ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಸಹಕಾರ ಸಂಘಗಳಲ್ಲಿ ವಾದ- ಪ್ರತಿವಾದ, ಆರೋಪ- ಪ್ರತ್ಯಾರೋಪ ಹೆಚ್ಚಾಗಿ, ಯುವಕರು ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಸಂಘಗಳ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ, ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸುವುದು ಬೇಡ ಎಂದು ಬರಗೇನಹಳ್ಳಿ ಸಂಘದ ಅಧಕ್ಷ ಬಿ.ಎನ್. ಪರಮೇಶ್ ತಿಳಿಸಿದರು.ಸೋಂಪುರ ಹೋಬಳಿಯ ಬರಗೇನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2024- 25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಂಘವು ತಾಲೂಕಿನಲ್ಲೇ ಸುಸಜ್ಜಿತ ಕಟ್ಟಡ ಹೊಂದಿದ್ದು, ಶಾಸಕರು 10 ಲಕ್ಷ ರು. ಅನುದಾನ ನೀಡಿದ್ದಾರೆ. ಸಂಸದವರು ಅನುದಾನ ನೀಡಲಿದ್ದು, ಸಂಘಕ್ಕೆ ಆದಾಯದ ಮೂಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚಿಕ್ಕದಾದ ಸಮುದಾಯ ಭವನ ನಿರ್ಮಿಸಲು ಯೋಜನೆ ರೂಪಿಸಿದ್ದೇವೆ. ಸದಸ್ಯರು ಗಮನಕ್ಕೆ ತಂದಿರುವ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದರು.ಸಿಇಒ ರೂಪಾ ಮಾತನಾಡಿ, ನಮ್ಮ ಸಂಘದಲ್ಲಿ 2931 ಸದಸ್ಯರಿದ್ದು, 12 ಕೋಟಿ ರು. ವ್ಯವಹಾರ ನಡೆಸಿದೆ, 5.56 ಲಕ್ಷ ರು. ಲಾಭಾಂಶ ಪಡೆದಿದ್ದು, 3.14 ಕೋಟಿ ರು. ಬೆಳೆಸಾಲ ನೀಡಿದ್ದೇವೆ, ಸ್ವಂತ ಬಂಡವಾಳದಿಂದ 6.6 ಕೋಟಿ ರು. ಸಾಲ ನೀಡಿದ್ದೇವೆ. ಮುಂದಿನ ವರ್ಷದಿಂದ ಯೂರಿಯಾವನ್ನು ಮಾರಾಟ ಮಾಡಲು ತೀರ್ಮಾನಿಸಿದ್ದೇವೆ ಎಂದರು.
ಪಡಿತರ ನೀಡಿಕೆಯಲ್ಲಿ ಸಮಸ್ಯೆ, ಕುಡಿಯುವ ನೀರಿನ ಬೆಲೆ ಇಳಿಕೆ, ಇತ್ಯಾದಿ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.ಸಮಸ್ಯೆಗಳ ಸುರಿಮಳೆ:
ಸಭೆ ಆರಂಭವಾಗುತ್ತಿದ್ದಂತೆ, ಷೇರುದಾರರಾದ ಮೌಲಾ ಹಾಗೂ ಸಂತೋಷ್ ಮಾತನಾಡಿ, ಸಂಘದಿಂದ ಹೆಚ್ಚು ಅನುಕೂಲ ನೀಡಿ, ಆದರೆ ಪಡಿತರ ವಿತರಣೆಯಲ್ಲಿ ಅವ್ಯವಹಾರವಾಗುತ್ತಿದ್ದು ಸಾರ್ವಜನಿಕರಿಂದ 10 ರುಪಾಯಿ ಪಡೆಯುವ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಿಲ್ಲ ಎಂದು ಸಿಇಒ ರೂಪ ಅವರನ್ನು ತರಾಟೆಗೆ ತೆಗೆದುಕೊಂಡರು.ನಂತರ ನಿತೀನ್ ಮಾತನಾಡಿ, ಕುಡಿಯುವ ನೀರಿನ ಘಟಕದಲ್ಲಿ ನೀರಿನ ವೆಚ್ಚವನ್ನು 4 ರುಪಾಯಿಗೆ ಇಳಿಸಬೇಕು ಎಂದು ಕೇಳಿದಾಗ ಭಾರೀ ಗದ್ದಲ ಉಂಟಾಯಿತು. ಮಾತಿಗೆ ಮಾತು ಬೆಳೆದು, ಇಡೀ ಸಭೆ ಗೊಂದಲದ ಗೂಡಾಯಿತು.
ನಂತರ ಗ್ರಾಮಸ್ಥ ಚಿಕ್ಕರಾಜು ಮಾತನಾಡಿ, ಚುನಾವಣೆ ವೆಚ್ಚದ ಬಗ್ಗೆ ಮಾಹಿತಿ ನೀಡಬೇಕು. ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಏಕ ಕಾಲಕ್ಕೆ ನಡೆಯಬೇಕು ಎಂದು ಆಗ್ರಹಿಸಿದರು. ಒಂದು ಹಂತದಲ್ಲಿ ಕೈ- ಕೈ ಮಿಲಾಯಿಸುವ ಹಂತಕ್ಕೆ ಸಭೆ ತಲುಪಿದಾಗ, ಮಾಜಿ ಅಧ್ಯಕ್ಷ ಮಾಚನಹಳ್ಳಿ ಜಯಣ್ಣ, ಪುಟ್ಟಗಂಗಯ್ಯ ಸೇರಿ ಸಭೆಯನ್ನು ಶಾಂತಗೊಳಿಸಿದರು.ಸಂಘದ ಉಪಾಧ್ಯಕ್ಷೆ ರತ್ನಮ್ಮ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಮಾಚನಹಳ್ಳಿ ಪಟ್ಟಾಭಿರಾಮಯ್ಯ(ಜಯಣ್ಣ), ಮಾಜಿ ಅಧ್ಯಕ್ಷರಾದ ಶಿವರಾಮಯ್ಯ, ಪುಟ್ಟಗಂಗಯ್ಯ, ನಿರ್ದೇಶಕರಾದ ಗಂಗರಾಜಯ್ಯ, ತಿಮ್ಮಪ್ಪ, ನಾರಾಯಣಸ್ವಾಮಿ, ಶಿವಣ್ಣ, ರವಿಕುಮಾರ್, ಭದ್ರಮ್ಮ, ಶಿವಮ್ಮ, ಸಿಇಒ ರೂಪಾ.ಕೆ.ಆರ್., ನಗದು ಲೆಕ್ಕಿಗ ಶ್ರೀನಿವಾಸಮೂರ್ತಿ, ಕಂಪ್ಯೂಟರ್ ಆಪರೇಟರ್ ರಮೇಶ್, ಸಿಬ್ಬಂದಿ , ಷೇರುದಾರರು, ಗ್ರಾಮಸ್ಥರು ಹಾಜರಿದ್ದರು.