ಕನ್ನಡಪ್ರಭ ವಾರ್ತೆ ಮಂಡ್ಯ
ನಮ್ಮ ನೀರು ನಮ್ಮ ಹಕ್ಕು ಹೆಸರಿನಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್ಸಿಗರು ಪೊಳ್ಳು ಹೋರಾಟ ನಡೆಸಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಟೀಕಿಸಿದರು.ತಾಲೂಕಿನ ಹಳೇಬೂದನೂರು, ಹೊಸಬೂದನೂರು, ಶ್ರೀನಿವಾಸಪುರ, ಚಿಕ್ಕಮಂಡ್ಯ, ಸಾತನೂರು ಗ್ರಾಮಗಳಲ್ಲಿ ರೋಡ್ ಶೋ ನಡೆಸುವ ಮೂಲಕ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಅವರ ಪರ ಮತ ಯಾಚಿಸಿದರು.
ನಾಡಿನ ಜನರ ಜೀವ ನದಿ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ಕಟ್ಟುತ್ತೇವೆ ಎಂದು ಕಳೆದ ವಿಧಾನ ಸಭಾ ಚುನಾವಣೆ ಸಮಯದಲ್ಲಿ ಘೋಷವಾಕ್ಯ ಮೊಳಗಿಸಿ ಪಾದಯಾತ್ರೆ ನಡೆಸಿದರು. ಅಧಿಕಾರಕ್ಕೆ ಬಂದ ಮೇಲೆ ಮೇಕೆದಾಟು ಅಣೆಕಟ್ಟು ಯೋಜನೆಯನ್ನೇ ಮರೆತಿದ್ದಾರೆ. ನಾಡಿನ ಜನರ ಹಿತ ಕಾಪಾಡುವ ಮನಸ್ಸಿದ್ದರೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ‘ಇಂಡಿಯಾ’ ಮೈತ್ರಿಕೂಟದಲ್ಲಿರುವ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಜೊತೆ ಚರ್ಚಿಸಿ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಮೂಲಕ ತಮ್ಮ ಬದ್ಧತೆ ಪ್ರದರ್ಶಿಸಬೇಕು. ನೀರಿನ ವಿಚಾರದಲ್ಲಿ ಪೊಳ್ಳು ಹೋರಾಟ ಮಾಡುವುದಲ್ಲ ಎಂದು ಛೇಡಿಸಿದರು.ಗ್ರಾಮ ವಾಸ್ತವ್ಯದ ಮೂಲಕ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದ, ರೈತರ ಸಾಲ ಮನ್ನಾ ಮಾಡಿ ರೈತರಿಗೆ ಆರ್ಥಿಕ ಭದ್ರತೆ ಒದಗಿಸಿದ ದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಜಿಲ್ಲೆಯ ಜನರು ಕೈ ಹಿಡಿಯುವಂತೆ ಮನವಿ ಮಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಎರಡು ಬಾರಿ ಲೋಕಸಭೆಯಲ್ಲಿ ಸೋಲಿಸಿದ್ದು ಇದೇ ಕಾಂಗ್ರೆಸ್ ಪಕ್ಷ. ಅವರು ಪರಿನಿರ್ವಾಣ ಹೊಂದಿದ ಸಂದರ್ಭದಲ್ಲಿ ಅವರ ಮೃತ ದೇಹವನ್ನು ಹೂಳಲು ಜಾಗವನ್ನೂ ನೀಡಲಿಲ್ಲ. ಕನಿಷ್ಠ ಪಕ್ಷ ಅವರ ಸ್ಮಾರಕ ನಿರ್ಮಾಣ ಮಾಡಲು ಜಾಗ ನೀಡದೆ ಅವಮಾನಿಸಿದ್ದಾರೆ. ಕಾಂಗ್ರೆಸ್ ದಲಿತ ವಿರೋಧಿ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನ ಮಂತ್ರಿ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಅವರಿಗೆ ಕಲ್ಬುರ್ಗಿಯಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿಲ್ಲ. ಇನ್ನೂ ಪ್ರಧಾನಮಂತ್ರಿ ಹೇಗೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಉಪಾಧ್ಯಕ್ಷ ಎಂ.ಎಸ್. ರಘುನಂದನ್, ತಾಲ್ಲೂಕು ಜಾ.ದಳ ಅಧ್ಯಕ್ಷ ಬೂದನೂರು ಸ್ವಾಮಿ, ಬಿಜೆಪಿ ಮುಖಂಡ ಅಶೋಕ್ ಜಯರಾಮ್, ಮುಖಂಡರಾದ ಅಮರಾವತಿ ಚಂದ್ರಶೇಖರ್, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸಿ.ಅಶ್ವತ್ಥ್ ಇತರರಿದ್ದರು.