ಸೇತುವೆಯ ಕಳಪೆ ಕಾಮಗಾರಿ ಬಟಾಬಯಲು

KannadaprabhaNewsNetwork |  
Published : Oct 27, 2025, 12:00 AM IST
ಫೋಟೋ- ಬಾಂದಾರು 1ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಲಿಬೋಳ- ಚಿತ್ತಾಪುರದ ತಾಮನಾಳ ನಡುವೆ ನಿರ್ಮಾಣ ಹಂತದಲ್ಲೇ ನೆನೆಗುದಿಗೆ ಬಿದ್ದಿರುವ ಭೀಮಾ ನದಿ ಸೇತುವೆಗೆ ಅಳವಡಿಸಲಾಗಿದ್ದ ಇಂತಹ 21 ಗಡ್ಡರ್‌ಗಳು ಈಚೆಗಿನ ಪ್ರಬಹಾವದ ನೀಕಿಗೆ ಕೊಚ್ಚ ಹೋಗಿ ಮುರಿದು ಬಿದ್ದಿರುವ ನೋಟ | Kannada Prabha

ಸಾರಾಂಶ

ಇತ್ತೀಚೆಗೆ ಭೀಮಾ ನದಿ ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗಿರುವ ಜೇವರ್ಗಿ ತಾಲೂಕಿನ ನರಿಬೋಳ ಹಾಗೂ ಚಿತ್ತಾಪುರ ತಾಲೂಕಿನ ಚಾಮನೂರ ಬಳಿಯ ನಿರ್ಮಾಣ ಹಂತದಲ್ಲಿ ಅರೆಬರೆ ನಿಂತಿರುವ ಮಹತ್ವದ ಸೇತುವೆ ಕಾಮಗಾರಿಯ ಕಳಪೆತನ ಬಟಾ ಬಯಲಾಗಿದೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಇತ್ತೀಚೆಗೆ ಭೀಮಾ ನದಿ ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗಿರುವ ಜೇವರ್ಗಿ ತಾಲೂಕಿನ ನರಿಬೋಳ ಹಾಗೂ ಚಿತ್ತಾಪುರ ತಾಲೂಕಿನ ಚಾಮನೂರ ಬಳಿಯ ನಿರ್ಮಾಣ ಹಂತದಲ್ಲಿ ಅರೆಬರೆ ನಿಂತಿರುವ ಮಹತ್ವದ ಸೇತುವೆ ಕಾಮಗಾರಿಯ ಕಳಪೆತನ ಬಟಾ ಬಯಲಾಗಿದೆ.

ಇಡೀ ಕಾಮಗಾರಿ ಕಳೆದ 8 ವರ್ಷದಿಂದ ಕುಂಟುತ್ತ ಸಾಗಿತ್ತು, ಅದರಲ್ಲೂ ಹತ್ತಾರು ಕೋಟಿ ವೆಚ್ಚವಾದರೂ ಸದರಿ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದೆ ಎಂಬುದಕ್ಕೆ ಇದೀಗ ನದಿ ಪಾತ್ರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಗಡ್ಡರ್‌ಗಳು, ಸಿಮೆಂಟ್‌ ಕಾಂಕ್ರೀಟಿನ ತುಂಡುಗಳೇ ಸಾಕ್ಷಿಯಾಗಿವೆ.

ಭೀಮಾ ಪ್ರವಾಹದ ನಂತರ ನದಿ ಪಾತ್ರದಲ್ಲಿ ಅಡ್ಡಾಡಿರುವ ಹೋರಾಟಗಾರರು, ಇಂಜಿನಿಯರ್‌ಗಳು ಸೇತುವೆ ಪಿಲ್ಲರ್‌ಗಳು, ಗಡ್ಡರ್‌ಗಳು ಕೊಚ್ಚಿ ಹೋಗಿದ್ದಷ್ಟೇ ಅಲ್ಲ, ತುಂಡಾಗಿ ಬಿದ್ದಿರೋದು ಕಂಡು ಅಚ್ಚರಿಗೊಂಡಿದ್ದಾರೆ. ಇದರಿಂದಾಗಿ ಸೇತುವೆಯ ಕಳಪೆ ಕಾಮಗಾರಿಗೆ ಜೀವಂತ ಸಾಕ್ಷಿಗಳು ಸಿಕ್ಕಿವೆ.

