ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೆಎಂಎಸ್‌ಎ ಯ ಅಧಿಕೃತ ಲಾಂಛನವನ್ನು ಅನಾವರಣಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ)ಯ ಅಧಿಕೃತ ಲಾಂಛನವನ್ನು ಗುರುವಾರದಂದು ಅನಾವರಣಗೊಳಿಸಲಾಯಿತು. ಸಂಸ್ಥೆಗಾಗಿ ವಿನ್ಯಾಸಗೊಳಿಸಲಾಗಿದ್ದ ನೂತನ ಲಾಂಛನವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಬೆಂಗಳೂರಿನ ವಿಧಾನಸೌಧದ 2ನೇ ಮಹಡಿಯಲ್ಲಿರುವ ತಮ್ಮ ಕಚೇರಿಯಲ್ಲಿ ವಿದ್ಯುಕ್ತವಾಗಿ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪೊನ್ನಣ್ಣ ಅವರು, ಕ್ರೀಡೆಗಳು ಜನರ ನಡುವೆ ಸೌಹಾರ್ದತೆಯನ್ನು ಬೆಳೆಸುತ್ತವೆ. ವಿವಿಧ ಹಿನ್ನೆಲೆಯ ಜನರು ಒಟ್ಟಾಗಿ ಆಡಲು ಮತ್ತು ಒಟ್ಟಿಗೆ ಕೆಲಸ ಮಾಡಲು ಅವಕಾಶ ನೀಡುತ್ತವೆ. ಮುಖ್ಯವಾಗಿ ಕ್ರೀಡಾಕೂಟಗಳು ಸಮುದಾಯಗಳನ್ನು ಒಟ್ಟುಗೂಡಿಸುತ್ತವೆ. ಕ್ರೀಡೆಗಳು ಮನಸ್ಸಿನ ಉಲ್ಲಾಸವನ್ನು ನೀಡುವುದರ ಜೊತೆಗೆ, ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿವೆ. ಇದು ಶಾಂತಿಯುತ ವಾತಾವರಣ ನಿರ್ಮಾಣಕ್ಕೆ ಅವಕಾಶ ಕಲ್ಪಿಸುತ್ತದೆ. ಈ ಕಾರಣಕ್ಕಾಗಿ ಕ್ರೀಡಾ ಸಂಸ್ಥೆಗಳು ಹೆಚ್ಚು ಮೂಡಿ ಬರಬೇಕಾಗಿದೆ ಎಂದು ಹೇಳಿದರು.
ಲಾಂಛನ ಅನಾವರಣಗೊಳಿಸಿದ ಸಂದರ್ಭದಲ್ಲಿ ಕೆ.ಎಂ.ಎಸ್.ಎ. ಅಧ್ಯಕ್ಷರಾದ ಆಲೀರ ರಶೀದ್, ಉಪಾಧ್ಯಕ್ಷರಾದ ಕೇಂಗೋಟಂಡ ಎಸ್. ಸೂಫಿ, ಕುಂಡಂಡ ಎ. ರಜ್ಹಾಕ್, ಪ್ರಧಾನ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್, ಕೋಶಾಧಿಕಾರಿ ಆಲೀರ ಎ. ಅಬ್ದುಲ್ ಅಜ್ಹೀಜ್ಹ್, ಕ್ರೀಡಾ ಸಂಚಾಲಕರಾದ ಕತ್ತಣಿರ ಅಬ್ದುಲ್ ರಹಿಮಾನ್ (ಅಂದಾಯಿ), ನಿರ್ದೇಶಕರಾದ ಆಲೀರ ಹುಸೈನ್, ಪ್ರಮುಖರಾದ ಚೆಪ್ಪುಡಿರ ವಿಶಾಲ್ ಅಯ್ಯಣ್ಣ ಇದ್ದರು. ನಂತರ ಕೆ.ಎಂ.ಎಸ್.ಎ. ಪ್ರಮುಖರ ತಂಡ ಮಡಿಕೇರಿ ಶಾಸಕರಾದ ಡಾ. ಮಂತರ್ ಗೌಡ ಅವರನ್ನು ಭೇಟಿ ಮಾಡಿ ಸಹಕಾರ ಬಯಸಿತು. ಇದೇ ಸಂದರ್ಭ ಶಾಸಕರು ನೂತನ ತಂಡಕ್ಕೆ ಶುಭ ಕೋರಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.