ಕನ್ನಡಪ್ರಭ ವಾರ್ತೆ ಹಾಸನ
ನಗರದ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಶುಕ್ರವಾರ ಭಾಗವಹಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಂಗಳೂರಲ್ಲಿ ಅಥವಾ ಬೇರೆ ಎಲ್ಲೇ ಆಗಲೀ ಕೋಮುದ್ವೇಷ ಬಿತ್ತಿ, ಅಶಾಂತಿ ನಿರ್ಮಾಣ ಮಾಡುವುದು ಅಕ್ಷಮ್ಯ ಅಪರಾಧ, ಇದು ಯಾರಿಗೂ ಶೋಭೆ ತರುವುದಿಲ್ಲ. ಈ ರೀತಿಯ ಆಡಳಿತದಿಂದ ಯಾರೇ ಬಲಿಯಾದರೂ ಅಮೂಲ್ಯ ಜೀವಕ್ಕೆ ಬೆಲೆ ಕಟ್ಟಲು ಆಗಲ್ಲ. ಹೀಗಾಗಿ ಆಡಳಿತ ನಡೆಸುವ ಸರ್ಕಾರ ಗಂಭೀರವಾಗಿ ನಡೆದುಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಹತೋಟಿಗೆ ತರಬೇಕು ಎಂದರೆ ಎಲ್ಲರೂ ಜವಾಬ್ದಾರಿಯಿಂದ ಮಾತನಾಡಬೇಕು ಎಂದರು.
ಕರಾವಳಿ ಭಾಗದಲ್ಲಿ ಕೋಮುದ್ವೇಷ ಹೆಚ್ಚಾಗಲು ಬಿಜೆಪಿ ಕಾರಣ ಎಂಬ ಸಚಿವ ದಿನೇಶ್ ಗುಂಡೂರಾವ್ ಅವರ ಆರೋಪಕ್ಕೆ, ಸಾವಿನ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಕುಟುಕಿದರು. ಕಾನೂನನ್ನು ಬಿಗಿ ಪಡಿಸಿ ಯಾರು ತಪ್ಪು ಮಾಡುತ್ತಾರೋ ಅವರನ್ನು ಕಠಿಣವಾಗಿ ದಂಡಿಸಬೇಕು. ಓಲೈಕೆ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಎಲ್ಲ ಧರ್ಮದವರ ಪ್ರಾಣಕ್ಕೂ ಬೆಲೆ ಇದೆ ಎಂಬುದನ್ನು ಮನಗಾಣಬೇಕು ಎಂದರು.ಕಾನೂನು ಮೀರಿದರೆ ಹೀಗೆ:
ಹಾಸನ ಜಿಲ್ಲೆಯಲ್ಲಿ ಮುಂದಿನ ಜಿಪಂ-ತಾಪಂ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ನಡುವಿನ ಮೈತ್ರಿ ಮುಂದುವರಿಕೆ ಕುರಿತ ಪ್ರಶ್ನೆಗೆ ಇದನ್ನು ರಾಜ್ಯಮಟ್ಟದ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ಉತ್ತರಿಸಿದರು. ಇದೇ ವೇಳೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ ಎಂಬ ಡಿಸಿಎಂ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿದ್ದಾರೆ. ಎಲ್ಲ ಪಕ್ಷಗಳ ನಾಯಕರು ಹೀಗೆ ಹೇಳೋದು ಸಹಜ, ನಾವೂ ಹೇಳುತ್ತೇವೆ, ಜನತಾದಳದವರೂ ಹೇಳುತ್ತಾರೆ, ಆದರೆ ಚುನಾವಣೆ ಸಂದರ್ಭದಲ್ಲಿ ಜನರ ವಿಶ್ವಾಸ ಯಾರಿಗೆ ಇರುತ್ತೋ ಅವರು ಗೆಲ್ಲುತ್ತಾರೆ ಎಂದರು. ಆದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಏಳೂ ಸ್ಥಾನ ಗೆಲ್ಲಲಿದೆ. ಹಾಗೆಯೇ ರಾಜ್ಯದಲ್ಲಿ ೧೫೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಪ್ರೀತಂ ವಿಶ್ವಾಸ ವ್ಯಕ್ತಪಡಿಸಿದರು. ೧೩೬ ಸ್ಥಾನ ಗೆದ್ದಾಗಲೇ ಹಾಸನದಲ್ಲಿ ಕಾಂಗ್ರೆಸ್ ಗೆದ್ದಿದ್ದು ಒಂದು ಸ್ಥಾನ ಮಾತ್ರ. ಇನ್ನ ಮುಂದಿನ ದಿನಗಳಲ್ಲಿ ೩೬ ಗೆಲ್ಲೋ ಸಂದರ್ಭದಲ್ಲಿ ಎಷ್ಟು ಗೆಲ್ಲಬಹುದು ನೀವೇ ಯೋಚಿಸಿ ಎಂದು ವ್ಯಂಗ್ಯವಾಗಿ ಮಾತನಾಡಿದರು. ಇದೇ ವೇಳೆ ಬಿಜೆಪಿ ಮುಖಂಡರಾದ ಪ್ರಸನ್ನಕುಮಾರ್, ಹರ್ಷಿತ್, ಯೋಗೇಶ್, ಮಂಜು, ಬಿ. ಎಚ್. ನಾರಾಯಣಗೌಡ, ಪ್ರೀತಿ ವರ್ಧನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
* ಬಾಕ್ಸ್: ಅವರ ಉಚ್ಚಾಟನೆ ಹಿಂದೆಯೇ ಆಗಬೇಕಿತ್ತು: ಪ್ರೀತಂ ಗೌಡ ಬಿಜೆಪಿಯಿಂದ ಮಾಜಿ ಸಚಿವರು, ಹಾಲಿ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರ ಉಚ್ಚಾಟನೆ ಹಿಂದೆಯೇ ಆಗಬೇಕಿತ್ತು. ಇದು ಕಾರ್ಯಕರ್ತರ ಆಶಯವೂ ಆಗಿತ್ತು. ಅವರ ನಡವಳಿಕೆ ಅದನ್ನು ತೋರಿಸಿಕೊಡುತ್ತಿತ್ತು. ಅಂತಿಮವಾಗಿ ಪಕ್ಷ ತೀರ್ಮಾನ ಕೈಗೊಂಡಿದೆ. ಯಾರೇ ಆಗಲಿ, ಪಕ್ಷದ ವಿರೋಧಿ ಚಟುವಟಿಕೆ ನಡೆಸಿದರೆ ಇದೇ ಶಿಕ್ಷೆಯಾಗುತ್ತದೆ ಎಂಬುದನ್ನು ಕೇಂದ್ರ ನಾಯಕರು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.