ನೀರಿನ ವಿಚಾರದಲ್ಲಿ ರಾಜಕೀಯ ಮಾಡಿದ್ರೆ ಪರಿಣಾಮ ಸರಿ ಇರಲ್ಲ

KannadaprabhaNewsNetwork |  
Published : Jun 25, 2025, 12:33 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ನೀರಾವರಿ ಅನುಷ್ಟಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕುಡಿವ ನೀರಿನ ವಿಚಾರದಲ್ಲಿ ರಾಜಕೀಯ ಮಾಡಿದ್ರೆ ಭವಿಷ್ಯದಲ್ಲಿ ಪರಿಣಾಮಗಳು ಸರಿ ಇರುವುದಿಲ್ಲವೆಂದು ಜಿಲ್ಲಾ ನೀರಾವರಿ ಅನುಷ್ಟಾನ ಹೋರಾಟ ಸಮಿತಿ ದಾವಣಗೆರೆ ಜಿಲ್ಲೆಯ ರೈತ ನಾಯಕರು, ಜನ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದೆ.

ಇಲ್ಲಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಚಿತ್ರದುರ್ಗದ ನೀರಾವರಿ ಹಾಗೂ ಕುಡಿವ ನೀರಿನ ಯೋಜನೆ ಜಾರಿ ವಿಚಾರದಲ್ಲಿ ನೆರೆಯ ದಾವಣಗರೆ ಜಿಲ್ಲೆ ಸದಾ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಿರುವುದು ತರವಲ್ಲದ ನಡವಳಿಕೆಯಾಗಿದೆ ಎಂದರು.

ಹೊಸದುರ್ಗ,ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ, ಅಜ್ಜಂಪುರ ಪ್ರದೇಶದ ಸುಮಾರು 518 ಗ್ರಾಮಗಳಿಗೆ ಕುಡಿವ ನೀರು ಪೂರೈಕೆ ಮಾಡಲು 830 ಕೋಟಿ ರು ವೆಚ್ಚದ ಯೋಜನೆ ರೂಪಿಸಲಾಗಿದೆ. ಯೋಜನೆಯಡಿ ಹೊಸದುರ್ಗ ಪಟ್ಟಣ ಸೇರಿದಂತೆ ತಾಲೂಕಿನ 346 ಹಳ್ಳಿಗಳಿಗೆ ಕುಡಿವ ನೀರು ಪೂರೈಕೆ ಮಾಡುವ ಉದ್ದೇಶ ಹೊಂದಲಾಗಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ನೀರು ಪೂರೈಕೆಗೆ ಟ್ರಯಲ್ ಮಾಡುವಾಗ ದಾವಣಗೆರೆ ಜಿಲ್ಲೆ ರೈತರು ಆಕ್ಷೇಪ ವ್ಯಕ್ತಪಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ನಾವುಗಳು ಕುಡಿವ ನೀರು ಯೋಜನೆಗೆ ಅಡ್ಡಿ ಪಡಿಸುತ್ತಿಲ್ಲ, ಆದರೆ ಭದ್ರಾ ಕಾಲುವೆ ಸೀಳಿ ನೀರು ಎತ್ತುವುದು ಬೇಡ, ಬದಲಿ ಮೂಲ ಹುಡುಕಿಕೊಳ್ಳಿ ಎಂದು ದಾವಣಗೆರೆ ರೈತರು ಹೋರಾಟ ಆರಂಭಿಸಿದ್ದಾರೆ. ಬಲದಂಡೆ ಕಾಲುವೆಯಿಂದ ನೀರು ಎತ್ತಿದರೆ ಕಡೇ ಗ್ರಾಮಗಳಿಗೆ ನೀರು ಹೋಗುವುದಿಲ್ಲ. ಅಚ್ಚುಕಟ್ಟುದಾರ ರೈತರು ತೊಂದರೆ ಅನುಭವಿಸುತ್ತಾರೆ ಎಂಬ ಅವೈಜ್ಞಾನಿಕ ಸಂಗತಿಗಳ ಮುಂದಿಟ್ಟುಕೊಂಡು ಬೀದಿಗಿಳಿದಿದ್ದಾರೆ. ಕುಡಿವ ನೀರು ರಾಷ್ಟ್ರೀಯ ಹಕ್ಕು. ಯಾರೂ ಕೂಡಾ ಇದು ನಮ್ಮದೇ ಎಂದು ಪ್ರತಿಪಾದನೆ ಮಾಡುವಂತಿಲ್ಲ. ಜನ ಸಮುದಾಯಗಳಿಗೆ ನೀರು ಪೂರೈಕೆ ಮಾಡು ಜವಾಬ್ದಾರಿ ಸರ್ಕಾರದ್ದಾಗಿದ್ದು ಜಲ ಮೂಲಗಳ ಆಧರಿಸಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರುತ್ತಿದೆ. ಹೊಸದುರ್ಗ ಪಟ್ಟ ಣ ಹಾಗೂ ತಾಲೂಕಿಗೆ ಕುಡಿವ ನೀರು ಆ ಭಾಗದ ಜನರ ಜೀವನ್ಮರಣದ ಪ್ರಶ್ನೆಯಾಗಿದ್ದು ಸರ್ಕಾರದ ಇಚ್ಚಾ ಶಕ್ತಿಫಲವಾಗಿ ಜಾರಿಯಾಗುತ್ತಿದೆ.