ಸದರಿ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಹೈದ್ರಾಬಾದ್‌ ಮೂಲದ ಕೆವಿಎಂ ಪ್ರೊಜೆಕ್ಟ್‌ ಇವರು ಕಾಮಗಾರಿ ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸದೆ ಬರೀ ವಿಸ್ತರಣೆಯನ್ನೇ ಕೇಳುತ್ತ ನಿಗದಿತವಾಗಿ ಕಾಮಗಾರಿಯನ್ನೇ ಮಾಡಲಿಲ್ಲ. ಮಾಡಿರುವ ಕಾಮಗಾರಿಯೂ ಕಳಪೆ ಎಂಬುದಕ್ಕೆ ಭೀಮಾ ನೀರಿಗೆ ಇಡೀ ಸೇತುವೆಯೇ ಕೊಚ್ಚಿ ಹೋಗಿದ್ದೇ ಕನ್ನಡಿ ಎನ್ನಲಾಗುತ್ತಿದೆ.

ಅರೆಬರೆ ಮಾಡಿರುವ ಗುತ್ತಿಗೆದಾರನಿಗೆ ದಂಡ ವಿಧಿಸಿ, ಕಪ್ಪು ಪಟ್ಟಿಗೆ ಸೇರಿಸಿ ಆತನಿಗೂ ಬರೆ ಹಾಕಿರೆಂಬ ಹೋರಾಟಗಾರರು, ಸೇತುವೆ ಫಲಾನುಭವಿ ಊರವರ ಕೂಗಿಗೆ ಸ್ಪಂದಿಸಿರುವ ಹೆದ್ದಾರಿ ವಿಭಾಗದ ಇಂಜಿನಿಯರ್‌ಗಳು ಇದೀಗ ಗುತ್ತಿಗೆದಾರನಿಗೆ ದಂಡ ವಿಧಿಸುವ, ಕಪ್ಪು ಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡಿ ಬೆಳಗಾವಿಯಲ್ಲಿರುವ ರಾಜ್ಯ ಹೆದ್ದಾರಿ ವಿಭಾಗ ಪಿಡಬ್ಲ್ಯೂಡಿ ಕಾರ್ಯಪಾಲಕ ಇಂಜಿನಿಯರ್‌ ಅವರ ಕಚೇರಿಯಿಂದ ರಾಜ್ಯ ಸರ್ಕಾರಕ್ಕೆ ಹಾಗೂ ಧಾರವಾಡದಲ್ಲಿರುವ ಪಿಡಬ್ಯ್ಲೂಡಿ ಅಧೀಕ್ಷಕ ಇಂಜಿನಿಯರ್‌ ಕಚೇರಿಗೆ ಮಹತ್ವದ ಪ್ರಸ್ತಾವನೆ ರವಾನಿಸಿದ್ದಾರೆ.

