ಹೂವಿನಹಡಗಲಿಯಲ್ಲಿ ಬೆಳೆ ಉಳಿಸಿಕೊಳ್ಳಲು ಕೆರೆಯ ನೀರಿಗೆ ಕನ್ನ

KannadaprabhaNewsNetwork |  
Published : Jul 14, 2026, 02:30 AM IST
ಹೂವಿನಹಡಗಲಿ ತಾಲೂಕಿನ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೈಪ್‌ ಲೈನ್‌ ಎರ್‌ವಾಲ್‌ಗಳಿಗೆ ರೈತರು ಪೈಪ್‌ ಹಾಕಿ ನೀರು ಕನ್ನ ಹೊಡೆಯುತ್ತಿರುವುದು.  | Kannada Prabha

ಸಾರಾಂಶ

ಕೆರೆಯ ಪೈಪ್‌ ಲೈನಿನ ಏರ್‌ವಾಲ್‌ಗಳಿಗೆ ಕೆಲವು ಅಕ್ರಮವಾಗಿ ಪೈಪ್‌ ಹಾಕಿ ಕೆರೆಯ ನೀರಿಗೆ ಕನ್ನ ಹಾಕುತ್ತಿದ್ದಾರೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಬಿತ್ತಿದ ಬೆಳೆ ಉಳಿಸಿಕೊಳ್ಳಲು ಹೂವಿನಹಡಗಲಿ ತಾಲೂಕಿನ ಕೆಲ ರೈತರು ಕೆರೆಯ ನೀರಿಗೆ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ!

ತಾಲೂಕಿನ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಕೆರೆಗಳಿಗೆ ನೀರು ಹರಿಯುತ್ತಿದ್ದು, ಕೆರೆಯ ಪೈಪ್‌ ಲೈನಿನ ಏರ್‌ವಾಲ್‌ಗಳಿಗೆ ಕೆಲವು ಅಕ್ರಮವಾಗಿ ಪೈಪ್‌ ಹಾಕಿ ಕೆರೆಯ ನೀರಿಗೆ ಕನ್ನ ಹಾಕುತ್ತಿದ್ದಾರೆ. ಇದರಿಂದ ಕೊನೆ ಭಾಗದ ಕೆರೆಗಳಿಗೆ ನೀರೇ ಹರಿಯುತ್ತಿಲ್ಲ.

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರಿನ ಮಾಗಳ ಬಳಿ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಜಾಕ್ವೆಲ್‌ ನಿರ್ಮಿಸಲಾಗಿದೆ. ಇಲ್ಲಿಂದ 10 ಕೆರೆಗಳಿಗೆ ಪೈಪ್‌ಲೈನ್‌ ಮೂಲಕ ನೀರನ್ನು ಹರಿಸಲಾಗುತ್ತಿದೆ. ಪೈಪ್‌ಲೈನ್‌ ರೈತರ ಜಮೀನುಗಳಲ್ಲಿ ಹಾದು ಹೋಗಿದ್ದು, ಇದಕ್ಕೆ ಏರ್‌ವಾಲ್‌ ಅಳವಡಿಸಲಾಗಿದೆ. ಆದರೆ ಆ ಏರ್‌ವಾಲ್‌ಗಳನ್ನೇ ಕಿತ್ತು ರೈತರು ಪೈಪ್‌ ಹಾಕಿ ತಮ್ಮ ಬೆಳೆಗಳಿಗೆ ನೀರು ಹರಿಸುತ್ತಿದ್ದಾರೆ.

10 ಕೆರೆಗಳು: ತಾಲೂಕಿನ 10 ಕೆರೆಗಳು ಸುಮಾರು 687.52 ಮಿಲಿಯನ್‌ ಕ್ಯೂಬಿಕ್‌ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ. ಅರಳಿಹಳ್ಳಿ ಕೆರೆ-106.36, ಹ್ಯಾರಡ ಮಲಿಯಮ್ಮನ ಕೆರೆ-62, ದಾಸನಹಳ್ಳಿ ಕೆರೆ-39.61, ಹಿರೇಹಡಗಲಿ ಕೆರೆ-34.99, ಹಗರನೂರು ಕೆರೆ-120.67, ಹಿರೇಮಲ್ಲನಕೆರೆ ಕೆರೆ-35, ದೇವಗೊಂಡನಹಳ್ಳಿ ಕೆರೆ-64.07, ಮುದೇನೂರು ಕೆರೆ-70, ತಳಕಲ್ಲು ಕೆರೆ-38.12, ಬನ್ನಿಕಲ್ಲು ಕೆರೆ 116.07 (ಮಿಲಿಯನ್‌ ಕ್ಯೂಬಿಕ್‌ ಅಡಿಗಳಲ್ಲಿ) ಸೇರಿದಂತೆ ಒಟ್ಟು 687.52 ಮಿಲಿಯನ್‌ ಕ್ಯೂಬಿಕ್‌ ಅಡಿಗಳ ನೀರು ಸಂಗ್ರಹ ಸಾಮರ್ಥ್ಯವಿದೆ.

