಿ, ದೇಶದಲ್ಲಿ ಶೇ 85 ರಷ್ಟು ಸಣ್ಣ, ಅತಿ ಸಣ್ಣ ರೈತರಿದ್ದು ಅವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪಿಸಿ ಅವುಗಳಿಗೆ ನಬಾರ್ಡ್ ಮೂಲಕ ಆರ್ಥಿಕ ನೆರವು ನೀಡುತ್ತಿವೆ ಎಂದರು. ರೈತರ ಅಭಿವೃದ್ದಿ ಗಾಗಿಯೇ ಸ್ಥಾಪಿಸಲಾಗಿದ್ದ ಸಹಕಾರ ಸಂಘಗಳಲ್ಲಿ ರಾಜಕೀಯ ಸೇರ್ಪಡೆಗೊಂಡಿದ್ದರಿಂದ ಇಂದು ಅದರ ಮೂಲ ಉದ್ದೇಶ ಮರೆಯಾಗಿದೆ. ಈ ಹಿನ್ನಲೆಯಲ್ಲಿ ರೈತ ಉತ್ಪಾದಕ ಕಂಪನಿಗಳು ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ರಚನೆಯಾಗುವುದರ ಜೊತೆಗೆ ರೈತರ ಪ್ರಗತಿಗೆ ಸಹಕರಿಸಬೇಕು ಎಂದರಲ್ಲದೆ, ರೈತರು ತಮ್ಮದೇ ಅದ ಕಂಪನಿಗಳನ್ನು ಕಟ್ಟಿಕೊಂಡು ತಮ್ಮದೇ ಅದ ಬ್ರಾಂಡ್ ಮಾಡಿ ಮಾರಾಟ ಮಾಡುವುದರಿಂದ ಉತ್ತಮ ಆದಾಯ ಪಡೆಯಬಹುದಾಗಿದೆ ಎಂದರು.ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಈಶ ಮಾತನಾಡಿ ತಾಲೂಕಿನಲ್ಲಿ ನಾಲ್ಕು ಸಾವಿರ ಹೆಕ್ಟರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿತ್ತು. ಆದರೆ ಇಂದು ಹದಿನಾಲ್ಕು ಸಾವಿರ ಹೆಕ್ಟರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಸರ್ಕಾರದ ವಿವಿಧ ಯೋಜನೆಗಳನ್ನು ರೈತ ಉತ್ಪಾದಕ ಕಂಪನಿಗಳ ಮೂಲಕ ರೈತರಿಗೆ ತಲುಪಿಸಲಾಗುತ್ತಿದೆ ಎಂದರು. ಕಂಪನಿ ಸಿಇಒ ಗಿರೀಶ್ ಮಾತನಾಡಿ ನಬಾರ್ಡ್ ಮೂಲಕ ಬೆಂಗಳೂರಿನಲ್ಲಿ ಮಾರಾಟ ಮಳಿಗೆ ತೆರೆಯಲು ಅನುಕೂಲ ಮಾಡಿಕೊಡಬೇಕು ಹಾಗೆಯೇ ಕಂಪನಿಯ ಸರಕುಗಳನ್ನು ಸಾಗಣೆ ಮಾಡಲು ಸಾರಿಗೆ ವ್ಯವಸ್ಥೆ ಗೆ ಆರ್ಥಿಕ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು. ಈ ವೇಳೆ ನಬಾರ್ಡ್ ನ ಜಿಲ್ಲಾ ವ್ಯವಸ್ಥಾಪಕಿ ಕವಿತ, ಉತ್ಪಾಧಕರ ಕಂಪನಿ ಅಧ್ಯಕ್ಷೆ ಶ್ವೇತಾ, ಕಂಪನಿಯ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.