ಮಂಕಾದ ಹಿಂಗಾರು, ಕೇವಲ ಶೇ.35ರಷ್ಟು ಮಾತ್ರ ಬಿತ್ತನೆ

KannadaprabhaNewsNetwork | Published : Nov 7, 2024 12:00 AM

ಸಾರಾಂಶ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿತ್ತು, ಅಷ್ಟೇ ಪ್ರಮಾಣದಲ್ಲಿ ಶೇ.94 ರಷ್ಟು ಬಿತ್ತನೆ ಸಹ ಮಾಡಲಾಗಿತ್ತು. ಆದರೆ ಹಿಂಗಾರು ಹಂಗಾಮಿನಲ್ಲಿ ಆ ಪರಿಸ್ಥಿತಿ ನಿರ್ಮಾಣ ಗೊಂಡಿಲ್ಲ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರುನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಮಳೆ, ವಾತಾವರಣದಲ್ಲಿ ಉಂಟಾಗುತ್ತಿರುವ ಏರುಪೇರಿನಿಂದಾಗಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮು ಮಂಕಾಗಿದ್ದು, ಪರಿಣಾಮವಾಗಿ ಇಲ್ಲಿವರೆಗೂ ಕೇವಲ ಶೇ.35 ರಷ್ಟು ಮಾತ್ರ ಬಿತ್ತನೆಯಾಗಿದೆ, ಉಳಿದ ಕಡಿಮೆ ಅವಧಿಯಲ್ಲಿ ಹಂಗಾಮಿನ ಒಟ್ಟಾರೆ ಬಿತ್ತನೆ ಗುರಿಯ ಸಾಧನೆ ಆಗಲಿದೆಯೇ ಎನ್ನುವ ಆತಂಕ ಶುರುವಾಗಿದೆ.ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿತ್ತು, ಅಷ್ಟೇ ಪ್ರಮಾಣದಲ್ಲಿ ಶೇ.94 ರಷ್ಟು ಬಿತ್ತನೆ ಸಹ ಮಾಡಲಾಗಿತ್ತು. ಆದರೆ ಹಿಂಗಾರು ಹಂಗಾಮಿನಲ್ಲಿ ಆ ಪರಿಸ್ಥಿತಿ ನಿರ್ಮಾಣ ಗೊಂಡಿಲ್ಲ, ಈ ಸೀಜನ್‌ ಆರಂಭಗೊಂಡು ಎರಡು ತಿಂಗಳು ಸರಿಯುತ್ತಿದ್ದರು ಸಹ, ಇಲ್ಲಿವರೆಗೂ ಕೇವಲ ಶೇ.35 ರಷ್ಟು ಮಾತ್ರ ಬಿತ್ತನೆ ಕಾರ್ಯವಾಗಿದ್ದು, ಮುಂದಿನ ದಿನಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಗುರಿ ಮುಟ್ಟುವ ಪ್ರಯತ್ನಗಳು ಆಶಾದಾಯಕವಾಗಿ ಕಂಡುಬರುತ್ತಿಲ್ಲ.ಗುರಿ-ಸಾಧನೆ,ಬಿತ್ತನೆ, ರಸಗೊಬ್ಬರ ದಾಸ್ತಾನು:

ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ (ಅ.25 ವರೆಗೆ) ಜಿಲ್ಲೆಯ ಖುಷ್ಕಿ ಹಾಗೂ ನೀರಾವರಿ ಸೇರಿಕೊಂಡು ಒಟ್ಟಾರೆ 1,27,128 ಹೆಕ್ಟೇರ್‌ ಗುರಿಯಲ್ಲಿ ಕೇವಲ 43,846 ಹೆಕ್ಟರ್ (ಶೇ.35) ಪ್ರದೇಶದಲ್ಲಿ ಬಿತ್ತನೆ ಯಾಗಿದೆ. ರಾಯಚೂರು ತಾಲೂಕಿನಲ್ಲಿ 360 ಹೆಕ್ಟೆರ್‌ (ಶೇ.6), ಮಾನ್ವಿಯಲ್ಲಿ 1740 ಹೆಕ್ಟರ್‌ (ಶೇ.14) ಸಿರವಾರದಲ್ಲಿ 1325 ಹೆಕ್ಟರ್ (ಶೇ.19) ದೇವದುರ್ಗದಲ್ಲಿ 1058 (ಶೇ.9) ಲಿಂಗಸುಗೂರಿನಲ್ಲಿ 17,961 ಹೆಕ್ಟರ್‌ (ಶೇ.51) ಮಸ್ಕಿಯಲ್ಲಿ 12,564 ಹೆಕ್ಟರ್‌ (ಶೇ.41) ಮತ್ತು ಸಿಂಧನೂರಿನಲ್ಲಿ 8838 ಹೆಕ್ಟರ್‌ನಲ್ಲಿ (ಶೇ.41) ರಷ್ಟು ಬಿತ್ತನೆಯಾಗಿದೆ.ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಹಿಂಗಾರು ಜೋಳ, ಮುಸುಕಿನ ಜೋಳ, ಹೈ ಸಜ್ಜೆ, ನೆಲಕಡಲೆ, ಶೇಂಗಾ, ಸೂರ್ಯಕಾಂತಿ ಮತ್ತು ಹತ್ತಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಪ್ರಸಕ್ತ ಹಿಂಗಾರಿನಲ್ಲಿ ಜಿಲ್ಲೆಯಲ್ಲಿ ಒಟ್ಟು 4566 ಕ್ವಿಂಟಾಲ್‌ ಗಳಷ್ಟು ಬಿತ್ತನೆ ಬೀಜವನ್ನು ಸಂಗ್ರಹಿಸಿದ್ದು, ಇದರಲ್ಲಿ 4408 ಕ್ವಿಂಟಾಲ್‌ ಕಡಲೆ, 34 ಕ್ವಿಂಟಾಲ್‌ ಜೋಳ, 123 ಕ್ವಿಂಟಾಲ್‌ ನೆಲಗಡೆ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ರೈತರಿಗೆ ವಿರಣೆ ಮಾಡಲಾಗುತ್ತಿದೆ. ಇದರ ಜೊತೆಗೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ, ರಾಯಚೂರು ಹಾಗೂ ಸಹಕಾರಿ ಸಂಘಗಳಲ್ಲಿ 22 ಸಾವಿರ ಮೆಟ್ರಿಕ್‌ ಟನ್‌ ಹಾಗೂ ಖಾಸಗಿ ಮಾರಾಟಗಾರರಲ್ಲಿ 24 ಸಾವಿರ ಮೆಟ್ರಿಕ್‌ ಟನ್‌ ಸೇರಿದಂತೆ ಒಟ್ಟು 2,52,103 ಮೆಟ್ರಿಕ್‌ ಟನ್‌ ರಸಗೊಬ್ಬರ ಇಲ್ಲಿವರೆಗೆ ಜಿಲ್ಲೆಯಲ್ಲಿ ಪೂರೈಸಲಾಗಿದ್ದು, 2021 ಮೆಟ್ರಿಕ್‌ ಟನ್‌ ಹಾಗೂ ಖಾಸಗಿ ಮಳಿಗೆಗಳಲ್ಲಿ 73 ಸಾವಿರ ಮೆಟ್ರಿಕ್‌ ಟನ್‌ ಸೇರಿ ಒಟ್ಟು 75 ಸಾವಿರ ಮೆಟ್ರಿಕ್‌ ಟನ್‌ನಷ್ಟು ಕಾಪು ದಾಸ್ತಾನು ಮಾಡಲಾಗಿದೆ.ಮಳೆ ಕೊರತೆಯು ಮುಖ್ಯ ಕಾರಣ:

ಹಿಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಪ್ರದೇಶದ ರೈತರು ಹಿಂಗಾರು ಮಳೆಯ ಆಧಾರದ ಮೇಲೆಯೇ ಕೃಷಿ ಮಾಡುತ್ತಿದ್ದು, ಜಿಲ್ಲೆಯಲ್ಲಿ ರಾಯಚೂರು, ಮಾನ್ವಿ, ಸಿರವಾರ ಮತ್ತು ದೇವದುರ್ಗ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖುಷ್ಕಿ ಭೂಮಿ ಇರುವುದರಿಂದ ಹಿಂಗಾರು ಬಿತ್ತನೆ ಹಿನ್ನಡೆಗೆ ಮಳೆಯೂ ಪ್ರಮುಖ ಕಾರಣವಾಗಿದೆ. ಇಲ್ಲಿತನಕ ಹಿಂಗಾರು ಹಂಗಾಮಿನಲ್ಲಿ ಶೇ.45 ರಷ್ಟು ಮಳೆಯ ಕೊರತೆ ಎದುರಾಗಿದೆ. ಕಳೆದ ಒಂದು ತಿಂಗಳಿನಲ್ಲಿ ವಾಡಿಕೆ ರೀತ್ಯ 123 ಮಿಮೀ ಮಳೆಯಲ್ಲಿ ಕೇವಲ 69 ಮಿಮೀ ಮಳೆಯಾಗಿದ್ದು ಶೇ.45 ರಷ್ಟು ಮಳೆಯ ಕೊರತೆಯು ಎದುರಾಗಿದೆ. ಕೆಲವೆಡೆ ಅಕಾಲಿಕ ಮಳೆಯಿಂದಾಗಿಯೂ ಸಹ ಬಿತ್ತನೆಯಲ್ಲಿ ಏರುಪೇರಾಗಿದೆ.ರಾಯಚೂರು ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಸಾಧನೆಯಲ್ಲಿ ಸಾಕಷ್ಟು ಹಿನ್ನಡೆಯಾಗಿದ್ದು,ನಿಗದಿತ ಗುರಿಯ ಬಿತ್ತನೆಗೆ ಯಾವುದೇ ರೀತಿಯ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಸಮಸ್ಯೆಯಾಗದಂತೆ ಕೃಷಿ ಇಲಾಖೆಯಿಂದ ಅಗತ್ಯಕ್ರಮ ವಹಿಸಲಾಗಿದೆ. ಕಡಲೆ ಇತರೆ ಬೆಳೆಗಳ ಬಿತ್ತನೆಗೆ ಇನ್ನು ಕಾಲವಕಾಶವಿದ್ದು, ಸಾಧನೆ ಪ್ರಮಾಣವು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಪ್ರಕಾಶ ಹೇಳಿದರು.

ಸಕಾಲಕ್ಕೆ ಮಳೆಯಾಗದ ಕಾರಣಕ್ಕೆ ರೈತರು ಬಿತ್ತನೆ ಕಾರ್ಯವನ್ನು ನಿಧಾನವಾಗಿ ಆರಂಭಿಸಿದ್ದಾರೆ. ಅಕಾಲಿಕ ಮಳೆ ಸುರಿದ ಕಾರಣಕ್ಕೆ ಈಗಾಗಲೇ ಬಿತ್ತದ ಹತ್ತಿ, ಕಡಲೆ, ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿದ್ದರಿಂದ ಮತ್ತೆ ಬಿತ್ತನೆಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ರೈತ ಆಂಜನೇಯ್ಯ ಬಿಜ್ಜನಗೇರಾ ಹೇಳಿದರು.

Share this article