ಮಂಡ್ಯ ಜಿಲ್ಲೆಯ ಹಲವು ಶಾಲೆಗಳಲ್ಲಿ ಕಳಪೆ ಆಹಾರ ಪೂರೈಕೆ

KannadaprabhaNewsNetwork |  
Published : Dec 21, 2025, 02:30 AM IST
20ಕೆಎಂಎನ್‌ಡಿ-5ಮದ್ದೂರಿನ ಗುರುಭವನದಲ್ಲಿ ನಡೆದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅಡುಗೆ ಸಿಬ್ಬಂದಿಗಳ ತರಬೇತಿ ಕಾರ್ಯಗಾರ ಉದ್ದೇಶಿಸಿ ಜಿಪಂ ಸಿಇಓ ಕೆ.ಆರ್‌.ನಂದಿನಿ ಮಾತನಾಡಿದರು. | Kannada Prabha

ಸಾರಾಂಶ

ಶಾಲೆಗಳಿಗೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಪೂರೈಸುವಂತೆ ಆಹಾರ ಪೂರೈಕೆ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಒಂದು ವೇಳೆ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡಿರುವುದು ಕಂಡುಬಂದಲ್ಲಿ ಅಂತಹ ಸಂಸ್ಥೆಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಮಧ್ಯಾಹ್ನ ಬಿಸಿಯೂಟ ಯೋಜನೆಯ ಶಿಕ್ಷಣಾಧಿಕಾರಿಗೆ ಸೂಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಬಿಸಿಯೂಟದಲ್ಲಿ ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಇಂತಹ ಪ್ರಕರಣಗಳು ಮರುಕಳಿಸಿದಲ್ಲಿ ಶಾಲೆಯ ಎಲ್ಲಾ ಹಂತದ ಸಿಬ್ಬಂದಿ ಮತ್ತು ನೌಕರರ ಮೇಲೂ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಎಚ್ಚರಿಕೆ ನೀಡಿದರು.

ಶನಿವಾರ ಮದ್ದೂರಿನ ಗುರುಭವನದಲ್ಲಿ ನಡೆದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅಡುಗೆ ಸಿಬ್ಬಂದಿ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳ ಬೌದ್ದಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗುವಂತೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸಲು ಅಡುಗೆ ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ತಮ್ಮ ಸ್ವಂತ ಮಕ್ಕಳಿಗೆ ಆಹಾರ ಸಿದ್ಧಪಡಿಸುವ ರೀತಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಸಿದ್ಧಪಡಿಸಿ ನೀಡುವಂತೆ ಸೂಚಿಸಿದರು.

ಎಲ್ಲಾ ಹಂತದ ಸಿಬ್ಬಂದಿ ಮೇಲೆ ಕ್ರಮ:

ಸರ್ಕಾರದ ನಿರ್ದೇಶನದಂತೆ ಶಾಲೆಗಳಲ್ಲಿ ಪ್ರತಿ ದಿನ ಆಹಾರದ ಗುಣಮಟ್ಟ ಖಚಿತಪಡಿಸಿಕೊಂಡು ನಂತರವೇ ವಿದ್ಯಾರ್ಥಿಗಳಿಗೆ ನೀಡುವಂತೆ ತಿಳಿಸಿದ್ದರೂ, ಹಲವಾರು ಕಡೆಗಳಲ್ಲಿ ಕಳಪೆ ಆಹಾರ ವಿತರಣೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಇಂತಹ ಪ್ರಕರಣಗಳು ಮರುಕಳಿಸಿದಲ್ಲಿ ಆ ಶಾಲೆಯ ಎಲ್ಲಾ ಹಂತದ ಸಿಬ್ಬಂದಿ ಮತ್ತು ನೌಕರರ ಮೇಲೂ ಶಿಸ್ತು ಕ್ರಮ ತೆಗೆದುಕೊಳ್ಳಲು ಡಿಡಿಪಿಐ ಅವರಿಗೆ ಸೂಚಿಸಲಾಗಿದೆ ಎಂದರು.

ಈಗಾಗಲೇ ಶಾಲಾ ಶಿಕ್ಷಣ ಇಲಾಖೆ ಮತ್ತು ಮಧ್ಯಾಹ್ನ ಬಿಸಿಯೂಟ ಯೋಜನೆಯ ಅಧಿಕಾರಿಗಳ ಸಭೆ ನಡೆಸಿ ಉತ್ತಮ ಗುಣಮಟ್ಟದ ಆಹಾರ ಸಾಮಗ್ರಿಗಳ ಪೂರೈಕೆ, ಆಹಾರ ಸಾಮಗ್ರಿಗಳ ಸುರಕ್ಷತೆ, ವಿದ್ಯಾರ್ಥಿಗಳಿಗೆ ಶುಚಿ ಮತ್ತು ರುಚಿಯಾದ ಆಹಾರ ವಿತರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚಿಸಲಾಗಿತ್ತು. ಹಲವಾರು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲೂ ನ್ಯೂನ್ಯತೆಗಳನ್ನು ಗುರುತಿಸಿದ್ದರೂ ಹಲವು ಶಾಲೆಗಳಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದರು.

