ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಶ್ರೀ ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠಕ್ಕೆ ಶ್ರವಣ ಬೆಳಗೊಳದ ಜಗದ್ಗುರು ಶ್ರೀಮದ್ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಪೀಠಾರೋಹಣದ ನಂತರ ಇದೇ ಮೊದಲ ಬಾರಿಗೆ ಭಾನುವಾರ ಆಗಮಿಸಿದ್ದು, ಬಸ್ತಿಮಠ ಪೀಠಾಧಿಪತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.ನಂತರ ಭಗವಾನ್ ಶ್ರೀ 1008 ಚಂದ್ರಪ್ರಭ ತೀರ್ಥಂಕರ ಬಸದಿ ಹಾಗೂ ಮಹಾ ಮಾತೆ ಶ್ರೀ ಜ್ವಾಲಾಮಾಲಿನಿ ದೇವಿ ಬಸದಿಯಲ್ಲಿ ಶ್ರಾವಣ ಮಾಸದ 3ನೇ ಭಾನುವಾರದ ವಿಶೇಷ ಪೂಜೆ ನಡೆಯಿತು.
ಶ್ರವಣ ಬೆಳಗೊಳದ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಆಶೀರ್ವಾಚನ ನೀಡಿ, ವಿಶ್ವಕ್ಕೆ ಶಾಂತಿ ಸಾರಿದ ಬಾಹುಬಲಿಯ ತ್ಯಾಗ, ಅಹಿಂಸೆ, ಶಾಂತಿ ಇಂದು ವಿಶ್ವಕ್ಕೆ ಅತ್ಯಗತ್ಯವಾಗಿ ಬೇಕಾಗಿದೆ. ಜೈನ ಧರ್ಮದ ಸಾರವಾದ ಅಹಿಂಸೆ ತತ್ವವನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಇದೇ ಸಂದೇಶವನ್ನು ಜೈನ ಧರ್ಮದ 24 ತೀರ್ಥಂಕರರು ಸಾರಿಕೊಂಡು ಬಂದಿರುತ್ತಾರೆ ಎಂದರು.ಜೈನ ಧರ್ಮವು ಅನಾದಿಕಾಲದಿಂದಲೂ ಅಹಿಂಸೆಯನ್ನು ಅಸ್ಟ್ರವಾಗಿಟ್ಟುಕೊಂಡಿರುವುದೇ ಇಂದಿಗೂ
ವಿಶೇಷವಾಗಿದೆ. ಇಂದು ಜಗತ್ತಿಗೆ ಬೇಕಾಗಿರುವುದು ಭಗವಾನ್ ಬಾಹುಬಲಿಯ ಹಾಗೂ 24 ತೀರ್ಥಂಕರರ ಈ ಸಂದೇಶವೇ ಹೊರತು ಬೇರೇನು ಆಗಿರಲಾರದು. ಈ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸುವುದರಿಂದ ಜಗತ್ತಿನಲ್ಲಿ ಕಲಹಗಳಿಲ್ಲದೆ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯಿಂದ ಬಾಳಬಹುದಾಗಿದೆ ಎಂದರು.ಪಾವನ ಸಾನ್ನಿಧ್ಯ ವಹಿಸಿದ್ದ ಬಸ್ತಿಮಠದ ಪೀಠಾಧಿಪತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿಗಳು ಆಶೀರ್ವಾಚನ ನೀಡಿ, ಜೈನ ಶ್ರಾವಕರ ಕರ್ತವ್ಯಗಳು, ಆಚರಣೆಗಳು ಇತರರಿಗೆ ಪ್ರೇರಣೆಯಾಗಬೇಕಾಗಿದೆ. ಏಕೆಂದರೆ ಜೈನ ಸಿದ್ಧಾಂತವು ಜೀನತತ್ವ ಅಂದರೆ ಜಯಿಸು ಎಂಬುದಾಗಿದ್ದು ಮೊದಲು ನಮ್ಮನ್ನು ನಾವು ಗೆಲ್ಲಬೇಕು ಎಂದರು.
ನಂತರ ಜ್ವಾಲಾಮಾಲಿನಿ ಜೈನ್ ಮಹಿಳಾ ಮಂಡಳಿಯಿಂದ ಶ್ರೀ ಜ್ವಾಲಾಮಾಲಿನಿ ದೇವಿಗೆ ಅಭಿಷೇಕ, ವಿಶೇಷ ಆರಾಧನೆ, ಅಷ್ಟಾವಧಾನ ಸೇವೆ, ಶೋಡೋಪಚಾರ ಸೇವೆ, ಉಯ್ಯಾಲೆ ಸೇವೆ ಹಮ್ಮಿಕೊಳ್ಳಲಾಗಿತ್ತು. ಹೊರನಾಡಿನ ಗಾನ ವಿಶಾರದೆ ಜಯಶ್ರೀ ಧರಣೇಂದ್ರ ಅವರಿಂದ ಸಂಗೀತ ಸೇವೆ ನಡೆಯಿತು.ಲಕ್ಷ್ಮೀಸೇನಭಟ್ಟಾರಕಸ್ವಾಮೀಜಿಗಳು ಪೀಠಾರೋಹಣಗೊಂಡು 11 ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾನುವಾರ ವರ್ಧಂತ್ಯುತ್ಸವವನ್ನು ಆಚರಿಸಲಾಯಿತು.