ಮಲೆನಾಡು ಪ್ರದೇಶದಲ್ಲಿ ಮುಂಗಾರು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಸಿಂಗಟಾಲೂರು ಬ್ಯಾರೇಜ್‌ಗೂ ಒಳಹರಿವು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಬ್ಯಾರೇಜ್‌ನಲ್ಲಿ 3.12 ಟಿಎಂಸಿ ನೀರು ಸಂಗ್ರಹಣ ಸಾಮರ್ಥ್ಯವಿದೆ. ಆದರೆ ಈಗ ಸಂಪೂರ್ಣ ಭರ್ತಿ ಮಾಡಲು ಕೆಲ ಗ್ರಾಮಗಳ ಮುಳುಗಡೆ ವ್ಯಾಪ್ತಿಗೆ ಬರುತ್ತಿದ್ದು, ಅವರಿಗೆ ಪುನರ್‌ ವಸತಿ ಮತ್ತು ಪುನರ್‌ ನಿರ್ಮಾಣ ಇಲಾಖೆ ಸಮರ್ಪಕವಾಗಿ ಮೂಲಭೂತ ಸೌಲಭ್ಯ ಕಲ್ಪಿಸದ ಕಾರಣ ಪೂರ್ಣ ಪ್ರಮಾಣದ ನೀರು ನಿಲ್ಲಿಸಲು ಆಗುತ್ತಿಲ್ಲ. ಸದ್ಯದ ಮಟ್ಟಿಗೆ 507.80 ಮೀಟರ್‌ ನೀರು ನಿಲುಗಡೆಯಾಗಿದೆ. ಅಂದರೆ 2.305 ಟಿಎಂಸಿ ನೀರು ಸಂಗ್ರಹವಾಗಿದೆ.

ಕೊನೆ ಕೆರೆಗಳಿಗಿಲ್ಲ ನೀರು: ತಾಲೂಕಿನ 10 ಕೆರೆಗಳಲ್ಲಿ ತಳಕಲ್ಲು ಕೆರೆ, ಹಿರೇಮಲ್ಲನಕೆರೆ ಕೆರೆ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು ಕೆರೆಗಳ ಪೈಪ್‌ಲೈನ್‌ ಮೂಲಕ ನೀರು ಹರಿಸಲಾಗುತ್ತಿದೆ. ಆದರೆ ಪೈಪ್‌ಲೈನ್‌ ಹಾದು ಹೋಗಿರುವ ಮಾರ್ಗ ಮಧ್ಯೆದಲ್ಲಿ ಏರ್‌ವಾಲ್‌ಗಳ ಮೂಲಕ ರೈತರು ನೀರನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇದರಿಂದ ನೀರಿನ ಒತ್ತಡ ಕಡಿಮೆಯಾಗುವ ಜತೆಗೆ ಅಪಾರ ಪ್ರಮಾಣದ ನೀರು ಪೋಲಾಗಿ ಕೆರೆಗಳಿಗೆ ನೀರೇ ಹರಿಯುತ್ತಿಲ್ಲ.

ದಶಕ ಕಳೆದರೂ ತಳಕಲ್ಲು, ಬನ್ನಿಕಲ್ಲು, ಹಿರೇಮಲ್ಲನಕೆರೆ ಕೆರೆಗಳು ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಲ್ಲ. ಈ ಭಾಗದ ಜನರಿಗೆ ಕೆರೆ ನೀರೇ ಆಸರೆ. ಕುಡಿವ ನೀರಿನ ತಾತ್ವಾರ ಹೆಚ್ಚಳವಾಗಲಿದೆ. ಕೆರೆ ನೀರಿಗೆ ಕನ್ನ ಹಾಕಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಕೂಗು ಕೇಳಿ ಬರುತ್ತಿದೆ.

10 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಆರಂಭಿಸಿದ್ದೇವೆ. ಆದರೆ ರೈತರು ಏರ್‌ವಾಲ್‌ಗಳನ್ನು ಕಿತ್ತು ಹಾಕಿ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ಇದರಿಂದ ತಳಕಲ್ಲು, ಬನ್ನಿಕಲ್ಲು ಮತ್ತು ಹಿರೇಮಲ್ಲನಕೆರೆ ಕೆರೆಗಳಿಗೆ ನೀರು ಹೋಗುತ್ತಿಲ್ಲ. ಈ ಕುರಿತು ಸಾಕಷ್ಟು ಬಾರಿ ರೈತರಿಗೆ ಎಚ್ಚರಿಕೆ ನೀಡಿ ಪೈಪ್‌ಗಳನ್ನು ಕಿತ್ತು ಹಾಕಿದ್ದೇವೆ ಎನ್ನುತ್ತಾರೆ ಹೂವಿನಹಡಗಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಇಇ ಎಚ್‌.ಸಿ. ರಾಘವೇಂದ್ರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿಟಲ್ ಸ್ಕಾಲರ್ಸ್ ಅಕಾಡೆಮಿ: ನೋಟ್ ಬುಕ್ ವಿತರಣೆ
ಸಾರ್ವಜನಿಕರ ಸಹಭಾಗಿತ್ವ ಇಲ್ಲದಿದ್ದರೇ ನಿರೀಕ್ಷಿತ ಗುರಿ ತಲುಪಲು ಸಾಧ್ಯವಿಲ್ಲ