ಬಹುಗ್ರಾಮ ಕುಡಿವ ನೀರಿಗಾಗಿ ಭದ್ರಾ ಜಲಾಶಯದಿಂದ ನಿತ್ಯ 30 ಕ್ಯುಸೆಕ್‌ ನೀರು ಮೇಲೆತ್ತಲಾಗುತ್ತಿದ್ದು ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗೆಳ ತಾತ್ಕಾಲಿಕ ಬೇಡಿಕೆ ಇದಾಗಿದೆ. ಭದ್ರಾ ಕಾಲುವೆ ಸೀಳಿ ಮೇಲೆತ್ತಬೇಡಿ ಎಂಬು ಕೂಗು ಎಬ್ಬಿಸಿರುವ ದಾವಣಗೆರೆ ಜಿಲ್ಲೆಯ ರೈತರು ಅನಗತ್ಯ ಗೊಂದಲ ಸೃಷ್ಡಿಸುತ್ತಿದ್ದಾರೆ. ಭದ್ರಾ ಕಾಲುವೆಯಿಂದ ಇದೇ ಮೊದಲ ಬಾರಿಗೆ ಕುಡಿವ ನೀರಿನ ಯೋಜನೆಗಳ ರೂಪಿಸಿಲ್ಲ.

ಭದ್ರಾವತಿ ತಾಲೂಕಿನ ಕೂಡ್ಲಿಗಿರಿ ಹಾಗೂ ಇತರೆ 18 ಗ್ರಾಮ, ಚೆನ್ನಗಿರಿ ತಾಲೂಕಿನ 4 ಬಹುಗ್ರಾಮ ಕುಡಿವ ನೀರಿನ ಯೋಜನೆ ಹಾಗೂ ದಾವಣಗೆರೆ ತಾಲೂಕಿನ 9 ಬಹುಗ್ರಾಮ ಕುಡಿವ ನೀರು ಯೋಜನೆಗೆ ಭದ್ರಾ ಕಾಲುವೆಯಿಂದ ನೀರು ಪಡೆಯಲಾಗುತ್ತಿದೆ. ತಮ್ಮ ಜಿಲ್ಲೆಯ ಕುಡಿವ ನೀರು ಯೋಜನೆಗಳಿಗೆ ಭದ್ರಾ ಕಾಲುವೆಯಿಂದ ನೀರು ಪೂರೈಕೆಗೆ ಸಮ್ಮತಿಸುವ ದಾವಣಗೆರೆ ರೈತರು, ಚಿತ್ರದುರ್ಗದ ಪ್ರಶ್ನೆ ಬಂದಾಗ ಮಾತ್ರ ವಿರೋಧಿಸುತ್ತಾರೆ. ಒಂದು ಅರೆ ನೀರಾವರಿ ಬೆಳೆಗೆ ಮಾತ್ರ ಭದ್ರಾ ಜಲಾಶಯದಿಂದ ನೀರು ಪೂರೈಕೆ ಎಂಬ ನಿಬಂಧನೆ ಇದ್ದರೂ ಭತ್ತ ಬೆಳೆಯಲು ಎರಡು ಬೆಳೆಗಳಿಗೆ ನೀರು ಪಡೆಯುತ್ತಿದ್ದಾರೆ. ಟೇಲ್ ಎಂಡ್ ಗೆ ನೀರು