ಗುತ್ತಿಗೆ ಷರತ್ತುಗಳಂತೆ 48. 41 ಕೋಟಿ ರು. ವೆಚ್ಚದ ಸದರಿ ಸೇತುವೆ ಕಾಮಗಾರಿಯನ್ನ 17. 10. 2017ಕ್ಕೆ ಆರಂಭಿಸಿ 18 ತಿಂಗಳಲ್ಲಿ ಅಂದರೆ 16. 4. 2019ರಲ್ಲಿ ಪೂರ್ಣಗೊಳಿಸಬೇಕಿತ್ತು. ಕೆವಿಎಂ ಪ್ರೊಜೆಕ್ಟ್‌ನವರು ಈ ಗುತ್ತಿಗೆ ಅವಧಿಗೆ ಕ್ಯಾರೆ ಎನ್ನದಂತೆ ಮನಸೋ ಇಚ್ಚೆ ವಿಳಂಬ ಮಾಡಿ ಕಾಮಗಾರಿ ಶುರುಮಾಡಿದ್ದಲ್ಲದೆ ಕಳಪೆ ಕಾಮಗಾರಿಯ ಹುಳುಕು- ಕೊಳಕು ಇದೀಗ ಭೀಮಾ ಪ್ರವಾಹವೇ ಬಹಿರಂಗ ಮಾಡಿರೊದರಿಂದ ಫಜೀತಿಗೆ ಸಿಲುಕಿದ್ದಾರೆ.

ಏತನ್ಮಧ್ಯೆ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸಲು 23. 10. 2023 ರಂದು ಮತ್ತೊಂದು ಸುತ್ತಿನ ಅವಕಾಶ ನೀಡಿದ್ದರೂ ಸಹ ಗುತ್ತಿಗೆದಾರರಿಂದ ಸ್ಪಂದನೆ ಕಾಣಲೇ ಇಲ್ಲ. ಅವಕಾಶವನ್ನೂ ನೀಡಿದ್ದರೂ ಅವರು ನಿರೀಕ್ಷಿತವಾಗಿ ಸ್ಪಂದಿಸಿರಲಿಲ್ಲ. ಹೀಗಾಗಿ 200 ದಿನಕ್ಕೂ ಹೆಚ್ಚಿನ ಅವಧಿ ಕೆಲಸ ಸ್ಥಗಿತಗೊಳಿಸಿದ್ದರಿಂದ ಇವರಿಗೆ ಕಾಯ್ದೆಯಂತೆ ದಂಡ ವಿಧಿಸಬಹುದಾಗಿದೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸದರಿ ಕಾಮಗಾರಿಯಲ್ಲಿ ಪೂರ್ಣಪ್ರಮಾಣದಲ್ಲಿ ಗಡ್ಡರ್‌ ಕಾಮಗಾರಿ ಗುತ್ತಿಗೆದಾರ ಮಾಡಿಲ್ಲವೆಂಬುದು ಸಾಬೀತಾಗಿದೆ. ಹೀಗಾಗಿ ಈಗಾಗಲೇ ಗುತ್ತಿಗೆದಾರನಿಗೆ ಪಾವತಿಯಾಗಿರುವ ಮೊತ್ತದಲ್ಲೇ 2. 52 ಕೋಟಿ ರು. ಹಣ ವಸೂಲು ಮಾಡಬೇಕಿದೆ ಎಂದೂ ಪತ್ರದಲ್ಲಿ ತಿಳಿಸಲಾಗಿದೆ. ಕರಾರಿನಂತೆ ಸದರಿ ಗುತ್ತಿಗೆದಾರ ಇನ್ನೂ 19.53 ಕೋಟಿ ರು. ಕಾಮಗಾರಿ ನಿರ್ವಹಿಸಬೇಕಿದೆ. ಇದಲ್ಲದೆ ನಿಯಮದಂತೆ ಸದರಿ ಗುತ್ತಿಗೆದಾರನಿಂದ ವಿವಿಧ ಅರೆಬರೆ ಕೆಲಸಗಳು, ಕರಾರಿನ ಹಿನ್ನೆಲೆಯಲ್ಲಿ ಲೆಕ್ಕ ಹಾಕಿ 6.43 ಕೋಟಿ ರು. ಮೊತ್ತ ಗುತ್ತಿಗೆದಾರನಿಂದ ಆಕರಿಸಬಹುದಾಗಿದೆ.