ಸಂಸ್ಥೆಗಳ ವಿರುದ್ಧ ಕ್ರಮ:

ಶಾಲೆಗಳಿಗೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಪೂರೈಸುವಂತೆ ಆಹಾರ ಪೂರೈಕೆ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಒಂದು ವೇಳೆ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡಿರುವುದು ಕಂಡುಬಂದಲ್ಲಿ ಅಂತಹ ಸಂಸ್ಥೆಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಮಧ್ಯಾಹ್ನ ಬಿಸಿಯೂಟ ಯೋಜನೆಯ ಶಿಕ್ಷಣಾಧಿಕಾರಿಗೆ ಸೂಚಿಸಲಾಗಿದೆ ಎಂದರು.

ಅಡುಗೆ ಸಿಬ್ಬಂದಿ ಜವಾಬ್ದಾರಿ:

ಬಿಸಿಯೂಟ ಯೋಜನೆಯಡಿ ಸರಬರಾಜಾಗುತ್ತಿರುವ ಆಹಾರ ಸಾಮಗ್ರಿಗಳು ಹಾಳಾಗದಂತೆ ಸಂಗ್ರಹಿಸಿಡುವುದು ಅಡುಗೆ ಸಿಬ್ಬಂದಿ ಪ್ರಮುಖ ಜವಾಬ್ದಾರಿ. ಅವುಗಳನ್ನು ಒಣಗಿಸಿ ಆಹಾರ ಪದಾರ್ಥ ಸಂಗ್ರಹಿಸುವ ಪ್ಲಾಸ್ಟಿಕ್ ಅಥವಾ ಸ್ಟೀಲ್ ಪಾತ್ರೆಗಳಲ್ಲಿ ಸಂಗ್ರಹಿಸಬೇಕು. ಅವುಗಳ ಮುಚ್ಚಳಗಳು ಯಾವಾಗಲೂ ಬಿಗಿಯಾಗಿರಬೇಕು ಮತ್ತು ಮುಚ್ಚಿರಬೇಕು ಎಂದು ಸಲಹೆ ನೀಡಿದರು.

ಸಹಾಯವಾಣಿ ಸ್ಥಾಪನೆ:

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ನೀಡಲಾಗುತ್ತಿರುವ ಬಿಸಿಯೂಟದ ಗುಣಮಟ್ಟ, ಆಹಾರ ಸಾಮಾಗ್ರಿಗಳ ಗುಣಮಟ್ಟ ಸೇರಿದಂತೆ ಇತರೆ ಸಮಸ್ಯೆಗಳು ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆ ೯೪೮೦೮೭೨೦೦೮ ಗೆ ಕರೆ ಮಾಡಿ ದೂರು ನೀಡಬಹುದು. ಈ ನಂಬರ್‌ನ್ನು ಅಡುಗೆ ಮನೆ, ಶಾಲೆಯ ಸೂಚನಾ ಫಲಕ ಮತ್ತು ಇತರೆ ಸ್ಥಳಗಳಲ್ಲಿ ಪ್ರದರ್ಶನ ಮಾಡುವಂತೆ ಸಿಇಒ ಅವರು ತಿಳಿಸಿದರು.

ಶಾಲೆಗೆ ಸರಬರಾಜು ಮಾಡುವ ಆಹಾರ ಸಾಮಗ್ರಿಗಳ ಗುಣಮಟ್ಟ ಸರಿಯಾಗಿಲ್ಲದಿದ್ದರೆ ಶಾಲೆಯ ಮುಖ್ಯ ಶಿಕ್ಷಕರಿಗೆ ಮಾಹಿತಿ ನೀಡಬೇಕು. ಅವರು ಕ್ರಮ ತೆಗೆದುಕೊಳ್ಳದಿದ್ದಲ್ಲಿ ಆ ತಾಲೂಕಿನ ಸಹಾಯಕ ನಿರ್ದೇಶಕರಿಗೆ ತಿಳಿಸಬೇಕು. ಆಗಲೂ ಸೂಕ್ತ ಕ್ರಮ ಆಗದಿದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬೇಕು ಎಂದರು.ಕನ್ನಡಪ್ರಭ ವರದಿಗೆ ಸಿಇಒ ಸ್ಪಂದನೆ

ನಗರದ ಗುತ್ತಲಿನಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಗೆ ನೀಡಲಾದ ಬಿಸಿಯೂಟದಲ್ಲಿ ಹುಳುಗಳಿರುವ ಬಗ್ಗೆ ‘ಶಾಲಾ ಮಕ್ಕಳ ಬಿಸಿಯೂಟದಲ್ಲಿ ಹುಳುಗಳು’ ಎಂಬ ಶೀರ್ಷಿಕೆಯಡಿ ಶನಿವಾರ ವರದಿ ಪ್ರಕಟಿಸಿತ್ತು. ವರದಿಗೆ ತಕ್ಷಣವೇ ಸ್ಪಂದಿಸಿರುವ ಸಿಇಒ ಅವರು, ಅಕ್ಷರ ದಾಸೋಹ ಯೋಜನೆಯ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಶಾಲೆಗೆ ಕಳುಹಿಸಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದರು. ಸಿಇಒ ಆದೇಶದನ್ವಯ ಶಾಲೆಗೆ ತೆರಳಿದ ಅಧಿಕಾರಿಗಳು ಹುಳುಗಳು ತುಂಬಿದ್ದ ಆಹಾರ ಸಾಮಗ್ರಿಗಳನ್ನು ತೆಗೆದು ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ನೀಡಿದರು. ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ವಿಚಾರಣೆ ನಡೆಸಿ ಮತ್ತೆ ಪ್ರಕರಣ ಮರುಕಳಿಸಿದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