ಪೂರೈಕೆಯಾಗದಿದ್ದರೆ ಅದಕ್ಕೆ ಚಿತ್ರದುರ್ಗ ಜಿಲ್ಲೆ ಅಥವ ಇಲ್ಲಿ ಅನುಷ್ಟಾನಗೊಳಿಸಲಾಗುತ್ತಿರುವ ಕುಡಿವ ನೀರು ಯೋಜನೆಗಳು ಕಾರಣವಲ್ಲ. ದಾವಣಗೆರೆ ಜಿಲ್ಲೆಯ ರೈತರು ಹಾಗೂ ಅಲ್ಲಿನ ರಾಜಕಾರಣಿಗಳು ವಾಸ್ತವಾಂಶ ಅರಿತು ನಡೆದುಕೊಳ್ಳಲಿ. ಪದೇ ಪದೆ ಬಯಲು ಸೀಮೆ ರೈತಾಪಿ ಸಮುದಾಯ, ಜನರ ಕೆಣಕುವುದು ಬೇಡ. ಭದ್ರಾ ಜಲಾಶಯದಲ್ಲಿನ ನೀರಿನ ಮೇಲೆ ನೆರೆ ಜಿಲ್ಲೆಯ ಜನರ ಎಲ್ಲರ ಹಕ್ಕು ಇದೆ ಎಂಬುದ ಮನವರಿಕೆ ಮಾಡಿಕೊಳ್ಲಲಿ ಎಂದು ಲಿಂಗಾರೆಡ್ಡಿ ಎಚ್ಚರಿಸಿದರು. ದಾವಣಗೆರೆ ರೈತರು 28 ರಂದು ಬಂದ್ ಕರೆ ಕೊಟ್ಟಿದ್ದಾರೆ. ಪ್ರತಿಯಾಗಿ ಚಿತ್ರದುರ್ಗದ ರೈತರು ಹೋರಾಟ ರೂಪಿಸುವ ಸಂಬಂಧ ಬುಧವಾರ ಹೊಸದುರ್ಗದಲ್ಲಿ ರೈತರು, ಹೋರಾಟಗಾರರ ಸಭೆ ಕರೆಲಾಗಿದೆ. ಸಭೆಯಲ್ಲಿ ಮುಂದಿನ ಹೋರಾಟ ಕುರಿತು ನಿರ್ಣಯಕೈಗೊಳ್ಳಲಾಗುವುದೆಂದು ಹೇಳಿದರು. ಸರ್ವೋದಯ ಕರ್ನಾಟಕದ ಮುಖಂಡ ಜೆ.ಯಾದವರೆಡ್ಡಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷರುಗಳಾದ ಕೆ.ಪಿ.ಭೂತಯ್ಯ, ಕೆ.ಸಿ.ಹೊರಕೇರಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಬಸ್ತಿಹಳ್ಳಿ ಸುರೇಶ್ ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