ಕೆವಿಎಂ ಪ್ರೊಜೆಕ್ಟ್‌ನ ಈ ಗುತ್ತಿಗೆ ರದ್ದುಪಡಿಸಿ ಬಾಕಿ ಸೇತುವೆ ಕಾಮಗಾರಿಗೆ ಹೊಸ ಗುತ್ತಿಗೆ ಆಹ್ವಾನಿಸಬಹುದಾಗಿದೆ ಎಂದು ಕಲಬುರಗಿಯಲ್ಲಿನ ಮಾಹಿತಿಗಳೊಂದಿಗೆ ಮುಖ್ಯ ಇಂಜಿನಿಯರ್‌ ರಾಷ್ಟ್ರೀಯ ಹೆದ್ದಾರಿ ಉತ್ತರ ವಲಯ ಬೆಳಗಾವಿ ಇವರು ಧಾರವಾಡದಲ್ಲಿರವ ರಾಷ್ಟ್ರೀಯ ಹೆದ್ದಾರಿ ವೃತ್ತದ ಅಧೀಕ್ಷಕ ಇಂಜಿನಿಯರ್‌ಗೆ ಪತ್ರ ಬರೆದಿದ್ದಾರೆ.

ಗುತ್ತಿಗೆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ

ಸೇತುವೆಯ ಅರೆಬರೆ ಕೆಲಸ ಮಾಡಿ ಕಾಮಗಾರಿ ಬಿಲ್ ಪಡೆದ ಗುತ್ತಿಗೆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಕೂಡಲೇ ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ ಎಸ್. ಪಾಟೀಲ ನರಿಬೋಳ ಹಾಗೂ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಕಾರ್ಯನಿರ್ವಾಹಕ ಅಭಿಯಂತರರಿಗೆ ಒತ್ತಾಯಿಸಿದ್ದಾರೆ.

ದೂರು ಹಿನ್ನೆಲೆ ಸ್ಥಳಕ್ಕೆ ಬಂದ ಕಾರ್ಯನಿರ್ವಾಹಕ ಅಭಿಯಂತರರು ಈಗಾಗಲೇ ಗುತ್ತಿಗೆದಾರನ ಅಗ್ರಿಮೆಂಟ್ ರದ್ದುಪಡಿಸಿ, ಸುಮಾರು 6 ಕೋಟಿ ರುಪಾಯಿ ದಂಡ ಹಾಕಿ ಕಪ್ಪುಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಈ ಕಾಮಗಾರಿ ಪ್ರಾರಂಭದ ಕುರಿತು 15 ದಿನದಲ್ಲಿ ತಿಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ರಸ್ತೆಗಾಗಿ ಜಮೀನು ನೀಡಿರುವ ರೈತರಿಗೆ ಶೀಘ್ರ ಹಣ ಬಿಡುಗಡೆ ಮಾಡಬೇಕು. 15ದಿನದ ಸಮಯಾವಕಾಶ ನೀಡುತ್ತಿದ್ದು, ಒಂದು ವೇಳೆ ಮಾತು ತಪ್ಪಿದರೆ ಹೋರಾಟ ಮಾಡುವುದು ಅನಿವಾರ್ಯ ಎಂದು ಹೋರಾಟಗಾರ ಎಂಎಸ್‌ ಪಾಟೀಲ್‌ ನರಿಬೋಳ, ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರವಣ ಕುಮಾರ ನಾಯಕ ಎಚ್ಚರಿಸಿದ್ದಾರೆ.

PREV

Recommended Stories

ಮೋಂಥಾ ಚಂಡಮಾರುತ ಅಬ್ಬರ : ಹವಾಮಾನ ಇಲಾಖೆ ಕಟ್ಟೆಚ್ಚರ
ಕೆಆರ್‌ಎಸ್‌ ವರ್ಷದಲ್ಲಿ 3ನೇ ಬಾರಿ ಭರ್ತಿ-ಬೆಂಗಳೂರಿಗಿಲ್ಲ ಜಲ ಸಂಕಷ್ಟ: ಡಿಸಿಎಂ